ನವದೆಹಲಿ: ಶೇಕಡಾ 75ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವ (Layoffs) ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಇದೀಗ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ಕಂಪನಿಯ ಉದ್ಯೋಗ ಕಡಿತ ಕೊನೆಯಾಗಿದೆ. ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂಬುದಾಗಿ ಕಂಪನಿಯ ಹೊಸ ಮಾಲೀಕ ಎಲಾನ್ ಮಸ್ಕ್ (Elon Musk) ಹೇಳಿರುವುದಾಗಿ ವರದಿಯಾಗಿದೆ. ಟ್ವಿಟರ್ ಅನ್ನು ಉದ್ಯಮಿ ಎಲಾನ್ ಮಸ್ಕ್ ಅಕ್ಟೋಬರ್ನಲ್ಲಿ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. 44 ಶತಕೋಟಿ ಡಾಲರ್ಗೆ ಟ್ವಿಟರ್ ಖರೀದಿಸಿದ್ದ ಅವರು, ಅದರ ಬೆನ್ನಲ್ಲೇ ಸಿಇಒ ಪರಾಗ್ ಅಗರ್ವಾಲ್, ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಿದ್ದರು. ಬಳಿಕ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ನಂತರ ಮಸ್ಕ್ ಅವರ ಕಠಿಣ ನಿಯಮಗಳನ್ನು ವಿರೋಧಿಸಿ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದರು. ಪರಿಣಾಮವಾಗಿ 2022ರ ಸೆಪ್ಟೆಂಬರ್ನಲ್ಲಿ 7,500 ಇದ್ದ ಟ್ವಿಟರ್ ಉದ್ಯೋಗಿಗಳ ಸಂಖ್ಯೆ ಇದೀಗ 2,700ಕ್ಕೆ ಇಳಿಕೆಯಾಗಿದೆ. ಸೋಮವಾರ ಕೂಡ ಮಾರಾಟ ವಿಭಾಗದಿಂದ ಕೆಲವು ಉದ್ಯೋಗಿಗಳನ್ನು ಮಸ್ಕ್ ವಜಾಗೊಳಿಸಿದ್ದರು.
ಆದಾಗ್ಯೂ, ಎಂಜಿನಿಯರಿಂಗ್ ಮತ್ತು ಮಾರಾಟ ವಿಭಾಗಕ್ಕೆ ನೇಮಕಾತಿಗೆ ಶಿಫಾರಸು ಮಾಡುವಂತೆ ಉದ್ಯೋಗಿಗಳಿಗೆ ತಿಳಿಸಲಾಗಿತ್ತು. ಆದರೆ, ಎಂಜಿನಿಯರಿಂಗ್ ಮತ್ತು ಮಾರಾಟ ವಿಭಾಗಕ್ಕೆ ಯಾವ ರೀತಿಯ ಉದ್ಯೋಗಿಗಳು ಬೇಕು ಎಂಬುದರ ಬಗ್ಗೆ ಕಂಪನಿಯಲ್ಲಿ ಸ್ಪಷ್ಟತೆ ಇರಲಿಲ್ಲ. ಯಾಕೆಂದರೆ ಕಂಪನಿಯ ವೆಬ್ಸೈಟ್ನಲ್ಲಿ ಈ ಹುದ್ದೆಗಳು ಖಾಲಿ ಇಲ್ಲ ಎಂದು ನಮೂದಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಈ ಮಧ್ಯೆ, ಸೋಮವಾರ ಟ್ವಟರ್ ಉದ್ಯೋಗಿಗಳ ಜತೆ ಮಸ್ಕ್ ಸಭೆ ನಡೆಸಿದ್ದಾರೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿರುವವರನ್ನು ಆದ್ಯತೆ ಮೇಲೆ ಕಂಪನಿಗೆ ನೇಮಕಾತಿ ಮಾಡಿಕೊಳ್ಳಲು ಬಯಸುತ್ತಿರುವುದಾಗಿ ಮಸ್ಕ್ ಹೇಳಿದ್ದಾರೆ ಎಂದೂ ವರದಿ ತಿಳಿಸಿದೆ.
ಪ್ರಧಾನ ಕಚೇರಿ ಸ್ಥಳಾಂತರ ಸದ್ಯಕ್ಕಿಲ್ಲ
ಟ್ವಿಟರ್ನ ಪ್ರಧಾನ ಕಚೇರಿಯನ್ನು ತಕ್ಷಣವೇ ಟೆಕ್ಸಾಸ್ಗೆ ಸ್ಥಳಾಂತರಿಸುವ ಯೋಜನೆ ಸದ್ಯಕ್ಕಿಲ್ಲ ಎಂದೂ ಮಸ್ಕ್ ತಿಳಿಸಿದ್ದಾರೆ. ಫೆಡೆರಲ್ ಟ್ಯಾಕ್ಸ್ ಕಡಿಮೆ ಇರುವುದರಿಂದ ಟೆಸ್ಲಾ ಕಂಪನಿಯ ಪ್ರಧಾನ ಕಚೇರಿಯನ್ನು ಮಸ್ಕ್ ಟೆಕ್ಸಾಸ್ಗೆ ಸ್ಥಳಾಂತರಿಸಿದ್ದರು. ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‌ನಲ್ಲಿ ಎರಡು ಪ್ರಧಾನ ಕಚೇರಿಗಳನ್ನು ಹೊಂದಿರುವುದು ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದ್ದರು. ಇದೇ ರೀತಿ ಟ್ವಿಟರ್ ಪ್ರಧಾನ ಕಚೇರಿಯೂ ಸ್ಥಳಾಂತರಗೊಳ್ಳಬಹುದು ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ ಇದನ್ನು ಮಸ್ಕ್ ನಿರಾಕರಿಸಿದ್ದಾರೆ.
ವಜಾಗೊಂಡ ಕೆಲವರನ್ನು ಮತ್ತೆ ಬನ್ನಿ ಎಂದಿದ್ದ ಮಸ್ಕ್
ವಜಾಗೊಂಡ ಕೆಲವು ಸಿಬ್ಬಂದಿಯನ್ನು ಕಂಪನಿಗೆ ಮತ್ತೆ ಕೆಲಸಕ್ಕೆ ಬನ್ನಿ ಎಂದು ಮಸ್ಕ್ ಆಹ್ವಾನಿಸಿದ್ದಾರೆ. ಮರಳಿ ಕೆಲಸಕ್ಕೆ ಬರುವಂತೆ ಕೆಲವು ಉದ್ಯೋಗಿಗಳಿಗೆ ಕಂಪನಿಯಿಂದ ಸಂದೇಶ ಬಂದಿದೆ ಎಂದು ಎಂಬುದಾಗಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ‘ಅಚಾತುರ್ಯದಿಂದಾಗಿ ವಜಾಗೊಳಿಸಲಾಗಿದೆ, ವಾಪಸ್ ಬನ್ನಿ’ ಎಂದು ಕೆಲವು ಮಂದಿ ಸಿಬ್ಬಂದಿಗೆ ಸಂದೇಶ ಕಳುಹಿಸಲಾಗಿದೆ. ಇನ್ನು ಕೆಲವು ಉದ್ಯೋಗಿಗಳ ಅನುಭವ ಮತ್ತು ಕೌಶಲ್ಯ ಮಸ್ಕ್ ಅವರ ಭವಿಷ್ಯದ ದೃಷ್ಟಿಕೋನ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿದೆ ಎಂದು ಆಡಳಿತ ಭಾವಿಸಿದೆ. ಈ ಕಾರಣಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ಸದ್ಯದ ಬೆಳವಣಿಗೆಗೆ ಸಂಬಂಧಿಸಿ ಮಾಹಿತಿಯುಳ್ಳ ಉನ್ನತ ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿದ್ದವು.
Published On - 4:27 pm, Tue, 22 November 22