ರವಿ ಬಸ್ರೂರು ಹೊಸ ಸಾಹಸ, ಟ್ರೈಲರ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ
Ravi Basrur: ‘ಕೆಜಿಎಫ್’ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರು ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೂ ಸಂಗೀತ ನೀಡುತ್ತಿದ್ದು, ಸಖತ್ ಬ್ಯುಸಿ ಆಗಿದ್ದಾರೆ. ಎಷ್ಟೇ ಜನಪ್ರಿಯ ಸಂಗೀತ ನಿರ್ದೇಶಕ ಆಗಿದ್ದರೂ ಅವರೊಳಗಿನ ನಿರ್ದೇಶಕ ಸತ್ತಿಲ್ಲ. ಇದೀಗ ಅವರು ಹೊಸದೊಂದು ಸಿನಿಮಾ ನಿರ್ದೇಶಿಸಿದ್ದು, ಸಿನಿಮಾದ ಟ್ರೈಲರ್ ಅನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.

ರವಿ ಬಸ್ರೂರು (Ravi Basrur) ಕನ್ನಡದಲ್ಲಿ ಮಾತ್ರವೇ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಬೇಡಿಕೆಯಲ್ಲಿರುವ ಸಂಗೀತ ನಿರ್ದೇಶಕ. ‘ಕೆಜಿಎಫ್’ ಮೂಲಕ ಸಿನಿಮಾಗಳ ಹಿನ್ನೆಲೆ ಸಂಗೀತಕ್ಕೆ ಬೇರೆಯದ್ದೇ ಗತ್ತು ತುಂಬಿದ ರವಿ ಬಸ್ರೂರು, ಕೇವಲ ಸಂಗೀತ ನಿರ್ದೇಶಕ ಮಾತ್ರವಲ್ಲ, ಸಿನಿಮಾ ನಿರ್ದೇಶಕರೂ ಸಹ ಹೌದು. ಈ ಹಿಂದೆ ಕೆಲ ಭಿನ್ನ ರೀತಿಯ ಪ್ರಯತ್ನಗಳನ್ನು ಮಾಡಿರುವ ರವಿ ಬಸ್ರೂರು, ಇದೀಗ ಮತ್ತೊಂದು ಭಿನ್ನ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರವಿ ಬಸ್ರೂರು ಅವರ ನಿರ್ದೇಶನದ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ (CM Siddaramaiah).
ರವಿ ಬಸ್ರೂರು ಅವರು ಯಕ್ಷಗಾನ ಕಲೆ ಆಧಾರಿತವಾದ ಸಿನಿಮಾ ಒಂದರ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ‘ವೀರ ಚಂದ್ರಹಾಸ’ ಎಂದು ಹೆಸರಿಟ್ಟಿದ್ದಾರೆ. ‘ವೀರ ಚಂದ್ರಹಾಸ’ ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. ‘ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ತನ್ನ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಕಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಇರುವ ಸಹಕಾರ ನೀಡಲಾಗುವುದು. ನಿಮ್ಮ ಇಡೀ ಕಲಾ ತಂಡಕ್ಕೆ ಮತ್ತು ಸಿನಿಮಾ ತಂಡಕ್ಕೆ ಶುಭಾಶಯಗಳು ಎಂದು ಮುಖ್ಯಮಂತ್ರಿಗಳು ಹಾರೈಸಿದ್ದಾಗಿ ರವಿ ಬಸ್ರೂರು ಹೇಳಿದ್ದಾರೆ.
‘ವೀರ ಚಂದ್ರಹಾಸ’ ಸಿನಿಮಾವು ಯಕ್ಷಗಾನ ಥೀಮ್ನಲ್ಲಿರುವ ಸಿನಿಮಾ ಆಗಿದೆ. ಇಡೀ ಸಿನಿಮಾ ಯಕ್ಷಗಾನದ ಕತೆ, ಪಾತ್ರಗಳನ್ನು ಹೊಂದಿದೆ. ಯಕ್ಷಗಾನದ ಪ್ರಪಂಚದಲ್ಲಿ ನಡೆಯುವ ಕತೆಯನ್ನು ಸಿನಿಮಾ ಮಾಡುವ ಸಾಹಸ ಮಾಡಿದ್ದಾರೆ ರವಿ ಬಸ್ರೂರು. ಏಳು ತಿಂಗಳ ಹಿಂದೆ ‘ವೀರ ಚಂದ್ರಹಾಸ’ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು, ಟೀಸರ್ ಬಹುವಾಗಿ ಗಮನ ಸೆಳೆದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:ಜ.19ಕ್ಕೆ ಬಿಡುಗಡೆ ಆಗಲಿದೆ ‘ಕಡಲ್’ ಸಿನಿಮಾ; ಇದು ರವಿ ಬಸ್ರೂರು ನಿರ್ದೇಶನದ ಚಿತ್ರ
ರವಿ ಬಸ್ರೂರು ಹಲವು ವರ್ಷಗಳಿಂದಲೂ ಸಿನಿಮಾ ನಿರ್ದೇಶನ ಮಾಡುತ್ತಲೇ ಬರುತ್ತಿದ್ದಾರೆ. ಪ್ರತಿಬಾರಿಯೂ ಭಿನ್ನ ರೀತಿಯ ಕತೆ, ನಿರೂಪಣೆ ಹೊತ್ತು ತರುತ್ತಿದ್ದಾರೆ. ದೊಡ್ಡ ಯಶಸ್ಸು ಅವರಿಗೆ ಈ ವರೆಗೂ ಸಿಕ್ಕಿಲ್ಲವಾದರೂ ಪ್ರಯತ್ನವನ್ನು ಮಾತ್ರ ಬಿಡುತ್ತಿಲ್ಲ ರವಿ ಬಸ್ರೂರು. 2014 ರಲ್ಲಿ ‘ಗರ್ಗರ್ ಮಂಡಲ’ ಹೆಸರಿನ ಕುಂದಾಪುರ ಕನ್ನಡ ಸಿನಿಮಾ ಮಾಡಿದರು. 2016 ರಲ್ಲಿ ‘ಬಿಲಿಂಡರ್’ ಹೆಸರಿನ ಸಿನಿಮಾ ನಿರ್ದೇಶಿಸಿ ಅವರೇ ನಟಿಸಿದರು. 2017 ರಲ್ಲಿ ‘ಕಟಕ’ ಹೆಸರಿನ ಕನ್ನಡ ಸಿನಿಮಾ ಮಾಡಿದರು. 2019 ರಲ್ಲಿ ‘ಗಿರ್ಮಿಟ್’ ಹೆಸರಿನ ಸಿನಿಮಾ ಮಾಡಿದರು. ಈ ಸಿನಿಮಾನಲ್ಲಿ ಮಕ್ಕಳು ದೊಡ್ಡವರ ಪಾತ್ರಗಳಲ್ಲಿ ನಟಿಸಿದ್ದು ವಿಶೇಷ. 2023 ರಲ್ಲಿ ‘ಕಡಲ್’ ಹೆಸರಿನ ಸಿನಿಮಾ ನಿರ್ದೇಶಿಸಿದರು. ಈಗ ‘ವೀರ ಚಂದ್ರಹಾಸ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ