‘ಎಂಪುರನ್’ ವಿವಾದ, ಪೃಥ್ವಿರಾಜ್ ಮೇಲೆ ಐಟಿ ಕಣ್ಣು, ನೊಟೀಸ್ ಜಾರಿ
Prithviraj Sukumaran: ಮೋಹನ್ಲಾಲ್ ನಟನೆಯ ‘ಎಲ್2:ಎಂಪುರಾನ್’ ಸಿನಿಮಾ ವಿವಾದದ ಬೆನ್ನಲ್ಲೆ ಸಿನಿಮಾದ ನಿರ್ಮಾಪಕರ ಮೇಲೆ ಇಡಿ ದಾಳಿ ನಡೆದಿದೆ. ಇದೀಗ ಸಿನಿಮಾದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಆದಾಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿದೆ. ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಟೀಕಿಸುವ ದೃಶ್ಯಗಳು ಆ ಸಿನಿಮಾದಲ್ಲಿವೆ ಎನ್ನಲಾಗುತ್ತಿದೆ.

ಮೋಹನ್ಲಾಲ್ ನಟನೆಯ ‘ಎಲ್2:ಎಂಪುರಾನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ಈ ಸಿನಿಮಾಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಆದರೆ ಈ ಸಿನಿಮಾ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಸಿನಿಮಾದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ, ಹಿಂದುತ್ವವನ್ನು ಟೀಕಿಸುವ ಕೆಲ ದೃಶ್ಯಗಳು ಇದ್ದು, ಇದನ್ನು ಹಿಂದೂಪರ ಸಂಘಟನೆಗಳು ವಿರೋಧಿಸಿವೆ. ಕೇರಳ ಬಿಜೆಪಿ ಸಹ ಇದನ್ನು ವಿರೋಧ ಮಾಡಿದೆ. ಮೋಹನ್ಲಾಲ್ ಈಗಾಗಲೇ ಇದಕ್ಕಾಗಿ ಕ್ಷಮೆ ಸಹ ಕೇಳಿದ್ದಾರೆ. ಆದರೆ ವಿವಾದ ಎದ್ದ ಬೆನ್ನಲ್ಲೆ ಸಿನಿಮಾದ ಮೇಲೆ ಇಡಿ ಮತ್ತು ತೆರಿಗೆ ಇಲಾಖೆಯವರು ದಾಳಿ ಮಾಡಿದ್ದಾರೆ.
‘ಎಂಪುರಾನ್’ ಸಿನಿಮಾದಲ್ಲಿಯೇ ಒಂದು ದೃಶ್ಯದಲ್ಲಿ ಮಂಜು ವಾರಿಯರ್ ಪಾತ್ರ ಸಂಭಾಷಣೆಯೊಂದನ್ನು ಹೇಳುತ್ತದೆ ‘ನಾನು ಕೇಂದ್ರಕ್ಕೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ನನ್ನ ಮೇಲೆ ಇಡಿ ದಾಳಿ ನಡೆಯುತ್ತದೆ, ಆಗ ನೀವು ನಾನು ಹೇಳಿಕೊಟ್ಟಂತೆ ಮಾಡಿರಿ’ ಎಂದಿದೆ ಆ ಸಂಭಾಷಣೆ. ಈಗ ನೋಡಿದರೆ ‘ಎಂಪುರಾನ್’ ಸಿನಿಮಾದಲ್ಲಿ ಬಿಜೆಪಿಗೆ ವಿರುದ್ಧವಾದ ಅಂಶಗಳು ಇವೆ ಎಂಬುದು ತಿಳಿದು ಬರುತ್ತಿದ್ದಂತೆ ಸಿನಿಮಾಕ್ಕೆ ಸಂಬಂಧಿಸಿದ ಕೆಲವರ ಮೇಲೆ ಇಡಿ ಮತ್ತು ಆದಾಯ ತೆರಿಗೆ ಇಲಾಖೆ ದಾಳಿಗಳು ನಡೆದಿವೆ.
ಮೊದಲಿಗೆ ‘ಎಂಪುರಾನ್’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಮ್ ಗೋಪಾಲನ್ ಮೇಲೆ ಇಡಿ ದಾಳಿ ನಡೆಸಿ ವಿಚಾರಣೆ ನಡೆಸಿದ್ದಲ್ಲದೆ 1.50 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಇದೀಗ ‘ಎಂಪುರಾನ್’ ಸಿನಿಮಾದ ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು ಹಾಕಿದ್ದು, ಎರಡು ವರ್ಷ ಹಿಂದಿನ ಪ್ರಕರಣದಲ್ಲಿ ನೊಟೀಸ್ ನೀಡಿದೆ.
ಇದನ್ನೂ ಓದಿ:‘ಎಂಪುರಾನ್’ ಚಿತ್ರಕ್ಕೆ ಬಿಜೆಪಿ ವಿರೋಧ ಬೆನ್ನಲ್ಲೇ ನಿರ್ಮಾಪಕನ ಕಚೇರಿ ಮೇಲೆ ಇಡಿ ದಾಳಿ
2022 ರಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ಮೇಲೆ ನಡೆದಿದ್ದ ಐಟಿ ದಾಳಿಗೆ ಸಂಬಂಧಿಸಿದಂತೆ ಈಗ ನೊಟೀಸ್ ನೀಡಲಾಗಿದೆ. ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಜನಗಣಮನ’ ಇನ್ನೆರಡು ಸಿನಿಮಾಗಳ ಸಂಭಾವನೆ ಕುರಿತಾಗಿ ನೊಟೀಸ್ ನೀಡಲಾಗಿದೆ. ಆದರೆ ಆದಾಯ ತೆರಿಗೆ ಇಲಾಖೆ ಪ್ರಶ್ನೆ ಮಾಡಿರುವ ಸಿನಿಮಾಗಳಿಗೆ ಪೃಥ್ವಿರಾಜ್ ಸುಕುಮಾರನ್ ಸಂಭಾವನೆ ಪಡೆದಿಲ್ಲ ಬದಲಿಗೆ ಸಹ ನಿರ್ಮಾಪಕರಾಗಿದ್ದರು ಎನ್ನಲಾಗಿದ್ದು, ಅದಕ್ಕೆ ಸೂಕ್ತ ದಾಖಲೆಗಳನ್ನು ಪೃಥ್ವಿರಾಜ್ ಸುಕುಮಾರನ್ ಒದಗಿಸುವಂತೆ ಕೋರಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ