ಜ.19ಕ್ಕೆ ಬಿಡುಗಡೆ ಆಗಲಿದೆ ‘ಕಡಲ್’ ಸಿನಿಮಾ; ಇದು ರವಿ ಬಸ್ರೂರು ನಿರ್ದೇಶನದ ಚಿತ್ರ
‘ಕಡಲ್ ಚಿತ್ರದ ಖಾಸಗಿ ಪ್ರದರ್ಶನ ಯಶಸ್ವಿ ಆದ ಬಳಿಕ ಇದನ್ನು ಬಿಡುಗಡೆ ಮಾಡಿ ಎಲ್ಲರಿಗೂ ತೋರಿಸಿ ಎಂಬ ಬೇಡಿಕೆ ಬಂತು. ಹಾಗಾಗಿ ಇದೇ 19ರಿಂದ ನಮ್ಮ ಕಡಲ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ನಮ್ಮ ಈ ಹಿಂದಿನ ಸಿನಿಮಾಗಳಿಗೆ ಬೆಂಬಲ ನೀಡಿದ ರೀತಿಯೇ ಈ ಸಿನಿಮಾಗೂ ನಿಮ್ಮ ಶುಭ ಹಾರೈಕೆ ಇರಲಿ’ ಎಂದು ರವಿ ಬಸ್ರೂರು ಹೇಳಿದ್ದಾರೆ.
ರವಿ ಬಸ್ರೂರು (Ravi Basrur) ಅವರು ಕೇವಲ ಸಂಗೀತ ನಿರ್ದೇಶಕ ಮಾತ್ರವಲ್ಲ, ಸಿನಿಮಾ ನಿರ್ದೇಶಕನಾಗಿಯೂ ಅವರು ಸಕ್ರಿಯರಾಗಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಅವರು ಈಗ ಹೊಸ ಸಿನಿಮಾದೊಂದಿಗೆ ಜನರ ಎದುರು ಬರುತ್ತಿದ್ದಾರೆ. ‘ಗರ್ ಗರ್ ಮಂಡ್ಲ’, ‘ಕಟಕ’, ‘ಬಿಲಿಂಡರ್’, ‘ಗಿರ್ಮಿಟ್’ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ರವಿ ಬಸ್ರೂರು ಅವರು ಈಗ ‘ಕಡಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಿಡುಗಡೆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ 19ರಂದು ‘ಕಡಲ್’ ಚಿತ್ರ (Kadal Movie) ತೆರೆಕಾಣಲಿದೆ.
ಹೆಸರೇ ಸೂಚಿಸುವಂತೆ ‘ಕಡಲ್’ ಸಿನಿಮಾದಲ್ಲಿ ಕರಾವಳಿಯ ಮೀನುಗಾರರ ಜೀವನದ ಕಹಾನಿ ಇದೆ. ಸಮುದ್ರ ಜೊತೆ ಹೊಂದಿಕೊಂಡಿರುವ ಜನರ ಬದುಕಿನ ಕಥೆ ಇದರಲ್ಲಿ ಇದೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಸಂಕ್ರಾಂತಿ ಸಂದರ್ಭದಲ್ಲಿ ರವಿ ಬಸ್ರೂರು ಮ್ಯೂಸಿಕ್ ಚಾನಲ್ನಲ್ಲಿ ‘ಕಡಲ್’ ಟ್ರೇಲರ್ ಬಿಡುಗಡೆಯಾಗಿದೆ. ಈಗಾಗಲೇ ಒಂದಷ್ಟು ಬಾರಿ ಈ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಡೆದಿದೆ. ಪ್ರತಿ ಬಾರಿ ಪ್ರದರ್ಶನ ಆದಾಗಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದನ್ನೂ ಓದಿ: ತನ್ನ ಹೆಸರು ಕೈಬಿಟ್ಟು ಮರುಜೀವ ಕೊಟ್ಟ ಪುಣ್ಯಾತ್ಮನ ಹೆಸರು ಇಟ್ಟುಕೊಂಡ ರವಿ ಬಸ್ರೂರು: ಯಾರು ಆ ರವಿ? ಎಲ್ಲಿದ್ದಾರೆ?
‘ಕಡಲ್’ ಸಿನಿಮಾದಲ್ಲಿ ಸೌರಭ ಭಂಡಾರಿ, ಸೂಚನ್ ಶೆಟ್ಟಿ, ಚಿರಶ್ರೀ ಅಂಚನ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ನಾಗೇಂದ್ರ ಕೋಟೆ, ಭಾಸ್ಕರ್ ಬಸ್ರೂರು, ವಿಜಯ್ ಬಸ್ರೂರು, ಸುಜಾತಾ ಅಂದ್ರದೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೀನುಗಾರರ ಕಥೆಯ ಜೊತೆ ಪ್ರೀತಿ, ಪ್ರೇಮ ದ್ವೇಷದ ಕಹಾನಿಯೂ ಈ ಸಿನಿಮಾದಲ್ಲಿದೆ.
‘ಓಂಕಾರ್ ಮೂವೀಸ್ ಬ್ಯಾನರ್’ ಮೂಲಕ ಈ ಸಿನಿಮಾಗೆ ಎನ್.ಎಸ್. ರಾಜ್ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಸಚಿನ್ ಬಸ್ರೂರು ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕನ, ಸಂಗೀತ ಹಾಗೂ ಸಂಕಲನದ ಜವಾಬ್ದಾರಿಯನ್ನು ರವಿ ಬಸ್ರೂರು ನಿಭಾಯಿಸಿದ್ದಾರೆ.
View this post on Instagram
‘ನಮ್ಮ ತಂಡದ 5ನೇ ಪ್ರಯತ್ನ ಕಡಲ್ ಸಿನಿಮಾ. ಖಾಸಗಿ ಪ್ರದರ್ಶನ ಯಶಸ್ವಿ ಆದ ಬಳಿಕ ಇದನ್ನು ಬಿಡುಗಡೆ ಮಾಡಿ ಎಲ್ಲರಿಗೂ ತೋರಿಸಿ ಎಂಬ ಬೇಡಿಕೆ ಬಂತು. ಹಾಗಾಗಿ ಇದೇ 19ರಿಂದ ನಮ್ಮ ಕಡಲ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ನಮ್ಮ ಈ ಹಿಂದಿನ ಸಿನಿಮಾಗಳಿಗೆ ಬೆಂಬಲ ನೀಡಿದ ರೀತಿಯೇ ಈ ಸಿನಿಮಾಗೂ ನಿಮ್ಮ ಶುಭ ಹಾರೈಕೆ ಇರಲಿ. ಒಂದು ಸಿನಿಮಾದಿಂದ 2 ಸಾವಿರ ಜನರ ಬದುಕು ಕಟ್ಟುತ್ತದೆ. ಆ ಉದ್ದೇಶದಿಂದ ವರ್ಷಕ್ಕೊಂದು ಸಿನಿಮಾ ಮಾಡುವ ಹವ್ಯಾಸ ಇಟ್ಟುಕೊಂಡಿದ್ದೇವೆ. ಇದರಿಂದ ಒಂದಷ್ಟು ತಂತ್ರಜ್ಞರಿಗೆ, ಕಲಾವಿದರಿಗೆ ಬೆಳಕು ಸಿಗುತ್ತದೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ರವಿ ಬಸ್ರೂರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ