ನವದೆಹಲಿ, ನವೆಂಬರ್ 13: ಶ್ರೀಲಂಕಾ, ಇಸ್ರೇಲ್ ದೇಶಗಳಲ್ಲಿ ಪೋರ್ಟ್ಗಳನ್ನು ನಿರ್ಮಿಸುತ್ತಿರುವ ಅದಾನಿ ಗ್ರೂಪ್ (Adani Group) ಇದೀಗ ಇನ್ನೂ ಬೇರೆ ಬೇರೆ ದೇಶಗಳಲ್ಲಿ ಬಂದರುಗಳ ನಿರ್ಮಾಣ ಗುತ್ತಿಗೆಗೆ ಪ್ರಯತ್ನಿಸಲು ಆಲೋಚಿಸುತ್ತಿದೆ. ಅದಾನಿ ಗ್ರೂಪ್ ಸಿಇಒ ಕರಣ್ ಅದಾನಿ ಈ ವಿಚಾರವನ್ನು ದೃಢಪಡಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವರದಿ ಪ್ರಕಾರ, ಶ್ರೀಲಂಕಾ ಮತ್ತು ಇಸ್ರೇಲ್ನಲ್ಲಿ ಮಾತ್ರವಲ್ಲದೇ, ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ತಾಂಜೇನಿಯಾ ದೇಶಗಳಲ್ಲಿ ಪೋರ್ಟ್ ನಿರ್ಮಾಣ ಸಾಧ್ಯತೆಯನ್ನು ಅದಾನಿ ಗ್ರೂಪ್ ಅವಲೋಕಿಸುತ್ತಿದೆ. ಇತರ ದೇಶಗಳ ಜೊತೆ ಭಾರತದ ವ್ಯವಹಾರ ಹೆಚ್ಚುತ್ತಿರುವುದೂ ಬಂದರುಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿದೆ.
‘ಟ್ರೇಡಿಂಗ್ ವ್ಯಾಪಕವಾಗಿ ಹೆಚ್ಚುತ್ತಿದೆ. ನಾವು (ಭಾರತ) ಅದರೊಟ್ಟಿಗೆ ಓಡುತ್ತಿದ್ದೇವೆ. ನಮ್ಮಲ್ಲಿ ಪೂರ್ಣ ಸಾಮರ್ಥ್ಯದ ಕೊರತೆ ಯಾವಾಗಲೂ ಕಾಡುತ್ತಾ ಬಂದಿದೆ. ಈ ಸಂಗತಿ ಭಾರತೀಯ ವ್ಯವಹಾರಕ್ಕೆ ಹಿನ್ನಡೆ ತರುತ್ತಿದೆ,’ ಎಂದು ಅದಾನಿ ಗ್ರೂಪ್ನ ಸಿಇಒ ಕರಣ್ ಅದಾನಿ ಹೇಳಿದ್ದಾರೆ.
ಇದನ್ನೂ ಓದಿ: ಬೈಜೂಸ್ನ ಒಂದು ಭಾಗದ ಸಾಲ ತೀರಿಸಿದ ಮಣಿಪಾಲ್ ಸಂಸ್ಥೆಯ ರಂಜನ್ ಪೈ; ಅದಕ್ಕೆ ಬದಲಾಗಿ ಆಕಾಶ್ ಬೋರ್ಡ್ನಲ್ಲಿ ಸದಸ್ಯತ್ವ
ಹಿಂಡನ್ಬರ್ಗ್ ರೀಸರ್ಚ್ ಸಂಸ್ಥೆಯ ತನಿಖಾ ವರದಿ ಪ್ರಕಟಗೊಂಡ ಬಳಿಕ ಅದಾನಿ ಗ್ರೂಪ್ ಅಕ್ಷರಶಃ ಅಧಃಪತನವಾಗಿತ್ತು. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳಲು ಗ್ರೂಪ್ ಕೂಡ ಬಹಳಷ್ಟು ಶ್ರಮ ಹಾಕುತ್ತಿದೆ. ಕೊಲಂಬೋದಲ್ಲಿರುವ ಬಂದರಿನಲ್ಲಿ ವೆಸ್ಟ್ ಕಂಟೇನರ್ ಟರ್ಮಿನಲ್ ಅನ್ನು ಅದಾನಿ ಪೋರ್ಟ್ಸ್ ನಿರ್ಮಿಸುತ್ತಿದೆ. ಈ ಯೋಜನೆಗೆ ಅಮೆರಿಕ ಸರ್ಕಾರ ಬೆಂಬಲ ವ್ಯಕ್ತಪಡಿಸಿದ್ದು, ಆ ದೇಶದಿಂದ 553 ಮಿಲಿಯನ್ ಡಾಲರ್ ಹೂಡಿಕೆ ಈ ಪ್ರಾಜೆಕ್ಟ್ಗೆ ಹರಿದುಬರಲಿದೆ.
ಅಮೆರಿಕದ ಈ ನಡೆ ಎರಡು ರೀತಿಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಶ್ರೀಲಂಕಾ ನಿಧಾನವಾಗಿ ಚೀನಾ ತೆಕ್ಕೆಗೆ ಜಾರುವುದನ್ನು ತಪ್ಪಿಸುವುದು ಒಂದು; ಹಾಗೂ ಭಾರತದ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಇನ್ನೊಂದು. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ಕಡಿಮೆ ಮಾಡುವ ನಿಟ್ಟಿನಲ್ಲಿ ಇವೆಲ್ಲವೂ ಮುಖ್ಯ ಆಗುತ್ತದೆ. ಕುತೂಹಲವೆಂದರೆ ಕೊಲಂಬೋ ಪೋರ್ಟ್ನಲ್ಲಿ ಚೀನಾ ಕೂಡ ಒಂದು ಪ್ರತ್ಯೇಕ ಟರ್ಮಿನಲ್ ನಿರ್ಮಿಸಿದೆ.
ಇದನ್ನೂ ಓದಿ: ನವೆಂಬರ್ 10ರವರೆಗೂ ಭಾರತದ ಈಕ್ವಿಟಿ ಮಾರುಕಟ್ಟೆಗಳಿಂದ 5,800 ಕೋಟಿ ರೂ ವಿದೇಶೀ ಹೂಡಿಕೆಗಳು ಹಿಂತೆಗೆತ
ಪೋರ್ಟ್ ಮಾತ್ರವಲ್ಲ, ಇತರ ಅಂತಾರಾಷ್ಟ್ರೀಯ ಇನ್ಫ್ರಾಸ್ಟ್ರಕ್ಚರ್ ವ್ಯವಹಾರದಲ್ಲಿ ಹೆಜ್ಜೆ ಬಲಗೊಳಿಸುವುದು ಅದಾನಿ ಗ್ರೂಪ್ನ ಗುರಿಯಾಗಿದೆ. ಚೀನಾ ತನ್ನ ತೀವ್ರತೆಯನ್ನು ಕಡಿಮೆ ಮಾಡಿರುವುದು ಅದಾನಿ ಗ್ರೂಪ್ನಂತಹ ಕಂಪನಿಗಳಿಗೆ ಹೆಚ್ಚು ಅವಕಾಶ ಸಿಗುವಂತೆ ಮಾಡಬಹುದು ಎಂಬುದು ತಜ್ಞರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ