ಮುಡಾ ಹಗರಣ: ಕೋರ್ಟ್ ಮೆಟ್ಟಿಲೇರಿದ ಇಡಿ, ಸಿದ್ದರಾಮಯ್ಯಗೆ ಢವ ಢವ
ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ನಡೆಸಿದೆ. ಲೋಕಾಯುಕ್ತ ವಿಚಾರಣಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಜಾರಾಗಿದ್ದರು. ಇದೀಗ, ಮತ್ತೆ ಮುಡಾ ಹಗರಣ ಮುನ್ನಲೆಗೆ ಬಂದಿದೆ. ಹಗರಣ ಮತ್ತೆ ಮುನ್ನಲೆಗೆ ಬರಲು ಕಾರಣವೇನು? ಇಲ್ಲಿದೆ ವಿವರ

ಮೈಸೂರು, ಏಪ್ರಿಲ್ 02: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ನಡೆಸಿದ ಲೋಕಾಯುಕ್ತ (Lokyukta) ವರದಿಯನ್ನು ಈಗಾಗಲೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದೆ. ಲೋಕಾಯುಕ್ತ ಸಲ್ಲಿಸಿರುವ ಈ ವರದಿಯನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ (ED), ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬದ ವಿರುದ್ಧದ ಸಾಕಷ್ಟು ಸಾಕ್ಷಿಗಳು ಇವೆ. ನಮ್ಮ ತನಿಖೆಯಲ್ಲಿ ಅವರ ತಪ್ಪುಗಳು ಸಾಬೀತಾಗಿವೆ. ಹೀಗಿದ್ದರೂ ಅವರು ಯಾವ ತಪ್ಪೂ ಮಾಡಿಲ್ಲ ಅಂದಿದ್ದಾರೆ. ಹೀಗಾಗಿ ಲೋಕಾಯುಕ್ತ ವರದಿ ತಿರಸ್ಕರಿಸಿ” ಎಂದು ಇಡಿ ಒಟ್ಟು 8 ಪುಟಗಳ ತಕರಾರು ಅರ್ಜಿ ಸಲ್ಲಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲ ನಡೆಸಿವೆ. ಲೋಕಾಯುಕ್ತ ಅಧಿಕಾರಿಗಳು ತಾವು ನಡೆಸಿದ ತನಿಖಾ ವರದಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ತನಿಖಾ ವರದಿಯನ್ನು ತಿರಸ್ಕರಿಸುವಂತೆ ಇಡಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಇಡಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಹೇಳಿದಂತೆ ಇಡಿ ಅಧಿಕಾರಿಗಳು ಕೇಳುತ್ತಾರೆ. ಯಾವ ಆಧಾರದ ಮೇಲೆ ತನಿಖೆ ಎಂದು ಹೈಕೋರ್ಟ್ ಪ್ರಶ್ನಿಸಿದೆ? ಇಡಿ, ಸಿಬಿಐ, ಐಟಿ ಪೊಲಿಟಿಕಲ್ ಮಾಸ್ಟರ್ಸ್ ಹೇಳಿದಂತೆ ಕೇಳುತ್ತವೆ. ಬಿಜೆಪಿಯವರ ವಿರುದ್ಧದ ತನಿಖೆಯ ಮಾಹಿತಿ ಏಕೆ ಬಹಿರಂಗ ಆಗಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ಸೈಟ್ ಸಿಕ್ಕಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ
ಏನಿದು ಮುಡಾ ಹಗರಣ?
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು.
ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ ಇದು ಚರ್ಚೆಗೆ ಕಾರಣವಾಗಿತ್ತು. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.