Go First: ಎಂಜಿನ್ ವೈಫಲ್ಯಕ್ಕೆ ದಿವಾಳಿ ಆಯಿತಾ ಗೋ ಫಸ್ಟ್ ಏರ್ಲೈನ್ಸ್?; ಏನಿದು ಕರ್ಮಕಾಂಡ? ದಿಢೀರ್ ಟಿಕೆಟ್ ರದ್ದಾಗಿದ್ದಕ್ಕೆ ಪ್ರಯಾಣಿಕರು ಶಾಕ್..!
Engine Failure Leading To Airlines Closure: ಕಡಿಮೆ ಬೆಲೆಯಲ್ಲಿ ವಿಮಾನ ಹಾರಾಟ ಸೇವೆ ನೀಡುವ ಗೋ ಫಸ್ಟ್ ಸಂಸ್ಥೆ ಇನ್ಸಾಲ್ವೆಸಿ ಅರ್ಜಿ ಸಲ್ಲಿಸಿದೆ. ಹಾಗೆಯೇ ಮೇ 3 ಮತ್ತು 4 ರಂದು ತನ್ನೆಲ್ಲಾ ವಿಮಾನ ಹಾರಾಟ ರದ್ದು ಮಾಡಿದೆ. ದಿವಾಳಿ ಅರ್ಜಿ ಸ್ವೀಕೃತವಾದರೆ ಸೇವೆ ಪುನಾರಂಭಿಸುವುದಾಗಿ ಅದು ಹೇಳಿದೆ. ಅಷ್ಟಕ್ಕೂ ಗೋ ಫಸ್ಟ್ ದಿವಾಳಿಯಾಗಲು ಎಂಜಿನ್ ವೈಫಲ್ಯ ಕಾರಣವಾಯಿತಾ?
ನವದೆಹಲಿ: ವಾಡಿಯಾ ಗ್ರೂಪ್ ಒಡೆತನದ ಗೋ ಫಸ್ಟ್ ವಿಮಾನ ಸಂಸ್ಥೆ ದಿವಾಳಿ (Insolvency Resolution) ಮನವಿ ಸಲ್ಲಿಸಿದೆ. ದೆಹಲಿಯಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ಬಳಿ ವಾಲಂಟ್ರಿ ಇನ್ಸಾಲ್ವೆನ್ಸಿ ರೆಸಲ್ಯೂಷನ್ ಪ್ರಕ್ರಿಯೆಗೆ (Voluntary Insolvency Resolution Processing) ಅರ್ಜಿ ಹಾಕಿದೆ. ಈ ವಿಚಾರವನ್ನು ಸ್ವತಃ ಗೋ ಫಸ್ಟ್ ಸಂಸ್ಥೆ (Go First Airlines) ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ಈ ಪ್ರಕಟಣೆಗೆ ಕೆಲ ಗಂಟೆ ಮೊದಲು ಗೋ ಫಸ್ಟ್ ಎರಡು ದಿನಗಳ ಕಾಲ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಿರುವುದಾಗಿ ಪ್ರಕಟಿಸಿತ್ತು. ಹಣದ ಕೊರತೆಯಿಂದಾಗಿ ಮೇ 3 ಮತ್ತು 4ರಂದು ಫ್ಲೈಟ್ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ದಿಢೀರನೇ ಹೇಳಿ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಇದೀಗ ನ್ಯಾಯಮಂಡಳಿ ಬಳಿ ಸಲ್ಲಿಸಿರುವ ತಮ್ಮ ದಿವಾಳಿ ಅರ್ಜಿ ಸ್ವೀಕೃತವಾದರೆ ವಿಮಾನ ಹಾರಾಟ ಪುನಾರಂಭಿಸುವುದಾಗಿ ಗೋ ಫಸ್ಟ್ ಸಿಇಒ ಕೌಶಿಕ್ ಖೋನಾ ಹೇಳಿದ್ದಾರೆ.
ದಿಢೀರ್ ವಿಮಾನ ಟಿಕೆಟ್ ರದ್ದಾಗಿದ್ದರಿಂದ ಪ್ರಯಾಣಿಕರಿಗೆ ಶಾಕ್
ಗೋ ಫಸ್ಟ್ ಕಡಿಮೆ ಬೆಲೆಯಲ್ಲಿ ವಿಮಾನ ಹಾರಾಟ ಸೇವೆ ನೀಡುವ ಸಂಸ್ಥೆ. ಗೋ ಫಸ್ಟ್ಗೆ ಸಾಕಷ್ಟು ಪ್ರಯಾಣಿಕರಿದ್ದಾರೆ. ಫ್ಲೈಟ್ ರದ್ದಾಗಿದೆ ಎಂದು ಒಂದೆರಡು ದಿನ ಮುಂಚೆ ಘೋಷಿಸಲಾಗಿದೆ. ಆ ದಿನಗಳಿಗೆ ಟಿಕೆಟ್ ಬುಕ್ ಮಾಡಿದವರು ಕಂಗಾಲಾಗಿದ್ದಾರೆ. ಟಿಕೆಟ್ ಬುಕಿಂಗ್ ಹಣವನ್ನು ಮರಳಿಸಲಾಗುವುದಾದರೂ ಅದೇ ದಿನ ತುರ್ತಾಗಿ ಹೋಗಬೇಕಿದ್ದವರ ಕಥೆ ಏನು? ಸೋಷಿಯಲ್ ಮೀಡಿಯಾದಲ್ಲಿ ಗೋ ಫಸ್ಟ್ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಡಿಮೆ ಬೆಲೆಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕೊಡುತ್ತದೆ ಎಂಬುದನ್ನು ಬದಿಗಿಟ್ಟು ನೋಡಿದರೆ ಗೋ ಫಸ್ಟ್ ಅತ್ಯಂತ ಕೆಟ್ಟ ನಿರ್ವಹಣೆ ಇರುವ ಏರ್ಲೈನ್ಸ್ ಎಂದು ಹಲವರು ಟೀಕಿಸಿದ್ದಾರೆ.
ಇದನ್ನೂ ಓದಿ: Tata Wistron: ಕರ್ನಾಟಕದಲ್ಲಿ 12,000 ಉದ್ಯೋಗಿಗಳಿದ್ದ ಘಟಕ ಟಾಟಾಗೆ ಕೊಟ್ಟು ಭಾರತದಿಂದಲೇ ಕಾಲ್ತೆಗೆಯಲಿರುವ ವಿಸ್ಟ್ರಾನ್
ಮೇ 2 ಮತ್ತು 3ರಂದು ಗೋ ಫಸ್ಟ್ನಲ್ಲಿ ಟಿಕೆಟ್ ಬುಕ್ ಮಾಡಿದ್ದವರು ಈಗ ತುರ್ತಾಗಿ ಹೋಗಬೇಕೆಂದರೆ ದುಬಾರಿ ಹಣ ತೆತ್ತು ಬೇರೆ ಫ್ಲೈಟ್ಗಳಲ್ಲಿ ತೆರಳಬೇಕಾಗುತ್ತದೆ. ಕೆಲ ಮಾರ್ಗಗಳಲ್ಲಿ ಒಂದು ವಾರಕ್ಕೆ ಎಲ್ಲಾ ವಿಮಾನಗಳ ಎಲ್ಲಾ ಟಿಕೆಟ್ಗಳೂ ಬುಕ್ ಆಗಿರುತ್ತವೆ. ಹೆಚ್ಚು ಹಣ ತೆತ್ತರೂ ಟಿಕೆಟ್ ಸಿಗುವ ಖಾತ್ರಿ ಇಲ್ಲ. ವಿಪರ್ಯಾಸ ಎಂದರೆ ಎನ್ಸಿಎಲ್ಟಿಗೆ ತಾನು ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಸ್ವೀಕೃತವಾದರೆ ವಿಮಾನ ಹಾರಾಟ ಪುನಾರಂಭಿಸುತ್ತೇವೆ. ಇಲ್ಲದಿದ್ದರೆ ವೈಮಾನಿಕ ಸೇವೆ ಇರುವುದಿಲ್ಲ ಎಂದು ಹೇಳಲಾಗಿದೆ.
ಗೋ ಫಸ್ಟ್ ಈ ಸ್ಥಿತಿಗೆ ಬರಲು ಕಾರಣವಾಗಿದ್ದ ವಿಮಾನದ ಎಂಜಿನ್ಗಳೇ?
ಫಂಡಿಂಗ್ ಕೊರತೆಯಿಂದಾಗಿ ಎರಡು ದಿನ ವಿಮಾನ ಹಾರಾಟ ನಿಲ್ಲಿಸುವುದಾಗಿ ಗೋ ಫಸ್ಟ್ ಹೇಳಿದೆ. ಈ ಫಂಡಿಂಗ್ ಕೊರತೆಗೆ ಕಾರಣವಾಗಿದ್ದು ಗೋ ಫಸ್ಟ್ ತನ್ನ 28 ವಿಮಾನಗಳ ಹಾರಾಟ ನಿಲ್ಲಿಸಿದ್ದು. ಅದರ ಅರ್ಧಕ್ಕಿಂತ ಹೆಚ್ಚು ವಿಮಾನಗಳು ಗ್ರೌಂಡ್ ಆಗಿವೆ. ಈ ಕಾರಣಕ್ಕೆ ವಿಮಾನ ಸಂಸ್ಥೆ ಭಾರೀ ನಷ್ಟದಲ್ಲಿದೆ.
ಇದನ್ನೂ ಓದಿ: YouTube Money: ಯೂಟ್ಯೂಬ್ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ
ಈ ವಿಮಾನಗಳನ್ನು ನಿಲ್ಲಿಸಲು ಕಾರಣವಾಗಿದ್ದು ಎಂಜಿನ್ಗಳ ಸಮಸ್ಯೆ. ಗೋ ಫಸ್ಟ್ ವಿಮಾನಗಳಿರುವ ಎಂಜಿನ್ಗಳು ಅಮೆರಿಕದ ಪ್ರ್ಯಾಟ್ ಅಂಡ್ ವಿಟ್ನೀ ಸಂಸ್ಥೆಯದ್ದಾಗಿದೆ. ಈ ಎಂಜಿನ್ಗಳು ಸತತವಾಗಿ ವಿಫಲಗೊಳ್ಳುತ್ತಾ ಬಂದಿವೆ. ಇದರಿಂದಾಗಿ ಗೋ ಫಸ್ಟ್ 28 ವಿಮಾನಗಳ ಹಾರಾಟವನ್ನೇ ನಿಲ್ಲಿಸಿದೆ. ಬೇರೆ ಎಂಜಿನ್ಗಳನ್ನು ಒದಗಿಸಲು ಮಾಡಲಾದ ಮನವಿಗೆ ಪ್ರ್ಯಾಟ್ ಅಂಡ್ ವಿಟ್ನಿ ಕಿವಿಗೊಟ್ಟಿಲ್ಲ. ಹೀಗಾಗಿ, ಗೋ ಫಸ್ಟ್ಗೆ ನಷ್ಟದ ಮೇಲೆ ನಷ್ಟ ಆಗುತ್ತಿದೆ. ಕಳೆದ 3 ವರ್ಷದಲ್ಲಿ 3,200 ಕೋಟಿ ರೂ ಹೂಡಿಕೆ ಪಡೆದರೂ ಗೋ ಫಸ್ಟ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಎಂಜಿನ್ ಸಮಸ್ಯೆಯಿಂದಾಗಿ ಗೋ ಫಸ್ಟ್ಗೆ 10 ಸಾವಿರ ಕೋಟಿ ರೂಗೂ ಹೆಚ್ಚು ಆದಾಯ ತಪ್ಪಿದೆ ಎಂದು ಹೇಳಲಾಗಿದೆ.
ದಿವಾಳಿ ಅರ್ಜಿ ಸ್ವೀಕೃತವಾದರೆ ಮುಂದೇನು?
ಎನ್ಸಿಎಲ್ಟಿಯಲ್ಲಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಲಾಗಿದೆ ಎಂದರೆ ಒಂದು ಕಂಪನಿ ತಾನು ಮಾಡಿರುವ ಸಾಲವನ್ನು ಮರಳಿಸಲಾರೆ ಎಂದು ಹೇಳಿಕೊಳ್ಳುತ್ತಿದೆ ಎಂದರ್ಥ. ಈ ಸಾಲ ತೀರುವಳಿಗೆ ಏನಾದರೂ ವ್ಯವಸ್ಥೆ ಮಾಡಿ ಎಂದು ಕೋರಿಕೊಳ್ಳಲಾಗುತ್ತದೆ. ಹೂಡಿಕೆದಾರರಿಗೆ ನಷ್ಟ ಉಂಟಾಗಬಾರದೆಂಬ ಕಾರಣಕ್ಕೆ ಈ ಹೆಜ್ಜೆ ಇಡಲಾಗುತ್ತದೆ. ನಷ್ಟದಲ್ಲಿರುವ ಈ ಸಂಸ್ಥೆಯನ್ನು ಹರಾಜಿಗೆ ಹಾಕಿ ಯಾರಿಗಾದರೂ ಮಾರಬಹುದು ಸರ್ಕಾರ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Tue, 2 May 23