Gautam Adani: ಐದು ಕಂಪನಿಗಳ ಐಪಿಒಗೆ ಉದ್ಯಮಿ ಗೌತಮ್ ಅದಾನಿ ಚಿಂತನೆ

|

Updated on: Jan 23, 2023 | 6:29 PM

Adani Group Companies IPO; ಏಷ್ಯಾದ ಶ್ರೀಮಂತ ಉದ್ಯಮಿ ಎಂದೇ ಪರಿಗಣಿಸಲಾಗಿರುವ ಗೌತಮ್ ಅದಾನಿ 2026ರಿಂದ 2028ರ ಅವಧಿಯಲ್ಲಿ ತಮ್ಮ ಒಡೆತನದ ಐದು ಕಂಪನಿಗಳ ಷೇರುಗಳ ಐಪಿಒ ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗೆ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Gautam Adani: ಐದು ಕಂಪನಿಗಳ ಐಪಿಒಗೆ ಉದ್ಯಮಿ ಗೌತಮ್ ಅದಾನಿ ಚಿಂತನೆ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Image Credit source: PTI
Follow us on

ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಎಂದೇ ಪರಿಗಣಿಸಲಾಗಿರುವ ಗೌತಮ್ ಅದಾನಿ (Gautam Adani) 2026ರಿಂದ 2028ರ ಅವಧಿಯಲ್ಲಿ ತಮ್ಮ ಒಡೆತನದ ಐದು ಕಂಪನಿಗಳ ಷೇರುಗಳ ಐಪಿಒ ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗೆ (IPO) ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸಾಲದ ಅನುಪಾತಗಳನ್ನು ಸುಧಾರಿಸಲು ಮತ್ತು ಹೂಡಿಕೆದಾರರ ನೆಲೆಯನ್ನು ವಿಸ್ತರಣೆ ಮಾಡುವುದಕ್ಕಾಗಿ ಅವರು ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಕನಿಷ್ಠ 5 ಕಂಪನಿಗಳ ಷೇರುಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಅದಾನಿ ಸಮೂಹದ (Adani Group) ಮುಖ್ಯ ಹಣಕಾಸು ಅಧಿಕಾರಿ ಜುಗೆಶಿಂದರ್ ಸಿಂಗ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಎಂದು ‘ಬ್ಲೂಮ್​ಬರ್ಗ್’ ವರದಿ ಮಾಡಿದೆ. ಅದಾನಿ ನ್ಯೂ ಇಂಟಸ್ಟ್ರೀಸ್ ಲಿಮಿಟೆಡ್, ಅದಾನಿ ಏರ್​ಪೋರ್ಟ್​​ ಹೋಲ್ಡಿಂಗ್ಸ್ ಲಿಮಿಟೆಡ್, ಅದಾನಿ ರೋಡ್ ಟ್ರಾನ್ಸ್​ಪೋರ್ಟ್ ಲಿಮಿಟೆಡ್, ಅದಾನಿಕನೆಕ್ಸ್ ಪ್ರೈವೇಟ್ ಲಿಮಿಟೆಡ್, ಸಮೂಹದ ಲೋಹ ಮತ್ತು ಗಣಿಗಾರಿಕೆ ಘಟಕಗಳು ಸ್ವತಂತ್ರ ಘಟಕಗಳಾಗಲಿವೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ವಹಣೆಯಂಥ ವ್ಯವಹಾರಗಳು ಸುಮಾರು 300 ದಶಲಕ್ಷ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಹೀಗಾಗಿ ಅವುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಲ್ಲದೆ ಬಂಡವಾಳದ ಅವಶ್ಯಕತೆಗಳನ್ನು ಅವುಗಳೇ ಪೂರೈಸಿಕೊಳ್ಳುವಂತಾಗಬೇಕು. ಭವಿಷ್ಯದ ಬೆಳವಣಿಗೆಗೆ ಬೇಕಾಗಿರುವ ಬಂಡವಾಳವನ್ನು ಹೊಂದಿಸಿಕೊಳ್ಳಬೇಕು ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Adani Enterprises FPO: ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ ದಿನಾಂಕ ಘೋಷಣೆ; ಇಲ್ಲಿದೆ ವಿವರ

ವಿಮಾನ ನಿಲ್ದಾಣ ಉದ್ಯಮವು ಈಗಾಗಲೇ ಸ್ವತಂತ್ರಗೊಂಡಿದೆ. ಅದಾನಿ ನ್ಯೂ ಇಂಡಸ್ಟ್ರೀಸ್ ಬಲಿಷ್ಠ ಹಸಿರು ಇಂಧನ ಉದ್ದಿಮೆಯಾಗಿ ಹೊರಹೊಮ್ಮಲಿದೆ. ಅದಾನಿ ರೋಡ್ ನಿರ್ಮಾಣ, ನಿರ್ವಹಣೆ ವಿಚಾರದಲ್ಲಿ ದೇಶಕ್ಕೆ ಮಾದರಿಯಾಗಲಿದೆ. ಡೇಟಾ ಸೆಂಟರ್ ಉದ್ದಿಮೆಯೂ ಭವಿಷ್ಯದಲ್ಲಿ ಇನ್ನಷ್ಟು ಬೆಳವಣಿಗೆ ಹೊಂದಲಿದೆ. ಲೋಹ ಮತ್ತು ಗಣಿಗಾರಿಕೆ ಘಟಕಗಳು ಅಲ್ಯೂಮಿನಿಯಂ, ತಾಮ್ರ ಹಾಗೂ ಇತರ ಗಣಿಗಾರಿಕೆ ಸೇವೆಗಳನ್ನು ಒದಗಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಫ್​ಪಿಒ (Follow-On Public Offer) ಮೂಲಕ ಬಂಡವಾಳ ಸಂಗ್ರಹಿಸುವುದಾಗಿ ಅದಾನಿ ಎಂಟರ್​ಪ್ರೈಸಸ್ ಕಳೆದ ವಾರ ಘೋಷಿಸಿತ್ತು. ಈ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದೆ. ಜನವರಿ 27ರಿಂದ 31ರ ವರೆಗೆ ಎಫ್​ಪಿಒ ನಡೆಯಲಿದ್ದು, ದೇಶದ ಅತಿದೊಡ್ಡ ಐಪಿಒ ಇದಾಗಿರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ