
ನವದೆಹಲಿ, ಏಪ್ರಿಲ್ 11: ವಿಶ್ವದ ಅತಿ ದೊಡ್ಡ ಮಾರುಕಟ್ಟೆ ಮೌಲ್ಯದ ವಿಮಾನ ಸಂಸ್ಥೆಯಾದ ಇಂಡಿಗೋದ ಮಾಲೀಕರಾದ ಇಂಟರ್ಗ್ಲೋಬ್ (Interglobe) ಹಾಗೂ ಫ್ರಾನ್ಸ್ ಮೂಲದ ಹಾಸ್ಪಿಟಾಲಿಟಿ ಕಂಪನಿಯಾದ ಅಕ್ಕೋರ್ನ ಭಾರತೀಯ ಘಟಕ (Accor India), ಈ ಎರಡು ಸಂಸ್ಥೆಗಳು ಸೇರಿ ಭಾರತದಲ್ಲಿ ಬೃಹತ್ ಆದ ಹಾಸ್ಪಿಟಾಲಿಟಿ (ಹೋಟೆಲ್ ಇತ್ಯಾದಿಯ ಆತಿಥ್ಯೋದ್ಯಮ) ಪ್ಲಾಟ್ಫಾರ್ಮ್ ನಿರ್ಮಿಸಲಿವೆ. ಈ ಎರಡು ಸಂಸ್ಥೆಗಳು ಸೇರಿ 2030ರೊಳಗೆ ಅಕ್ಕೋರ್ ಬ್ರ್ಯಾಂಡ್ ಅಡಿಯಲ್ಲಿ 300 ಹೋಟೆಲ್ಗಳನ್ನು ನಿರ್ವಹಿಸುವ ಗುರಿ ಹೊಂದಿವೆ.
ಅಕ್ಕೋರ್ ಮತ್ತು ಇಂಟರ್ಗ್ಲೋಬ್ ಜೊತೆಗಾರಿಕೆಯು ಭಾರತದಲ್ಲಿ ಮೂರನೇ ಅತಿದೊಡ್ಡ ಹಾಸ್ಪಿಟಾಲಿಟಿ ಪ್ಲಾಟ್ಫಾರ್ಮ್ಗೆ ಎಡೆ ಮಾಡಿಕೊಡಲಿದೆ. ಅಕ್ಕೋರ್ ಇಂಡಿಯಾ ಭಾರತದಲ್ಲಿ ಮತ್ತಷ್ಟು ಭದ್ರವಾಗಿ ನಿಲ್ಲಲಿದೆ. ಇಂಟರ್ಗ್ಲೋಬ್ನ ಅಸೆಟ್ಗಳು ಅಕ್ಕೋರ್ ಬ್ರ್ಯಾಂಡ್ ಬೆಳೆಯಲು ಸಹಾಯಕವಾಗಲಿವೆ.
ಇದನ್ನೂ ಓದಿ: ಇಲಾನ್ಸ್ ಮಸ್ಕ್ಗೆ ನೀರಿಳಿಸಿದ್ದ ಬಿವೈಡಿ ಕಂಪನಿ ಭಾರತಕ್ಕೆ ಬರಲು ಸಜ್ಜು; ಹೈದರಾಬಾದ್ನಲ್ಲಿ ಫ್ಯಾಕ್ಟರಿ ಸ್ಥಾಪನೆ ಸಾಧ್ಯತೆ
ಅಕ್ಕೋರ್ ಇಂಡಿಯಾ ಭಾರತದಲ್ಲಿ ಸದ್ಯ 71 ಹೋಟೆಲ್ಗಳನ್ನು ನಿರ್ವಹಿಸುತ್ತಿದೆ. ಸದ್ಯದಲ್ಲೇ ಮತ್ತಷ್ಟು 40 ಹೋಟೆಲ್ಗಳು ಸೇರ್ಪಡೆಯಾಗಲಿವೆ. 2030ರೊಳಗೆ ಈ ಸಂಖ್ಯೆ 300 ಆಗಬೇಕೆಂಬುದು ಕಂಪನಿಯ ಗುರಿಯಾಗಿದೆ.
ಅಗ್ಗದ ದರದ ಹೋಟೆಲ್ ಸೇವೆ ನೀಡುವ ಟ್ರೀಬೋ (Treebo) ಕಂಪನಿಯಲ್ಲಿ ಅಕ್ಕೋರ್ ಮತ್ತು ಇಂಟರ್ಗ್ಲೋಬ್ ಹೂಡಿಕೆ ಮಾಡಲಿವೆ. ಈ ಮೂಲಕ ಇವು ಟ್ರೀಬೋದ ಅತಿದೊಡ್ಡ ಷೇರುದಾರರಾಗಲು ಮುಂದಾಗಿವೆ.
ಟ್ರೀಬೋ ಸಂಸ್ಥೆಯು ದೇಶದ 120 ನಗರಗಳಲ್ಲಿ 800 ಹೋಟೆಲ್ಗಳನ್ನು ನಿರ್ವಹಿಸುತ್ತದೆ. ಈ ಮಹಾ ಜಾಲದ ನೆರವಿನಿಂದ ಅಕ್ಕೋರ್ನ ಇಬಿಸ್ (Ibis) ಮತ್ತು ಮರ್ಕ್ಯೂರೆ (Mercure) ಬ್ರ್ಯಾಂಡ್ಗಳ ಹೋಟೆಲ್ಗಳನ್ನು ವಿಸ್ತರಿಸುವ ಉದ್ದೇಶ ಇದೆ.
ಇದನ್ನೂ ಓದಿ: ಗೂಗಲ್ನ ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್ಗಳಿಂದ ನೂರಾರು ಉದ್ಯೋಗಿಗಳ ಲೇಆಫ್
ಟ್ರೀಬೋ ಈಗಾಗಲೇ ಭಾರತದಲ್ಲಿ ಹತ್ತು ಹೊಸ ಮರ್ಕ್ಯುರೆ ಹೋಟೆಲ್ಗಳಿಗೆ ಡೀಲ್ಗೆ ಸಹಿ ಹಾಕಿದೆ. ಇದರಲ್ಲಿ ಟ್ರೀಬೋದ ಡಿಸ್ಟ್ರಿಬ್ಯುಶನ್ ನೆಟ್ವರ್ಕ್ ಅನ್ನು ಅಕ್ಕೋರ್ ಬಳಸಿಕೊಳ್ಳಲಿದೆ.
ಅಕ್ಕೋರ್ ಮತ್ತು ಟ್ರೀಬೋ ಜೊತೆಗೂಡಿದರೆ ಭಾರತದಲ್ಲಿ ಮೂರನೇ ಅತಿದೊಡ್ಡ ಹೋಟೆಲ್ ನೆಟ್ವರ್ಕ್ ನಿರ್ಮಾಣ ಆಗುತ್ತದೆ. ಬರೋಬ್ಬರಿ 30,000 ರೂಮುಗಳು ಇವುಗಳ ಬ್ಯುಸಿನೆಸ್ ವ್ಯಾಪ್ತಿಗೆ ಬರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Fri, 11 April 25