Google Layoffs: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ನಿಂದ 10,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ; ವರದಿ
ಗೂಗಲ್ನ ಲಾಭದ ಪ್ರಮಾಣ ಕುಸಿಯುತ್ತಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 13.9 ಶತಕೋಟಿ ಡಾಲರ್ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭಕ್ಕಿಂತ ಶೇಕಡಾ 27ರಷ್ಟು ಕಡಿಮೆಯಾಗಿದೆ.
ನವದೆಹಲಿ: ಗೂಗಲ್ನ (Google) ಮಾತೃಸಂಸ್ಥೆ ಅಲ್ಫಾಬೆಟ್ (Alphabet) ಸದ್ಯದಲ್ಲೇ 10,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಿದೆ (Layoffs) ಎಂದು ವರದಿಯಾಗಿದೆ. ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದಕ್ಕಾಗಿ ಕಂಪನಿ ಈ ಕ್ರಮಕ್ಕೆ ಮುಂದಾಗಲಿದೆ ಎನ್ನಲಾಗಿದೆ. ಕಳಪೆ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಗುರುತಿಸಲು ಗೂಗಲ್ನ ಮ್ಯಾನೇಜರ್ಗಳಿಗೆ ಸೂಚಿಸಲಾಗಿದೆ. ಕಂಪನಿಯು ಒಟ್ಟು ಉದ್ಯೋಗಿಗಳ ಶೇಕಡಾ 6ರಷ್ಟು ಮಂದಿಯನ್ನು ವಜಾಗೊಳಿಸಲು ಮುಂದಾಗಿದೆ. ಕಳಪೆ ಕಾರ್ಯಕ್ಷಮತೆ ಗುರುತಿಸುವಿಕೆಗೆ ಗೂಗಲ್ ಶ್ರೇಯಾಂಕ ಪದ್ಧತಿ ಅನುಸರಿಸಲಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಗೂಗಲ್ ನೇಮಕಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು. ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವೇತನದ ಬಗ್ಗೆ ತಜ್ಞರು ಗೂಗಲ್ಗೆ ಎಚ್ಚರಿಕೆ ನೀಡಿದ್ದರು. ಟೆಕ್ ಕ್ಷೇತ್ರದ ಇತರ ಕಂಪನಿಗಳಿಗೆ ಹೋಲಿಸಿದರೆ ಗೂಗಲ್ ತುಂಬಾ ಹೆಚ್ಚು ವೇತನ ನೀಡುತ್ತಿದೆ ಎಂದು ಶತಕೋಟ್ಯಧಿಪತಿ ಹೂಡಿಕೆದಾರ ಕ್ರಿಸ್ಟೋಫರ್ ಹಾನ್ ಇತ್ತೀಚೆಗೆ ಹೇಳಿದ್ದರು. ನೇಮಕಾತಿಯು ಕಂಪನಿಯ ಅಗತ್ಯಕ್ಕಿಂತಲೂ ಹೆಚ್ಚಾಗಿದೆ ಎಂದೂ ಅವರು ಹೇಳಿದ್ದರು.
ನೇಮಕಾತಿ ವಿಳಂಬ ಘೋಷಿಸಿದ್ದ ಗೂಗಲ್
ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುವುದಾಗಿ ಗೂಗಲ್ ಘೋಷಿಸಿತ್ತು. ಆದಾಗ್ಯೂ, ಆರ್ಥಿಕತೆಯು ಉದ್ಯೋಗಿ ಸ್ನೇಹಿ ಕಂಪನಿಯನ್ನು ಉದ್ಯೋಗ ಕಡಿತ ಮಾಡುವ ಕಂಪನಿಯನ್ನಾಗಿ ಪರಿವರ್ತಿಸಿದೆ. ಇದು ನಿರೀಕ್ಷೆಗಿಂತಲೂ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ.
ಪ್ರಸ್ತುತ ಅಲ್ಫಾಬೆಟ್ 1,87,000 ಉದ್ಯೋಗಿಗಳನ್ನು ಒಳಗೊಂಡಿದೆ. ಈ ಮೂಲಕ ಟೆಕ್ ಉದ್ಯಮದಲ್ಲೇ ಅತಿಹೆಚ್ಚು ಮಂದಿಗೆ ಉದ್ಯೋಗ ನೀಡುತ್ತಿರುವ ಕಂಪನಿಯಾಗಿ ಗುರುತಿಸಿಕೊಂಡಿದೆ. ಅಮೆರಿಕದ ಎಸ್ಇಸಿಯಲ್ಲಿ ನೋಂದಾಯಿಸಿರುವ ಪ್ರಕಾರ ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ವೇತನದ ಮೊತ್ತವೇ ಅಂದಾಜು 2.41 ಕೋಟಿ ರೂ. ಆಗಿದೆ.
ಗೂಗಲ್ ಲಾಭದಲ್ಲಿ ಕುಸಿತ
ಮತ್ತೊಂದೆಡೆ ಗೂಗಲ್ನ ಲಾಭದ ಪ್ರಮಾಣ ಕುಸಿಯುತ್ತಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 13.9 ಶತಕೋಟಿ ಡಾಲರ್ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭಕ್ಕಿಂತ ಶೇಕಡಾ 27ರಷ್ಟು ಕಡಿಮೆಯಾಗಿದೆ. ಆದಾಯದಲ್ಲಿ ಶೇಕಡಾ 6ರಷ್ಟು ಹೆಚ್ಚಳವಾಗಿ 69.1 ಶತಕೋಟಿ ಡಾಲರ್ ಆದ ಹೊರತಾಗಿಯೂ ಲಾಭದಲ್ಲಿ ಕುಸಿತವಾಗಿದೆ. ಇದು ಅಲ್ಫಾಬೆಟ್ನ ಉದ್ಯೋಗ ಕಡಿತ ನಿರ್ಧಾರಕ್ಕೆ ಕಾರಣವಗಿರಬಹುದು ಎನ್ನಲಾಗಿದೆ.
ಉದ್ಯೋಗ ಕಡಿತಗೊಳಿಸುವ ಕಂಪನಿಗಳ ಪಟ್ಟಿ ಸೇರಿದ ಗೂಗಲ್
ಮೈಕ್ರೋಸಾಫ್ಟ್, ಮೆಟಾ, ಟ್ವಿಟರ್, ಅಮೆಜಾನ್ ಬೆನ್ನಲ್ಲೇ ಇದೀಗ ಗೂಗಲ್ ಸಹ ಉದ್ಯೋಗ ಕಡಿತಗೊಳಿಸುವ ಕಂಪನಿಗಳ ಪಟ್ಟಿ ಸೇರಿದೆ. ಮೆಟಾ ಇತ್ತೀಚೆಗೆ 11,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಮೈಕ್ರೋಸಾಫ್ಟ್ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಟ್ವಿಟರ್ 3,500ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ಮನೆಗೆ ಕಳುಹಿಸಿತ್ತು. ಅಮೆಜಾನ್ ಸಹ 2023ರ ವರೆಗೂ ಉದ್ಯೋಗ ಕಡಿತ ಮುಂದುವರಿಸುವುದಾಗಿ ಇತ್ತೀಚೆಗೆ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ