ರಾಜಕೀಯದಲ್ಲಿ ಮತ್ತೆ ಗರಿಗೆದರಿದ ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಇಡಿ ಸಂಕಷ್ಟ ತಂದಿಡುತ್ತಾ?
ಮುಡಾ ಪ್ರಕರಣ ಇನ್ನೇನು ಮುಗಿದೇ ಹೊಯ್ತು ಅನ್ನೋ ಲೆಕ್ಕಾಚಾರ ರಾಜ್ಯ ರಾಜಕಾರಣದಲ್ಲಿ ನಡೀತಾ ಇದೆ. ಅತ್ತ ಕಾಂಗ್ರೆಸ್ ನಾಯಕರು ಸಹ ಮುಡಾ ಕೇಸ್ನಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಕೊಟ್ಟಿರೋದನ್ನ ಸರ್ಟಿಫಿಕೇಟ್ ಆಗಿ ಜನರ ಮುಂದೆ ಇಡ್ತಿದೆ. ಆದ್ರೆ ಈಗ ಹೈಕೋರ್ಟ್ ವಿಭಾಗೀಯ ಪೀಠ ಇಡಿ ತನಿಖೆಗೆ ಅವಕಾಶ ಕೊಟ್ಟಿರೋದು, ಈಗ ಮತ್ತೆ ಸಿಎಂ ಸಿದ್ದರಾಮಯ್ಯಗೆ ನಿದ್ದೆಗೆಡಿಸುವಂತಾಗಿದೆ. ಆದ್ರೆ ಈ ಆದೇಶವನ್ನ ಸಿಎಂ ಕಾನೂನು ಸಲಹೆಗೆಗಾರ ಎ.ಎಸ್.ಪೊನ್ನಣ್ಣ ಅರ್ಥೈಸುತ್ತಿರುವ ರೀತಿ ಬೇರೆ ಆಗಿದೆ. ಸಿದ್ದರಾಮಯ್ಯ ಕುಟುಂಬದ 14 ಸೈಟ್ ಹೊರತುಪಡಿಸಿ, ಇಡಿ ಮುಡಾ ತನಿಖೆ ಮಾಡಬೇಕು ಎಂದು ಹೇಳಿದೆ ಎನ್ನುವುದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅಭಿಪ್ರಾಯ. ಆದರೆ ಹೈಕೋರ್ಟ್ ಆದೇಶದ ಹಿನ್ನಲೆ ಇಡಿ ತನಿಖೆಯ ಸಾಧ್ಯಾಸಾಧ್ಯತೆಯನ್ನ ಟಿವಿನೈನ್ ಇನ್ ಸೈಡ್ ವಿವರ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 05): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ (Muda Scam Case) ಹೈಕೋರ್ಟ್ ವಿಭಾಗೀಯ ಪೀಠ ಮುಡಾ ಮಾಜಿ ಆಯುಕ್ತ ನಟೇಶ್ (Natesh) ಹೇಳಿಕೆ ಮತ್ತು ದಾಖಲೆ ರದ್ದಪಡಿಸಿ ಹೊರಡಿಸಿರುವ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿಲ್ಲ. ಅಲ್ಲದೇ ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ದ ತನಿಖೆ ಮುಂದುವರಿಸಲು ಅನುಮತಿ ನೀಡಿದೆ. ನಟೇಶ್ ಹೇಳಿಕೆ ರದ್ದು ಆದೇಶವನ್ನೇ ಮುಂದಿಟ್ಟು ಜಾರಿ ನಿರ್ದೇಶನಾಲಯವನ್ನ (Enforcement Directorate) ಕಟ್ಟಿಹಾಕಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ತನಿಖೆ ಮುಂದುವರಿಸಲು ಇಡಿ ಮನವಿ ಮಾಡಿತ್ತು. ಇದಕ್ಕೆ ಪೂರಕವಾಗಿ ಆದೇಶಿಸಿರುವ ನ್ಯಾಯಾಲಯ ಇತರೆ ಆರೋಪಿಗಳ ತನಿಖೆಗೆ ಸಮ್ಮತಿ ನೀಡಿತ್ತು. ಇತರೆ ಆರೋಪಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಇತರರ ಹೆಸರಿದೆ. ಇದರಿಂದ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಜತೆಗೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ದದ ದೂರು ರದ್ದಾಗಿಲ್ಲ ಅಥವಾ ತನಿಖೆಗೆ ತಡೆಯಾಜ್ಞೆ ಇಲ್ಲ. ಇನ್ನು ಲೋಕಾಯುಕ್ತ ತನಿಖೆ ಮಾಡಿ ಬಿ ರಿಪೋರ್ಟ್ ಸಲ್ಲಿಸಿದ್ರೂ, ಜನಪ್ರತಿನಿಧಿಗಳ ನ್ಯಾಯಾಲಯ ಈ ಕ್ಷಣದವರೆಗೆ ಬಿ ರಿಪೋರ್ಟ್ ಗೆ ಅಂಗೀಕಾರ ನೀಡಿಲ್ಲ. ಹಾಗೇ ಲೋಕಾಯುಕ್ತ ಬಿ ರಿಪೋರ್ಟ್ ಅನ್ನ ಸಹ ಇಡಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದೆ. ಲೋಕಾಯುಕ್ತ ವರದಿಯನ್ನ ಚಾಲೇಂಜ್ ಮಾಡುವ ಅಧಿಕಾರಿ ಇಡಿಗೆ ಇದಿಯೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಇಡಿ ಪರ ವಕೀಲರು ಜಾರಿ ನಿರ್ದೇಶನಾಲಯಕ್ಕೆ ಇರುವ ಹಕ್ಕನ್ನ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಇಡಿ ತನಿಖೆಗೆ ಹೈಕೋರ್ಟ್ ಅನುಮತಿ, ಸಿಎಂ ಸೇರಿ ಹಲವರಿಗೆ ಎದುರಾಗುತ್ತಾ ಸಂಕಷ್ಟ?
ಆದರೆ ನ್ಯಾಯಾಲಯದ ಬಿ.ರಿಪೋರ್ಟ್ ಒಪ್ಪಿಕೊಂಡರೇ ಏನು ಮಾಡುವರಿ ಎಂದು ಇಡಿಗೆ ಕೇಳಿದಾಗಲೂ, ಉನ್ನತ ಕೋರ್ಟ್ ನಲ್ಲಿ ಪ್ರಶ್ನಿಸುವ ಅಧಿಕಾರ ತನಗೆ ಇದೆ ಎಂದು ಇಡಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಿಳಿಸಿದೆ. ಹೀಗೆ ಎಲ್ಲಾ ಆಯಾಮಗಳಲ್ಲೂ ನೋಡಿದಾಗ ಇಡಿ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಯಾವುದು ಅಡೆತಡೆ ಸದ್ಯಕ್ಕಿಲ್ಲ. ಹೀಗಾಗಿ ಸಮನ್ಸ್ ನೀಡಿ ವಿಚಾರಣೆಗೆ ಕರೆದರೂ ಅಚ್ಚರಿ ಇಲ್ಲ. ಇಷ್ಟಕ್ಕೂ ಸಿದ್ದರಾಮಯ್ಯರ ವಿಚಾರಣಗೆ ಇಡಿ ಇರುವ ಆಧಾರದ ವಿವರ ಈ ಕೆಳಗಿನಂತಿದೆ.
ಇನ್ನೂ ಸಿಎಂ ಪತ್ನಿಗೆ 14 ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ, ಮುಖ್ಯಮಂತ್ರಿ ಆಪ್ತ ಕುಮಾರ್ ಎಂಬಾತನನ್ನ ಮುಂಡಾ ಮಾಜಿ ಅಧ್ಯಕ್ಷ ನಟೇಶ್ ಇಡಿಗೆ ನೀಡಿರುವ ಹೇಳಿಕೆಯಲ್ಲಿ ಹೆಸರಿಸಿದ್ದಾರೆ. ಸಿಎಂ ಪತ್ನಿ ಪಾರ್ವತಿಗೆ 50-50 ಸೈಟ್ ಹಂಚಿಕೆಯಲ್ಲೂ ಕುಮಾರ್ ಪಾತ್ರ ಇದೆ ಎಂದು ಉಲ್ಲೇಖಿಸಿದ್ದಾರೆ. ಇದೇ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ತನಿಖೆಗೆ ಇಡಿ ಮುಂದಾಗಬಹುದು. ಅಲ್ಲದೇ ಇಡಿ ಪಿಎಂಎಲ್ ಎ ಅಡಿ ದಾಖಲಿಸಿರುವ ಎಫ್ ಐ ಆರ್ ನಲ್ಲಿ 14 ಸೈಟ್ ಹಂಚಿಕೆಯೇ ಪ್ರಧಾನ. ಆದರೆ ಮುಖ್ಯಮಂತ್ರಿ ಪರ ವಕೀಲರು ನಟೇಶ್ ,ಪಾರ್ವತಿ ಹಾಗೂ ಭೈರತಿ ಸುರೇಶ್ ಕೊಟ್ಟಿರುವ ಆದೇಶದಲ್ಲಿ ಪಿಎಂಎಲ್ ಎ ಕೇಸ್ ರದ್ದು ಪಡಿಸಲಾಗಿದೆ. ಹೀಗಾಗಿ 14 ಸೈಟ್ ತನಿಖೆ ಇಡಿ ತನಿಖೆ ಮಾಡಿದ್ರೆ ನ್ಯಾಯಾಂಗ ನಿಂದನೆ ಅಂತಿದೆ.
ಆದರೆ ಪೊನ್ನಣ್ಣ ವಾದಕ್ಕೆ ಈಗ ಬಿಜೆಪಿ ತಿರುಗೇಟು ಕೊಟ್ಟಿದೆ. ನ್ಯಾಯಾಲಯದ ಎಲ್ಲೂ ಸಿಎಂ ಕುಟುಂಬ ಹೊರತುಪಡಿಸಿ ತನಿಖೆ ಆದೇಶ ಮಾಡಿಲ್ಲ. ಕಾಂಗ್ರೆಸ್ ನಾಯಕರು ದಿಕ್ಕು ತಪ್ಪಿಸುವುದರಲ್ಲಿ ನಿಸ್ಸಿಮರು ಎಂದು ಕೇಸರಿ ಪಡೆ ಕುಟುಕಿದ್ರೆ, ಕುಮಾರಸ್ವಾಮಿ ಸತ್ಯಮೇವ ಜಯತೇ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಹೀಗೆ ಮುಡಾ ಪ್ರಕರಣ ನಿಧಾನವಾಗಿ ರಾಜ್ಯ ರಾಜಕೀಯದಲ್ಲಿ ಮತ್ತೆ ಗರಿಗೆದರುತ್ತಿದೆ. ಸದ್ಯಕ್ಕೆ ಸೇಫ್ ಎಂದು ಸಿಎಂ ಬಣ ಹೇಳುತ್ತಿದ್ದರೆ, ವಿಪಕ್ಷಗಳು ಪಿಕ್ಚರ್ ಅಭಿ ಬಾಕಿ ಹೇ ಎಂದು ಹೇಳುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ