Adani Enterprises FPO: ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ದಿನಾಂಕ ಘೋಷಣೆ; ಇಲ್ಲಿದೆ ವಿವರ
Adani Enterprises FPO Date; ಒಟ್ಟಾರೆಯಾಗಿ 20,000 ಕೋಟಿ ರೂ. ಬಂಡವಾಳ ಸಂಗ್ರಹದ ಗುರಿ ಹೊಂದಿದ್ದು, ಈ ಪೈಕಿ 10,869 ಕೋಟಿ ರೂ. ಅನ್ನು ಗ್ರೀನ್ ಹೈಡ್ರೋಜನ್ ಯೋಜನೆಗಳು, ವಿಮಾನ ನಿಲ್ದಾಣ ಸೌಲಭ್ಯ ಹಾಗೂ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ ವೇ ನಿರ್ಮಾಣಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.
ಮುಂಬೈ: ಅದಾನಿ ಸಮೂಹದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅದಾನಿ ಎಂಟರ್ಪ್ರೈಸಸ್ (Adani Enterprises) ಎಫ್ಪಿಒ (Follow-On Public Offer) ದಿನಾಂಕ ಪ್ರಕಟಗೊಂಡಿದೆ. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ದೇಶದ ಅತಿದೊಡ್ಡ ಪ್ರಮಾಣದ ಎಫ್ಪಿಒ ಇದಾಗಿರಲಿದೆ. ಎಫ್ಪಿಒಗೆ ಸಂಬಂಧಿಸಿ ಅದಾನಿ ಸಮೂಹದ ಕಂಪನಿ ಸೋಮವಾರ ಮಾರುಕಟ್ಟೆ ನಿಯಂತ್ರಕ ಸೆಬಿಗೆ (Sebi) ದಾಖಲೆಗಳನ್ನು ಸಲ್ಲಿಸಿತ್ತು. ಜನವರಿ 27ರಿಂದ 31ರ ವರೆಗೆ ಎಫ್ಪಿಒ ನಡೆಯಲಿದೆ. ಕಂಪನಿಯು ಭಾಗಶಃ ಪಾವತಿ ಆಧಾರದ ಮೇಲೆ ಷೇರುಗಳನ್ನು ಬಿಡುಗಡೆ ಮಾಡಲಿದೆ. ಆದಾಗ್ಯೂ ಎಫ್ಪಿಒ ಷೇರುಗಳ ದರದ ಬಗ್ಗೆ ಕಂಪನಿ ಇನ್ನೂ ಮಾಹಿತಿ ಬಹಿರಂಗಪಡಿಸಿಲ್ಲ. ಇದಕ್ಕಾಗಿ ಕಂಪನಿಯು ಮರ್ಚೆಂಟ್ ಬ್ಯಾಂಕರ್ಗಳ ಅನುಮೋದನೆಗಾಗಿ ಕಾಯುತ್ತಿದೆ ಎನ್ನಲಾಗಿದೆ.
ಬಂಡವಾಳ ವೆಚ್ಚದ ಅಗತ್ಯ ಮತ್ತು ಕೆಲವು ಘಟಕಗಳ ಸಾಲ ತೀರಿಸುವಿಕೆಗಾಗಿ ಅದಾನಿ ಸಮೂಹದ ಕಂಪನಿ ಎಫ್ಪಿಒ ಬಿಡುಗಡೆಗೆ ನಿರ್ಧರಿಸಿದೆ. ಒಟ್ಟಾರೆಯಾಗಿ 20,000 ಕೋಟಿ ರೂ. ಬಂಡವಾಳ ಸಂಗ್ರಹದ ಗುರಿ ಹೊಂದಿದ್ದು, ಈ ಪೈಕಿ 10,869 ಕೋಟಿ ರೂ. ಅನ್ನು ಗ್ರೀನ್ ಹೈಡ್ರೋಜನ್ ಯೋಜನೆಗಳು, ವಿಮಾನ ನಿಲ್ದಾಣ ಸೌಲಭ್ಯ ಹಾಗೂ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ ವೇ ನಿರ್ಮಾಣಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ. ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್, ಅದಾನಿ ರೋಡ್ ಟ್ರಾನ್ಸ್ಪೋರ್ಟ್, ಮುದ್ರಾ ಸೋಲಾರ್ ಅಂಗ ಸಂಸ್ಥೆಗಳ ಸಾಲ ತೀರಿಸಲು 4,165 ಕೋಟಿ ಬಳಸಲಾಗುವುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Adani One App: ವಿಮಾನ ನಿಲ್ದಾಣ ಸೇವೆಗಳಿಗಾಗಿ ಅದಾನಿ ಸಮೂಹದಿಂದ ಅದಾನಿ ವನ್ ಆ್ಯಪ್ ಬಿಡುಗಡೆ
ಎಫ್ಪಿಒ ಮೂಲಕ 20,000 ಕೋಟಿ ರೂ. ಸಂಗ್ರಹಿಸುವ ಪ್ರಸ್ತಾವನೆಗೆ 2022ರ ನವೆಂಬರ್ನಲ್ಲಿ ಅದಾನಿ ಎಂಟರ್ಪ್ರೈಸಸ್ನ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿತ್ತು. ಶೇ 3.5ರಷ್ಟು ಷೇರುಗಳನ್ನು ಎಫ್ಪಿಒ ಮೂಲಕ ಮಾರಾಟ ಮಾಡಲು ಅದಾನಿ ಎಂಟರ್ಪ್ರೈಸಸ್ ಉದ್ದೇಶಿಸಿದೆ. ಪ್ರಸ್ತುತ ಪ್ರವರ್ತಕರ ಸಮೂಹವು ಶೇ 72.63ರಷ್ಟು ಷೇರುಗಳನ್ನು ಹೊಂದಿದೆ.
ಎಫ್ಪಿಒ ಎಂದರೇನು? ಐಪಿಒಗಿಂತ ಹೇಗೆ ಭಿನ್ನ?
ಎಫ್ಪಿಒ ಇದರ ವಿಸ್ತೃತ ರೂಪ ‘ಫಾಲೋ ಆನ್ ಪಬ್ಲಿಕ್ ಆಫರಿಂಗ್’. ಇದು ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗಿಂತ ಭಿನ್ನ. ಆರಂಭಿಕ ಸಾರ್ವಜನಿಕ ಕೊಡುಗೆ ಎಂದರೆ ಕಂಪನಿಯೊಂದು ಷೇರುಗಳನ್ನು ಮಾರಾಟ ಮಾಡುವ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಹಂತ. ಸರಳವಾಗಿ ಹೇಳುವುದಾದರೆ ಇದರ ನಂತರದ ಹಂತವೇ ಎಫ್ಪಿಒ. ಹೆಸರೇ ಹೇಳುವಂತೆ ಎಫ್ಪಿಒ ಎಂದರೆ ಆರಂಭಿಕ ಸಾರ್ವಜನಿಕ ಕೊಡುಗೆಯ ನಂತರದ ಹಂತ. ಕಂಪನಿಯೊಂದು ಐಪಿಒ ಮೂಲಕ ಷೇರು ಮಾರಾಟ ಮಾಡಿದ ನಂತರದಲ್ಲಿ, ಮತ್ತಷ್ಟು ಬಂಡವಾಳ ಸಂಗ್ರಹಕ್ಕಾಗಿ ಹೆಚ್ಚುವರಿಯಾಗಿ ಷೇರುಗಳನ್ನು ಬಿಡುಗಡೆ ಮಾಡುವುದೇ ‘ಫಾಲೋ ಆನ್ ಪಬ್ಲಿಕ್ ಆಫರಿಂಗ್ ಅಥವಾ ಎಫ್ಪಿಒ’. ಉದ್ಯಮದ ವಿಸ್ತರಣೆಗಾಗಿ, ಸಾಲ ತೀರಿಸಲು ಮತ್ತು ಇತರ ಮುಖ್ಯ ಉದ್ದೇಶಗಳಿಗಾಗಿ ದೊಡ್ಡ ಮಟ್ಟದ ಬಂಡವಾಳ ಸಂಗ್ರಹಣೆ ಗುರಿಯೊಂದಿಗೆ ಕಂಪನಿಗಳು ಎಫ್ಪಿಒ ಹಮ್ಮಿಕೊಳ್ಳುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ