Budget 2023: ಟ್ಯಾಕ್ಸ್ ರಿಬೇಟ್, ಎಕ್ಸೆಂಪ್ಷನ್, ಡಿಡಕ್ಷನ್ ಮಧ್ಯೆ ಏನು ವ್ಯತ್ಯಾಸ?
ಪ್ರತೀ ಬಜೆಟ್ ವೇಳೆಯೂ ಆದಾಯ ತೆರಿಗೆ ದರಗಳು, ಸ್ಲ್ಯಾಬ್ ಗಳು, ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಇತ್ಯಾದಿ ಪದಗಳ ಪ್ರಯೋಗ ಆಗುವುದನ್ನು ಕೇಳುತ್ತೇವೆ. ಕೆಲವೊಮ್ಮೆ ಇವೇನೆಂದು ಅಸ್ಪಷ್ಟಗೊಂಡು ಗೊಂದಲವಾಗಿರಬಹುದು. ಈ ಹಿನ್ನೆಲೆಯಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್, ಡಿಡಕ್ಷನ್ ಮತ್ತು ರಿಬೇಟ್ ಮಧ್ಯೆ ವ್ಯತ್ಯಾಸಗಳೇನು ಎಂಬುದಕ್ಕೆ ಉತ್ತರ ಇಲ್ಲಿದೆ:
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಬಜೆಟ್ (Union Budget 2023) ಬಗ್ಗೆ ಬಹಳ ನಿರೀಕ್ಷೆ ಮತ್ತು ಕುತೂಹಲಗಳಿವೆ. ಈ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಕೂಡ ಆಗಿರುವುದರಿಂದ ನಿರೀಕ್ಷೆಗಳು ತುಸು ಹೆಚ್ಚೇ ಇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ (Price Rise) ಕಂಗೆಟ್ಟಿರುವ ಮಧ್ಯಮವರ್ಗದ ಸಂಬಳದಾರರ ಬೆನ್ನ ಏರುವ ತೆರಿಗೆಗಳ ಹೊರೆ ತಗ್ಗಿಸಲು ಈ ಬಜೆಟ್ ಸಹಾಯವಾಗುತ್ತದಾ ನೋಡಬೇಕು. ಪ್ರತೀ ಬಜೆಟ್ ವೇಳೆಯೂ ಆದಾಯ ತೆರಿಗೆ ದರಗಳು, ಸ್ಲ್ಯಾಬ್ ಗಳು, ಟ್ಯಾಕ್ಸ್ ಎಕ್ಸೆಂಪ್ಷನ್ (tax exemption), ಟ್ಯಾಕ್ಸ್ ಡಿಡಕ್ಷನ್ (tax deduction), ಟ್ಯಾಕ್ಸ್ ರಿಬೇಟ್ (tax rebate) ಇತ್ಯಾದಿ ಪದಗಳ ಪ್ರಯೋಗ ಆಗುವುದನ್ನು ಕೇಳುತ್ತೇವೆ. ಕೆಲವೊಮ್ಮೆ ಇವೇನೆಂದು ಅಸ್ಪಷ್ಟಗೊಂಡು ಗೊಂದಲವಾಗಿರಬಹುದು. ಈ ಹಿನ್ನೆಲೆಯಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್, ಡಿಡಕ್ಷನ್ ಮತ್ತು ರಿಬೇಟ್ ಮಧ್ಯೆ ವ್ಯತ್ಯಾಸಗಳೇನು ಎಂಬುದಕ್ಕೆ ಉತ್ತರ ಇಲ್ಲಿದೆ:
ಟ್ಯಾಕ್ಸ್ ಎಕ್ಸೆಂಪ್ಷನ್ ಎಂದರೇನು?
ಇಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಎಂದರೆ ತೆರಿಗೆ ವಿನಾಯಿತಿ. ಅಂದರೆ ನಿರ್ದಿಷ್ಟ ಆದಾಯದ ಮೊತ್ತಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್. ಸದ್ಯ ವಾರ್ಷಿಕ 2.5 ಲಕ್ಷ ರೂ ಆದಾಯದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ಅಂದರೆ ಈ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಉದಾಹರಣೆಗೆ, ನೀವು ವರ್ಷಕ್ಕೆ 5 ಲಕ್ಷ ರೂ ಆದಾಯ ಪಡೆಯುವವರಾಗಿದ್ದರೆ ಅದರಲ್ಲಿ 2.5 ಲಕ್ಷ ರೂಗೆ ಮಾತ್ರ ಆದಾಯ ತೆರಿಗೆ ಹಾಕಲಾಗುತ್ತದೆ. ಇದರ ಜೊತೆಗೆ ಬಾಡಿಗೆ ಭತ್ಯೆ ಇತ್ಯಾದಿ ಹಣಕ್ಕೂ ತೆರಿಗೆ ವಿನಾಯಿತಿ ಇರುತ್ತದೆ.
ಇದನ್ನೂ ಓದಿ: Budget 2023 ಮಧ್ಯಮ ವರ್ಗಕ್ಕೆ ಬಜೆಟ್ನಲ್ಲಿ ಏನೇನಿರುತ್ತದೆ?; ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು
ಈ ಬಾರಿಯ ಬಜೆಟ್ ನಲ್ಲಿ 2.5 ಲಕ್ಷ ರೂ ಇರುವ ವಾರ್ಷಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂಗೆ ಏರಿಸಬೇಕೆಂದು ಉದ್ಯಮ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವ ನಿರ್ಧಾರ ಕೈಗೊಳ್ಳುತ್ತಾರೆಂದು ಕಾದುನೋಬೇಕಷ್ಟೇ.
ಟ್ಯಾಕ್ಸ್ ಡಿಡಕ್ಷನ್ ಎಂದರೆ…
ಇದು ಕೆಲ ನಿರ್ದಿಷ್ಟ ಹೂಡಿಕೆ ಮತ್ತು ವೆಚ್ಚಗಳ ಹಣಕ್ಕೆ ಸಿಗಬಹುದಾದ ತೆರಿಗೆ ವಿನಾಯಿತಿಯಾಗಿರುತ್ತದೆ. ಇನ್ಷೂರೆನ್ಸ್, ಪಿಪಿಎಫ್, ಡೆಬ್ಟ್ ಬಾಂಡ್, ಲೋನ್ ಇಎಂಐ ಇತ್ಯಾದಿ ವಿವಿಧ ಹೂಡಿಕೆ, ವೆಚ್ಚಗಳನ್ನು ಕಳೆದು ಮಿಗುವ ಆದಾಯಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಈ ರೀತಿಯ ತೆರಿಗೆ ರಿಯಾಯಿತಿಯನ್ನು ವಾರ್ಷಿಕ ಒಂದೂವರೆ ಲಕ್ಷ ರೂವರೆಗಿನ ಅದಾಯದ ಮೊತ್ತಕ್ಕೆ ಪಡೆಯಬಹುದು. ಈಗ ತೆರಿಗೆ ರಿಯಾಯಿತಿ ಕೊಡಬಲ್ಲ ಹೂಡಿಕೆಗಳ ವ್ಯಾಪ್ತಿ ಮತ್ತು ಮೊತ್ತದ ಮಿತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ವಿವಿಧ ವಲಯಗಳಿಂದ ಕೇಳಿಬಂದಿದೆ. ಜನರನ್ನು ಹೂಡಿಕೆಗಳತ್ತ ಸೆಳೆಯಲು ಇದು ಅಗತ್ಯ ಎಂಬುದು ಇವರ ವಾದ.
ಟ್ಯಾಕ್ಸ್ ರಿಬೇಟ್
ಟ್ಯಾಕ್ಸ್ ಎಕ್ಸೆಂಪ್ಷನ್ ಮತ್ತು ಟ್ಯಾಕ್ಸ್ ಡಿಡಕ್ಷನ್ ಹೆಚ್ಚೂಕಡಿಮೆ ಏಕರೀತಿಯದ್ದು. ಆದರೆ ಟ್ಯಾಕ್ಸ್ ರಿಬೇಟ್ ತುಸು ಭಿನ್ನ. ಆದಾಯ ತೆರಿಗೆ ಕಾಯ್ದೆ ಪ್ರಕಾರ ನಿರ್ದಿಷ್ಟ ಮೊತ್ತದವರೆಗೂ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಸದ್ಯಕ್ಕೆ 2.5 ಲಕ್ಷ ರೂ ಅದಾಯಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಇದೆ. ಇದರ ಜೊತೆಗೆ 1.5 ಲಕ್ಷ ರೂವೆಗೆ ಡಿಡಕ್ಷನ್ಸ್ ಇವೆ. ಈ ಡಿಡಕ್ಷನ್ ಕಳೆದು ಉಳಿದ 5 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಇದೆ. ಒಂದು ವೇಳೆ ಈ ಗಡಿ ದಾಟಿದರೆ, ಅಂದರೆ ತೆರಿಗೆಗೆ ಅರ್ಹವಾದ ನಿಮ್ಮ ವಾರ್ಷಿಕ ಆದಾಯ 5,00,001 ರೂ. ಆಗಿದ್ದರೆ ಆಗ ತೆರಿಗೆ ವಿನಾಯಿತಿ ಇರುವ 2.5 ಲಕ್ಷ ರೂ ಬಿಟ್ಟ ಉಳಿದ 2.6 ಲಕ್ಷ ರೂ ಹಣ ಹಣಕ್ಕೆ ನಿಗದಿತ ತೆರಿಗೆ ಪಾವತಿಸಬೇಕಾಗುತ್ತದೆ. ಈ ರೀತಯ ಟ್ಯಾಕ್ಸ್ ರಿಬೇಟ್ ಕಡಿಮೆ ಆದಾಯ ಗುಂಪಿನ ಜನರಿಗೆ ಅನುಕೂಲವಾಗಿದೆ.
ಹಾಗೆಯೇ, ನೀವು ಪರೋಕ್ಷವಾಗಿ ಪಾವತಿಸಿದ ಆದಾಯ ತೆರಿಗೆಯಿಂದ ರೀಫಂಡ್ ಮಾಡಿಕೊಳ್ಳುವುದೂ ಟ್ಯಾಕ್ಸ್ ರಿಬೇಟ್ ಆಗುತ್ತದೆ. ಉದಾಹರಣೆಗೆ, ನೀವು ಹೂಡುವ ಠೇವಣಿಯ ಹಣಕ್ಕೆ ಮೂಲದಲ್ಲೇ ತೆರಿಗೆಯನ್ನು (ಟಿಡಿಎಸ್) ಕಟ್ಟಲಾಗಿದ್ದರೆ ಆ ಹಣವನ್ನು ರೀಫಂಡ್ ಮಾಡಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ