Property Investment: ಆಸ್ತಿ ಹೂಡಿಕೆಯಲ್ಲಿ ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ

ಚೀನಾದಲ್ಲಿ ಆಸ್ತಿ ಮೇಲಿನ ಹೂಡಿಕೆ ಕಡಿಮೆಯಾಗುತ್ತಿದ್ದು, ಭಾರತ ಹೂಡಿಕೆದಾರರ ನೆಚ್ಚಿನ ತಾಣವಾಗಿ ಗಮನ ಸೆಳೆಯುತ್ತಿದೆ. ಶೀಘ್ರದಲ್ಲೇ ಭಾರತವು ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Property Investment: ಆಸ್ತಿ ಹೂಡಿಕೆಯಲ್ಲಿ ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ
ಸಾಂದರ್ಭಿಕ ಚಿತ್ರImage Credit source: ANI
Follow us
TV9 Web
| Updated By: Ganapathi Sharma

Updated on: Nov 22, 2022 | 12:13 PM

ಸಿಂಗಾಪುರ: ಚೀನಾದಲ್ಲಿ (China) ಆಸ್ತಿ ಮೇಲಿನ ಹೂಡಿಕೆ (Property Investment) ಕಡಿಮೆಯಾಗುತ್ತಿದ್ದು, ಭಾರತ (India) ಹೂಡಿಕೆದಾರರ ನೆಚ್ಚಿನ ತಾಣವಾಗಿ ಗಮನ ಸೆಳೆಯುತ್ತಿದೆ. ಶೀಘ್ರದಲ್ಲೇ ಭಾರತವು ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಆಸ್ತಿ ದರ ಸೂಚ್ಯಂಕ ಸ್ಥಿರವಾಗಿ ಬೆಳವಣಿಗೆಯಾಗುತ್ತಿದೆ. ಆರ್​ಬಿಐ ಇತ್ತೀಚೆಗೆ ಅಖಿಲ ಭಾರತ ಗೃಹ ದರ ಸೂಚ್ಯಂಕ (ಎಚ್​ಪಿಐ) ಬಿಡುಗಡೆ ಮಾಡಿದ್ದು, ವಾರ್ಷಿಕ ಶೇಕಡಾ 3.5ರ ಬೆಳವಣಿಗೆ ದಾಖಲಿಸಿದೆ. ಜೂನ್​ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 1.8ರ ಬೆಳವಣಿಗೆ ಸಾಧಿಸಿದೆ ಎಂದು ‘ಎಎನ್​ಐ’ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.

ಭಾರತ ಮತ್ತು ವಿಯೆಟ್ನಾಂನಲ್ಲಿ ಹೂಡಿಕೆಗೆ ಎದುರುನೋಡುತ್ತಿರುವುದಾಗಿ ನಿಕ್ಕಿ ಏಷ್ಯಾಗೆ ನೀಡಿದ ಸಂದರ್ಶನದಲ್ಲಿ ಸಿಂಗಾಪುರದ ಹೂಡಿಕೆ ಸಂಸ್ಥೆ ಕ್ಯಾಪಿಟಲ್​ಲ್ಯಾಂಡ್ ಇನ್ವೆಸ್ಟ್​ಮೆಂಟ್ ಅಥವಾ ಸಿಎಲ್​ಐ (CapitaLand Investment) ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಎದುರಾದ ಜಾಗತಿಕ ಆಘಾತಗಳ ನಡುವೆ ಪೂರೈಕೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಸ್ಥಿತಿ ಸ್ಥಾಪಕತ್ವ ಹೊಂದುವುದೇ ಕಂಪನಿಯ ಗುರಿಯಾಗಿದೆ ಎಂದು ಅದು ತಿಳಿಸಿದೆ.

ಸಿಎಲ್ಐಯ ಅತಿದೊಡ್ಡ ಷೇರುದಾರ ಕಂಪನಿ ಸಿಂಗಾಪುರದ ಸರ್ಕಾರಿ ಸ್ವಾಮ್ಯದ ಹೂಡಿಕೆದಾರ ಸಂಸ್ಥೆ ಟೀಮ್​ಸೆಕ್ ಹೋಲ್ಡಿಂಗ್ಸ್ ಆಗಿದೆ. ಇದು ಏಷ್ಯಾದ ಅತಿದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆದಾರ ಸಂಸ್ಥೆಯಾಗಿದ್ದು, 90 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದೆ. 63 ಶತಕೋಟಿ ಫಂಡ್ ಹೊಂದಿದೆ.

ಹೂಡಿಕೆಗೆ ವಿಯೆಟ್ನಾಂ, ಭಾರತವೇ ಆದ್ಯತೆ

‘ನಾವು ವಿಯೆಟ್ನಾಂನಲ್ಲಿ ಹೆಚ್ಚು ಹೂಡಿಕೆ ಮಾಡುವುದನ್ನು ಇಷ್ಟಪಡುತ್ತೇವೆ. ನಾವು ಈಗಾಗಲೇ ಭಾರತದಲ್ಲಿ ಸಕ್ರಿಯವಾಗಿದ್ದೇವೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್​ಒ) ಆ್ಯಂಡ್ರ್ಯೂ ಲಿಮ್ ತಿಳಿಸಿದ್ದಾರೆ. ಜಾಗತೀಕರಣವು ಹೆಚ್ಚು ಪರೀಕ್ಷೆಗೆ ಒಳಪಡುತ್ತಿರುವ ಈ ಸಂದರ್ಭದಲ್ಲಿ ಒಂದೇ ಕಡೆ ಹೂಡಿಕೆ ಮಾಡುವುದು ಅಪಾಯಕಾರಿ ಎಂಬುದನ್ನು ಇತ್ತೀಚಿನ ಘಟನೆಗಳು ನಮಗೆ ನಿರೂಪಿಸಿ ತೋರಿಸಿವೆ ಎಂದು ಅವರು ಹೇಳಿದ್ದಾರೆ.

ಕೋವಿಡೋತ್ತರ ಕಾಲಘಟ್ಟದಲ್ಲಿ ವಿಯೆಟ್ನಾಂ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ತಾಣವಾಗಿ ಪರಿಣಮಿಸಿದೆ. ಭಾರತದಲ್ಲಿ ಅತ್ಯದ್ಭುತವಾದ ಸೌರ ಸಂಪನ್ಮೂಲಗಳಿವೆ. ಹೀಗಾಗಿ ಇಂಧನ ಉತ್ಪಾದನೆ, ಇಂಧನ ಸ್ಥಿತಿಸ್ಥಾಪಕತ್ವ, ನವೀಕರಿಸಬಹುದಾದ ಇಂಧನ ಮೂಲಗಳನ್ನು ಹುಡುಕುತ್ತಿದ್ದರೆ ಭಾರತ ಉತ್ತಮ ತಾವಾಗಿದೆ. ಈ ನಿಟ್ಟಿನಿಂದ ನೋಡಬೇಕಾದ್ದು ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಚೀನಾದ ಆಸ್ತಿ ಮಾರುಕಟ್ಟೆಯಲ್ಲಿ ಎಲ್ಲವೂ ಸರಿಯಿಲ್ಲ

ಚೀನಾದ ಆಸ್ತಿ ಮಾರುಕಟ್ಟೆ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಕುಸಿತ ಕಾಣುತ್ತಿದೆ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನೂತನ ಮನೆಗಳ ದರದಲ್ಲಿ ಕಳೆದ ಏಳು ವರ್ಷಗಳಲ್ಲೇ ಕುಸಿತವಾಗಿರುವುದು ಕಳೆದ ವಾರ ಚೀನಾ ಸರ್ಕಾರ ಬಿಡುಗಡೆ ಮಾಡಿದ್ದ ದತ್ತಾಂಶಗಳಿಂದ ತಿಳಿದುಬಂದಿತ್ತು. ಆಸ್ತಿ ಮಾರಾಟ ಅಕ್ಟೋಬರ್​​ನಲ್ಲಿ ಸತತ 15ನೇ ತಿಂಗಳು ಕುಸಿತ ಕಂಡಿದೆ. ಚೀನಾದ ಸಾಂಖ್ಯಿಕ ಇಲಾಖೆ ಲೆಕ್ಕಾಚಾರದ ಪ್ರಕಾರ, ಅಕ್ಟೋಬರ್​ಗೆ ಕೊನೆಗೊಂಡಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ಶೇಕಡಾ 8.8ರ ಕುಸಿತವಾಗಿದೆ. ವಾಣಿಜ್ಯ ಉದ್ದೇಶದ ಸ್ಥಳ ಮಾರಾಟದಲ್ಲಿಯೂ ಶೇಕಡಾ 22.3ರಷ್ಟು ಕುಸಿತ ದಾಖಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ