ಕ್ಯಾಲಿಫೋರ್ನಿಯಾ: ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ (Adani Group) ವಿರುದ್ಧ ಜನವರಿ ತಿಂಗಳಲ್ಲಿ ಸ್ಫೋಟಕ ವರದಿ ಬಿಡುಗಡೆ ಮಾಡಿ ಷೇರುಗಳು ಪ್ರಪಾತಕ್ಕೆ ಬೀಳುವಂತೆ ಮಾಡಿದ್ದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ (Hindenburg Research) ಈಗ ಅಮೆರಿಕದ ಐಕಾನ್ ಎಂಟರ್ಪ್ರೈಸಸ್ ಎಲ್ಪಿ (IEP) ಸಂಸ್ಥೆಯನ್ನು ಟಾರ್ಗೆಟ್ ಮಾಡಿದೆ. ಆ್ಯಕ್ಟಿವಿಸ್ಟ್ ಇನ್ವೆಸ್ಟರ್ ಆಗಿ ಖ್ಯಾತರಾಗಿರುವ ಅಮೆರಿಕನ್ ಉದ್ಯಮಿ ಕಾರ್ಲ್ ಐಕಾನ್ (Carl Icahn) ಮಾಲೀಕತ್ವದ ಐಇಪಿ ಸಂಸ್ಥೆಯ ವ್ಯವಹಾರ ನೀತಿ ಸರಿಯಾಗಿಲ್ಲ ಎಂದು ಬಿಂಬಿಸಿ ಹಿಂಡನ್ಬರ್ಗ್ ರಿಸರ್ಚ್ ವರದಿಯೊಂದನ್ನು ಮೇ 2, ಮಂಗಳವಾರ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಅಮೆರಿಕದ ನಾಸ್ಡಾಕ್ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಐಕಾನ್ ಎಂಟರ್ಪ್ರೈಸಸ್ ಸಂಸ್ಥೆಯ ಷೇರು ಬೆಲೆ ಶೇ. 25ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಈ ಬೆಳವಣಿಗೆಯಿಂದ ಉದ್ಯಮಿ ಕಾರ್ಲ್ ಐಕಾನ್ ಅವರು 2.9 ಬಿಲಿಯನ್ ಡಾಲರ್ (ಸುಮಾರು 23 ಸಾವಿರ ಕೋಟಿ ರೂ) ಸಂಪತ್ತು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಐಕಾನ್ ಎಂಟರ್ಪ್ರೈಸಸ್ ಸಂಸ್ಥೆ ತನ್ನ ಷೇರುಗಳ ಮೌಲ್ಯವನ್ನು ಕೃತಕವಾಗಿ ಉಬ್ಬಿಸಿದೆ. ಡಿವಿಡೆಂಡ್ ಕೊಡುವ ವಿಷಯದಲ್ಲೂ ಅಕ್ರಮ ಮಾರ್ಗ ಅನುಸರಿಸಲಾಗಿದೆ. ಐಇಪಿಯ ಯೂನಿಟ್ಗಳ ವಾಸ್ತವ ಮೌಲ್ಯಕ್ಕಿಂತ ಶೇ. 75ರಷ್ಟು ಹೆಚ್ಚು ಉಬ್ಬಿಸಲಾಗಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ನ ವರದಿಯಲ್ಲಿ ಆರೋಪಿಸಲಾಗಿದೆ.
ಹಿಂಡನ್ಬರ್ಗ್ ರಿಸರ್ಚ್ ಪ್ರಕಾರ ಐಇಪಿಯ ಷೇರುಗಳ ಮೌಲ್ಯ ಉಬ್ಬಲು ಕಾರಣವಾಗಿದ್ದು ಅದರ ಶೇ. 15.8ರಷ್ಟು ಡಿವಿಡೆಂಡ್. ಅಮೆರಿಕದ ದೊಡ್ಡ ಬಂಡವಾಳದ ಯಾವುದೇ ಕಂಪನಿಯೂ ನೀಡದಷ್ಟು ಪ್ರಮಾಣದಲ್ಲಿ ಐಇಪಿ ತನ್ನ ಹೂಡಿಕೆದಾರರಿಗೆ ಡಿವಿಡೆಂಡ್ ನೀಡಿದೆ. ಹೊಸ ಹೂಡಿಕೆದಾರರಿಂದ ಪಡೆದ ಬಂಡವಾಳವನ್ನು ಹಳೆಯ ಹೂಡಿಕೆದಾರರಿಗೆ ಡಿವಿಡೆಂಡ್ ಕೊಡಲು ಬಳಸಲಾಗಿದೆ. ಅಲ್ಲದೇ ಐಇಪಿಯಲ್ಲಿ ಶೇ. 85ರಷ್ಟು ಪಾಲು ಹೊಂದಿರುವ ಕಾರ್ಲ್ ಐಕಾನ್ ಕ್ಯಾಷ್ ರೂಪದಲ್ಲಿ ಡಿವಿಡೆಂಡ್ ಪಡೆಯಬೇಕಿತ್ತು. ಆದರೆ, ಅದಕ್ಕೆ ಬದಲು ಆ ಮೊತ್ತದ ಷೇರುಗಳ ರೂಪದಲ್ಲಿ ಡಿವಿಡೆಂಡ್ ಪಡೆದಿದ್ದಾರೆ. ಡಿವಿಡೆಂಡ್ ಮೊತ್ತವನ್ನು ಉಬ್ಬಿಸಿ ಹೆಚ್ಚು ಷೇರು ಸಿಗುವಂತೆ ಮಾಡಿದ್ದಾರೆ. ಈ ಹೊಸ ಷೇರುಗಳನ್ನು ಐಇಪಿ ಮಾರುವಂತೆ ಮಾಡಿದ್ದಾರೆ. ಇದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ.
ಫ್ಲೋರಿಡಾ ರಾಜ್ಯದಲ್ಲಿರುವ ಐಕಾನ್ ಎಂಟರ್ಪ್ರೈಸಸ್ ಮಾಲೀಕ ಕಾರ್ಲ್ ಐಕಾನ್ 15 ಬಿಲಿಯನ್ ಡಾಲರ್ (ಸುಮಾರು 1.2 ಲಕ್ಷ ಕೋಟಿ ರೂ) ಸಂಪತ್ತಿನ ಕುಬೇರ. ಇವರು ಒಬ್ಬ ಆ್ಯಕ್ಟಿವಿಸ್ಟ್ ಇನ್ವೆಸ್ಟರ್. ಅಂದರೆ, ಯಾವುದೇ ಕಂಪನಿಯ ಆಡಳಿತ ವ್ಯವಸ್ಥೆ ಅಸಮರ್ಪಕ ಎನಿಸಿದಲ್ಲಿ ಇವರು ಆ ಸಂಸ್ಥೆಯ ಹೆಚ್ಚಿನ ಷೇರುಪಾಲು ಖರೀದಿಸಿ, ಆ ಮೂಲಕ ಕಂಪನಿ ಮ್ಯಾನೇಜ್ಮೆಂಟ್ನಲ್ಲಿ ಬದಲಾವಣೆ ತರುತ್ತಾರೆ. ಅವರ ಪ್ರಕಾರ ಅದು ಸುಧಾರಣಾ ಕ್ರಮ. ಹಿಂಡನ್ವರ್ಗ್ ರಿಸರ್ಚ್ ಮಾಡುವ ರೀತಿಯ ಕೆಲಸಗಳಿಂದಲೇ ಐಕಾನ್ ಹೆಸರುವಾಸಿಯಾಗಿದ್ದಾರೆ. ಈಗ ಅವರ ಮುಳ್ಳು ಅವರಿಗೇ ಚುಚ್ಚಿದೆ.
ಯಹೂದಿ ಜನಾಂಗಕ್ಕೆ ಸೇರಿದ ಕಾರ್ಲ್ ಐಕಾನ್ ಅವರ ಮಾಲೀಕತ್ವದ ಐಇಪಿ ಅಡಿಯಲ್ಲಿ ಹಲವಾರು ಸಂಸ್ಥೆಗಳು ನಡೆಯುತ್ತಿವೆ. ಪೆಟ್ರೋಲಿಯಂ ರಿಫೈನಿಂಗ್ನಿಂದ ಹಿಡಿದು ಫಾರ್ಮಾ ಸಂಸ್ಥೆಯವರೆಗೂ ಹಲವು ವ್ಯವಹಾರಗಳನ್ನು ಕಾರ್ಲ್ ಐಕಾನ್ ನಿಭಾಯಿಸುತ್ತಾರೆ.
ಕಾರ್ಲ್ ಐಕಾನ್ ಅವರು ಡೊನಾಲ್ಡ್ ಟ್ರಂಪ್ ಬೆಂಬಲಿಗರಾಗಿ ಗುರುತಿಸಿಕೊಂಡವರು. 2016ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್ಗೆ ಐಕಾನ್ ಬೆಂಬಲ ನೀಡಿದ್ದರು. ತಾವು ಅಧ್ಯಕ್ಷರಾದರೆ ಕಾರ್ಲ್ ಐಕಾನ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡುತ್ತೇನೆ ಎಂದೂ ಟ್ರಂಪ್ ಘೋಷಿಸಿದ್ದರು. ಆದರೆ, ಅಧ್ಯಕ್ಷರಾದ ಬಳಿಕ ಐಕಾನ್ ಬದಲು ಸ್ಟೀವ್ ಮುಚಿನ್ ಅವರನ್ನು ಸಚಿವರನ್ನಾಗಿ ಮಾಡಿದರು. 2016 ಡಿಸೆಂಬರ್ನಲ್ಲಿ ಡೊನಾಲ್ಡ್ ಟ್ರಂಪ್ ಅವರು ತಮಗೆ ಸ್ಪೆಷನ್ ಅಡ್ವೈಸರ್ ಆಗಿ ಐಕಾನ್ರನ್ನು ನೇಮಿಸಿಕೊಂಡರು. 2017ರ ಆಗಸ್ಟ್ನಲ್ಲಿ ಐಕಾನ್ ಆ ಸ್ಥಾನದಿಂದ ಹೊರಬರಬೇಕಾಯಿತು.
ಅದಾದ ಬಳಿಕವೂ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಲ್ ಐಕಾನ್ ಮಧ್ಯೆ ಸಂಬಂಧ ಉತ್ತಮವಾಗಿಯೇ ಇತ್ತು. ಈಗಲೂ ಕೂಡ ಅವರು ಟ್ರಂಪ್ ಪರ ನಿಲುವು ಹೊಂದಿದ್ದಾರೆ.
ತಮ್ಮ ವಿರುದ್ದ ಆರೋಪ ಮಾಡುವ ಮೂಲಕ ಹಿಂಡನ್ಬರ್ಗ್ ತನ್ನ ಯಾವುದೋ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂಬರ್ಥದಲ್ಲಿ ಐಇಪಿ ಮಾಲೀಕ ಕಾರ್ಲ್ ಐಕಾನ್ ತಿರುಗೇಟು ನೀಡಿದ್ದಾರೆ. ಐಇಪಿಯ ದೀರ್ಘಾವಧಿ ಷೇರುದಾರರನ್ನು ಬಲಿಕೊಟ್ಟು ಹಿಂಡನ್ಬರ್ಗ್ ಸ್ವಾರ್ಥ ಸಾಧನೆಯ ಕಾರ್ಯ ಇದು ಎಂದು ಐಕಾನ್ ಹೇಳಿದ್ದಾರೆ.
ನಮ್ಮ ಸಾರ್ವಜನಿಕ ಹೇಳಿಕೆಗಳಿಗೆ ಬದ್ಧರಾಗಿದ್ದೇವೆ. ದೀರ್ಘಾವಧಿಯಲ್ಲಿ ಐಇಪಿಯ ಕಾರ್ಯಸಾಧನೆಯೇ ಎಲ್ಲವನ್ನೂ ಹೇಳುತ್ತದೆ ಎಂದೂ ಕಾರ್ಲ್ ಐಕಾನ್ ತಿಳಿಸಿದ್ದಾರೆ.