ಮುಡಾ ಹಗರಣ: ಇಡಿ ತನಿಖೆಗೆ ಹೈಕೋರ್ಟ್ ಅನುಮತಿ, ಸಿಎಂ ಸೇರಿ ಹಲವರಿಗೆ ಎದುರಾಗುತ್ತಾ ಸಂಕಷ್ಟ?
Muda Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಮುಡಾ ಪ್ರಕರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ( ಇಡಿ ) ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಇದರಿಂದ ಮುಡಾ ಹಗರಣದಲ್ಲಿ ಇಡಿ ಪ್ರವೇಶ ಮಾಡಲಿದ್ದು, ಆರೋಪಿಗಳಿಗೆ ಢವ ಢವ ಶುರುವಾಗಿದೆ.

ಬೆಂಗಳೂರು, (ಏಪ್ರಿಲ್ 02): ಮುಡಾ ಹಗರಣ ಪ್ರಕರಣದಲ್ಲಿ (Muda Scam Case) ಜಾರಿ ನಿರ್ದೇಶನಾಲಯ ಇಡಿ ತನಿಖೆಗೆ (Enforcement Directorate Probe) ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ (Karnataka High Court) ಅನುಮತಿ ನೀಡಿದೆ. ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಇಡಿಗೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಇಂದು (ಏಪ್ರಿಲ್ 02) ಆದೇಶ ಹೊರಡಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೂ ಇಡಿ ತನಿಖೆಯ ಸಂಕಷ್ಟ ಶುರುವಾಗುವ ಸಾಧ್ಯತೆ ಹೆಚ್ಚಿದೆ.
ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ, ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹೇಳಿಕೆ, ಅವರ ನಿವಾಸದಲ್ಲಿ ಶೋಧನೆ, ದಾಖಲೆ ಜಪ್ತಿ ಆದೇಶ ರದ್ದುಪಡಿಸಿತ್ತು. ಈ ಆದೇಶ ಆಧರಿಸಿ ಸಿಎಂ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ ಅವರ ವಿರುದ್ಧದ ಇಡಿ ಸಮನ್ಸ್ ಅನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಹೀಗಾಗಿ ಈ ಆದೇಶ ಪ್ರಶ್ನಿಸಿ ಇಡಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಯಾವುದೇ ತಡೆ ನೀಡದಿದ್ದರೂ, ಮುಡಾದ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹೇಳಿಕೆ, ಅವರಿಂದ ಸಿಕ್ಕ ದಾಖಲೆ ಆಧರಿಸಿ ಇತರೆ ಆರೋಪಿಗಳ ವಿರುದ್ಧ ಇಡಿ ತನಿಖೆ ನಡೆಸಬಹುದೆಂದು ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮುಡಾ ಹಗರಣ: ಕೋರ್ಟ್ ಮೆಟ್ಟಿಲೇರಿದ ಇಡಿ, ಸಿದ್ದರಾಮಯ್ಯಗೆ ಢವ ಢವ
ಇನ್ನೊಂದೆಡೆ ಲೋಕಾಯುಕ್ತ ಸಲ್ಲಿಸಿರುವ ಈ ವರದಿಯನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. ಹೀಗಾಗಿ ಕೋರ್ಟ್ ಯಾವ ತೀರ್ಪು ಕೊಡುತ್ತೋ ಎಂದು ಸಿಎಂಗೆ ಢವ ಢವ ಶುರುವಾಗಿದೆ.
ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಹಾಗೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಇಡಿ ನೀಡಿದ್ದ ಸಮನ್ಸ್ ಸಹ ಕೋರ್ಟ್ ರದ್ದುಗೊಳಿಸಿತ್ತು. ಇದರಿಂದ ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ನಿರಾಳರಾಗಿದ್ದರು. ಆದ್ರೆ, ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಇಡಿ ತನಿಖೆಗೆ ಅನುಮತಿ ನೀಡಿದ್ದು, ಸಿದ್ದರಾಮಯ್ಯ ಸೇರಿ ಇತರೆ ಆರೋಪಿಗಳನ್ನು ಬಿಚ್ಚಿಬೀಳುವಂತೆ ಮಾಡಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಏಕ ಕಾಲಕ್ಕೆ ದಾಳಿ ನಡೆಸಿತ್ತು. ರಾಕೇಶ್ ಪಾಪಣ್ಣ ಹಾಗೂ ಅವರ ತಂದೆ ಪಾಪಣ್ಣ, ನಟೇಶ್ ಮನೆಗಳ ಮೇಲೆ ದಾಳಿ ಮಾಡಿ ಹಲವು ದಾಖಲೆ ಸಂಗ್ರಹಿಸಿತ್ತು. ಬಳಿಕ ಕೋರ್ಟ್ ಇಡಿ ತನಿಖೆಗೆ ಬ್ರೇಕ್ ಹಾಕಿತ್ತು. ಆದ್ರೆ, ಇದೀಗ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವುದದರಿಂದ ಇಡಿ, ಈ ಮುಡಾ ಹಗರಣದಲ್ಲಿ ಪ್ರವೇಶ ಮಾಡುವುದು ಖಚಿತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Wed, 2 April 25