
ಸ್ಯಾನ್ ಜೋಸ್, ಸೆಪ್ಟೆಂಬರ್ 4: ಜಾಗತಿಕ ಸಾಫ್ಟ್‌ವೇರ್ ದೈತ್ಯ ಸಂಸ್ಥೆಯಾದ ‘ಅಡೋಬ್’ ನ (Adobe) ಮುಖ್ಯಸ್ಥರು ಬದಲಾಗಿದ್ದಾರೆ. 18 ವರ್ಷಗಳಿಂದ ಅಡೋಬ್ ಮುನ್ನಡೆಸಿದ್ದ ಶಂತನು ನಾರಾಯಣ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಅವರ ಜಾಗಕ್ಕೆ ಭಾರತ ಮೂಲದವರೇ ಆದ ಅನಿಲ್ ಚಕ್ರವರ್ತಿ ಬರಲಿದ್ದಾರೆ. ಅವರನ್ನು ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ಅಡೋಬ್ ನೇಮಕ ಮಾಡಿದೆ. ಅಮೆರಿಕದ ವಿಸ್ತೃತ ಟೆಕ್ ಲೋಕದಲ್ಲಿ ಸಿಇಒಗಳಾದ ಸುಂದರ್ ಪಿಚೈ (Google), ಸತ್ಯ ನಾದೆಳ್ಳ (Microsoft), ಶಂತನು ನಾರಾಯಣ್ ಮೊದಲಾದವರ ಸಾಲಿಗೆ ಮತ್ತೊಬ್ಬ ಭಾರತೀಯ ಸೇರ್ಪಡೆಯಾಗಿದ್ದಾರೆ. ಶಂತನು ನಾರಾಯಣ್ ಅವರು ಸಿಇಒ ಸ್ಥಾನದಿಂದ ಕೆಳಗಿಳಿದ ಮೇಲೆ ಎಕ್ಸಿಕ್ಯೂಟಿವ್ ಛೇರ್ಮನ್ ಹುದ್ದೆಯನ್ನು ಪಡೆಯಲಿದ್ದಾರೆ.
ಭಾರತ ಮೂಲದ ಅನಿಲ್ ಚಕ್ರವರ್ತಿ ಅವರು ಕಳೆದ ಆರು ವರ್ಷಗಳಿಂದ ಅಡೋಬ್ನಲ್ಲಿದ್ದಾರೆ. ಭಾರತದ ಪ್ರತಿಷ್ಠಿತ ಐಐಟಿ ವಾರಂಗಲ್ (IIT Warangal) ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಇವರು, ಬಳಿಕ ಅಮೆರಿಕದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯಿಂದ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿ ಪೂರೈಸಿದ್ದಾರೆ.
ಇದನ್ನೂ ಓದಿ: ಟಾಟಾ ಕಾರು ಖರೀದಿಸಲು ಸಾಲುಗಟ್ಟಿ ನಿಂತ ಜನರು, ಇವಿ ಮಾರಾಟದಲ್ಲೂ ಹೊಸ ದಾಖಲೆ
ಸುದೀರ್ಘ ಅನುಭವ: ಅಡೋಬ್‌ಗೆ ಸೇರ್ಪಡೆಯಾಗುವ ಮುನ್ನ ಇವರು ಡೇಟಾ ನಿರ್ವಹಣಾ ಸಂಸ್ಥೆಯಾದ ‘ಇನ್ಫಾರ್ಮ್ಯಾಟಿಕಾ’ (Informatica) ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ‘ಸಿಮ್ಯಾಂಟೆಕ್’ (Symantec) ಮತ್ತು ‘ಮೆಕಿನ್ಸೆ’ (McKinsey & Company) ಸಂಸ್ಥೆಗಳಲ್ಲಿ ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದರು.
2020 ರಲ್ಲಿ ಅಡೋಬ್‌ಗೆ ಸೇರ್ಪಡೆಯಾದ ಅನಿಲ್, ಸಂಸ್ಥೆಯ ಡಿಜಿಟಲ್ ಎಕ್ಸ್‌ಪೀರಿಯೆನ್ಸ್ ಬಿಸಿನೆಸ್ (Digital Experience Business) ವಿಭಾಗದ ಪ್ರಸಿಡೆಂಟ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ತಂತ್ರಜ್ಞಾನ ಆಧಾರಿತ ಅಡೋಬ್ ಕೊಡುಗೆಗಳನ್ನು ವಿಸ್ತರಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.
ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ರೂಪಾಂತರ ವೇಗವಾಗಿ ನಡೆಯುತ್ತಿರುವ ಈ ಸಮಯದಲ್ಲಿ, ಅಡೋಬ್‌ನ ಮುಂದಿನ ಹಂತದ ಬೆಳವಣಿಗೆಗೆ ಅನಿಲ್ ಚಕ್ರವರ್ತಿಯವರ ನಾಯಕತ್ವ ದಾರಿ ದೀಪವಾಗಲಿದೆ ಎಂದು ಕಂಪನಿಯ ನಿರ್ದೇಶಕರ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಜಾಗತಿಕ ಅಸ್ಥಿರತೆಯ ಮಧ್ಯೆಯೂ ಭಾರತದ್ದು ಸುದೃಢ ಸ್ಥಾನ: ಉದ್ಯಮಿ ಅಜಯ್ ಪಿರಮಾಲ್
ಅಡೋಬ್‌ನ ಸಿಇಒ ಆಗಿ ಶಂತನು ನಾರಾಯಣ್ ಅವರು ದೊಡ್ಡ ವ್ಯಾವಹಾರಿಕ ಕೊಡುಗೆ ನೀಡಿದ್ದಾರೆ. ಡೆಸ್ಕ್ಟಾಪ್ ಸಾಫ್ಟ್‌ವೇರ್ ಮಾತ್ರವೇ ಆಗಿದ್ದ ಅಡೋಬ್ ತಂತ್ರಾಂಶಗಳನ್ನು ಕ್ಲೌಡ್ ಪ್ಲಾಟ್ಫಾರ್ಮ್ಗೆ ತಂದಿದ್ದಾರೆ. ಏಕಕಾಲಿಕ ಪೇಮೆಂಟ್ ಬದಲು ಸಬ್ಸಕ್ರಿಪ್ಷನ್ ಮಾಡಲ್ ತಂದಿದ್ದಾರೆ. ಇವರ ಅವಧಿಯಲ್ಲಿ ಅಡೋಬ್ ಉತ್ತಮ ಆದಾಯ ಕಂಡಿದೆ. 2007ರಲ್ಲಿ ಅಡೋಬ್‌ನ ಆದಾಯ 3 ಬಿಲಿಯನ್ ಡಾಲರ್ ಇತ್ತು. ಈಗ ಅದು 20-25 ಬಿಲಿಯನ್ ಡಾಲರ್ಗೆ ಏರಿದೆ. ಇದು ಸಾಧ್ಯವಾಗಿದ್ದು ಸಿಇಒ ಆಗಿ ಶಂತನು ನಾರಾಯಣ್ ಅವರ ದೂರದೃಷ್ಟಿಯ ಆಲೋಚನೆಗಳಿಂದ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Fri, 4 September 26