
ಎಂಥ ಬುದ್ಧವಂತನಾದರೂ ಯಾವುದಾದರೂ ಸಂದರ್ಭದಲ್ಲಿ ಯಡವಟ್ಟು ಮಾಡುತ್ತಾನೆ ಎನ್ನುವುದಕ್ಕೆ ರೊನಾಲ್ಡ್ ವಾಯ್ನೆ (Ronald Wayne) ಒಂದು ನಿದರ್ಶನ. ಆ್ಯಪಲ್ ಕಂಪನಿಯನ್ನು ಕಟ್ಟಿದ ಪ್ರಮುಖರಲ್ಲಿ ಇವರೂ ಒಬ್ಬರು. ಕಂಪನಿಯ ಸಾಲಕ್ಕೆ ಹೆದರಿ ತಮ್ಮ ಶೇ. 10ರಷ್ಟು ಷೇರುಪಾಲನ್ನು ಕೇವಲ 800 ಡಾಲರ್ (2 ಲಕ್ಷ ರೂ) ಹಣಕ್ಕೆ ಮಾರಿಬಿಟ್ಟಿದ್ದರು. ಅವರೇನಾದರೂ ಆ ಷೇರುಗಳನ್ನು ಇವತ್ತಿಗೂ ಉಳಿಸಿಕೊಂಡಿದ್ದರೆ ಅದರ ಮೌಲ್ಯ 26 ಲಕ್ಷ ಕೋಟಿ ರೂಗಿಂತಲೂ ಹೆಚ್ಚಿರುತ್ತಿತ್ತು. ಜಗತ್ತಿನ 60 ಅತಿ ಶ್ರೀಮಂತರಲ್ಲಿ ಅವರೂ ಒಬ್ಬರೆನಿಸುತ್ತಿದ್ದರು. ಆದರೆ, ವಿಧಿಬರಹ ಬೇರೆಯೇ ಇತ್ತು.
ಆ್ಯಪಲ್ ಕಂಪನಿಯನ್ನು ಸ್ಥಾಪಿಸಿದವರು ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್. ಇವರಿಬ್ಬರಿಗೂ ಆಪ್ತರಾಗಿದ್ದವರು ರೊನಾಲ್ಡ್ ವಾಯ್ನೆ. ಆ್ಯಪಲ್ ಸ್ಥಾಪನೆಗೂ ಮುನ್ನ ರೊನಾಲ್ಡ್ ವಾಯ್ನೆ ಮತ್ತು ಸ್ಟೀವ್ ಜಾಬ್ಸ್ ಅವರು ಅಟಾರಿ ಎನ್ನುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಟೀವ್ ಜಾಬ್ಸ್ ಅವರಿಗೆ ಆ್ಯಪಲ್ ಸ್ಥಾಪಿಸುವ ಉದ್ದೇಶ ಇತ್ತು. ಈ ಕಾರ್ಯಕ್ಕೆ ವೋಜ್ನಿಯಾಕ್ ಅವರನ್ನು ಒಪ್ಪಿಸಬೇಕಿತ್ತು. ಅದರ ಜವಾಬ್ದಾರಿಯನ್ನು ವಾಯ್ನೆಗೆ ನೀಡಿದರು. ವಾಯ್ನೆ ಈ ಕೆಲಸದಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಇಎಫ್ಟಿಎ-ಭಾರತ ವ್ಯಾಪಾರ ಒಪ್ಪಂದ; 100 ಬಿಲಿಯನ್ ಡಾಲರ್ ಹೂಡಿಕೆ, 10 ಲಕ್ಷ ಉದ್ಯೋಗಸೃಷ್ಟಿ
ಕಂಪನಿ ಕಾನೂನು ವ್ಯವಹಾರಗಳ ಚೆನ್ನಾಗಿ ತಿಳಿದಿದ್ದ ರೊನಾಲ್ಡ್ ವಾಯ್ನೆ, ಆ್ಯಪಲ್ ಕಂಪನಿಯನ್ನು ಸ್ಥಾಪಿಸುವುದರಿಂದ ಹಿಡಿದು, ಪಾರ್ಟ್ನರ್ಶಿಪ್ ಒಪ್ಪಂದ, ಕಾನೂನು ದಾಖಲೆ ಇತ್ಯಾದಿ ಕಾನೂನಿಗೆ ಬದ್ಧವಾಗಿ ಬ್ಯುಸಿನೆಸ್ ಆಪರೇಟ್ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ವಾಯ್ನೆ ಮಾಡಿದರು.
ಇದಕ್ಕೆ ಬದಲಾಗಿ ರೊನಾಲ್ಡ್ ವಾಯ್ನೆ ಅವರಿಗೆ ಆ್ಯಪಲ್ ಕಂಪನಿಯ ಶೇ. 10ರಷ್ಟು ಷೇರುಪಾಲನ್ನು ನೀಡಲಾಯಿತು. ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ ಮತ್ತು ವೋಜ್ನಿಯಾಕ್ ಇಬ್ಬರೂ ತಲಾ ಶೇ. 45ರಷ್ಟು ಷೇರುಗಳನ್ನು ಪಡೆದಿದ್ದರು.
ಆ್ಯಪಲ್ ಕಂಪನಿಯ ಆರಂಭಿಕ ಹಂತವಾದ್ದರಿಂದ ಬಂಡವಾಳ ಇರಲಿಲ್ಲ. 50 ಕಂಪ್ಯೂಟರುಗಳನ್ನು ಸರಬರಾಜು ಮಾಡುವ ಆರ್ಡರ್ ಸಿಕ್ಕಿತು. ಅದನ್ನು ಪೂರೈಸಲು ಸ್ಟೀವ್ ಜಾಬ್ಸ್ 15,000 ಡಾಲರ್ ಸಾಲ ಮಾಡಿದ್ದರು. ಈ ವಿಚಾರ ವಾಯ್ನೆಗೆ ತಲೆಬಿಸಿ ತಂದಿತು. ಆರ್ಡರ್ ಕೊಟ್ಟಿರುವ ಸಂಸ್ಥೆಯು ಪೇಮೆಂಟ್ ಸರಿಯಾಗಿ ಮಾಡುವುದಿಲ್ಲ ಎನ್ನುವ ಕುಖ್ಯಾತಿ ಪಡೆದಿತ್ತು.
ಇದನ್ನೂ ಓದಿ: ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ… ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ
‘ನಮಗೆ ಹಣ ಸಿಗದಿದ್ದರೆ 15,000 ಡಾಲರ್ ಸಾಲ ಹೇಗೆ ತೀರಿಸುವುದು? ಜಾಬ್ಸ್ ಮತ್ತು ವೋಜ್ನಿಯಾಕ್ ಬಳಿ ಏನೂ ಆಸ್ತಿ ಇರಲಿಲ್ಲ. ನನ್ನ ಬಳಿ ಒಂದು ಮನೆ, ಕಾರು ಮತ್ತು ಬ್ಯಾಂಕ್ ಅಕೌಂಟ್ ಇತ್ತು. ಏನಾದರೂ ಹೆಚ್ಚುಕಡಿಮೆ ಆದರೆ ತೊಂದರೆ ಆಗುವುದು ನನಗೆಯೇ’ ಎಂದು ವಾಯ್ನೆ ಒಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದೇ ಕಾರಣಕ್ಕೆ 1976ರಲ್ಲಿ ಅವರು ಆ್ಯಪಲ್ ಕಂಪನಿಯಲ್ಲಿ ಇದ್ದ ತಮ್ಮ ಪಾಲಿನ ಶೇ. 10ರಷ್ಟು ಷೇರುಗಳನ್ನು ಮಾರಿಬಿಟ್ಟರು. ಅಂದು ಅದರ ಬೆಲೆ ತೀರಾ ಅತ್ಯಲ್ಪವಿತ್ತು. ಆ್ಯಪಲ್ ಕಂಪನಿ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ವಾಯ್ನೆಯಂಥ ವಾಯ್ನೆಗೂ ತಿಳಿಯಲಾಗಲಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ