ಐಶ್ವರ್ಯ ಗೌಡ ಕೇಸ್: ಮಾಜಿ ಸಂಸದ ಡಿಕೆ ಸುರೇಶ್ಗೆ ಇಡಿ ಸಮನ್ಸ್
ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಂಚಿಸಿದ ಆರೋಪ ಹೊತ್ತ ಐಶ್ವರ್ಯಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಐಶ್ವರ್ಯ ಗೌಡ ಡಿ.ಕೆ. ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಡಿ, ಐಶ್ವರ್ಯ ಗೌಡರ ಹೇಳಿಕೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಸಮನ್ಸ್ ಜಾರಿ ಮಾಡಿದೆ.

ಬೆಂಗಳೂರು, ಜೂನ್ 17: ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಆರೋಪ ಹೊತ್ತಿರುವ ಐಶ್ವರ್ಯಾ ಗೌಡ (Aishwarya Gowda) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಾಜಿ ಸಂಸದ ಡಿಕೆ ಸುರೇಶ್ ಅವರ ಸಹೋದರಿ ಅಂತ ಹೇಳಿಕೊಂಡು ಐಶ್ವರ್ಯ ಗೌಡ ಕೋಟ್ಯಾಂತರ ರೂಪಾಯಿ ಚಿನ್ನಾಭರಣ ವಂಚಿಸಿರುವ ಆರೋಪ ಕೇಳಿಬಂದಿತ್ತು. ಐಶ್ವರ್ಯ ಗೌಡ ಹೇಳಿಕೆ ಮತ್ತು ಸಾಕ್ಷಿಗಳನ್ನು ಆಧರಿಸಿ ಇಡಿ ಗುರುವಾರ (ಜೂ.19) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಡಿಕೆ ಸುರೇಶ್ ಅವರಿಗೆ ಸೂಚನೆ ನೀಡಿದೆ. ಜೂ.23ರಂದು ವಿಚಾರಣೆಗೆ ಹಾಜರಾಗುವುದಾಗಿ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಇಡಿ ಸಮನ್ಸ್ ನೀಡಿರುವ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿ, ಇಡಿ ಅಧಿಕಾರಿಗಳಿಂದ ನನಗೆ ಸಮನ್ಸ್ ಬಂದಿರುವುದು ನಿಜ. ಐಶ್ವರ್ಯಾಗೌಡ ಜೊತೆ ಯಾವುದೇ ಹಣದ ವ್ಯವಹಾರ ಮಾಡಿಲ್ಲ. ಜೂ.19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ, ಜೂ.23ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ. ಎರಡು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ನಾನು ಭಾಗಿಯಾಗಬೇಕಾಗಿದೆ ಎಂದು ಹೇಳಿದರು.
ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆಂದು ದೂರು ಕೊಟ್ಟಿದ್ದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಇಡಿ ಅಧಿಕಾರಿಗಳು ಏಳೆಂಟು ದಾಖಲೆಗಳು ಬೇಕು ಎಂದಿದ್ದಾರೆ. ಇಡಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದರು.
ಇಡಿ ನೋಟಿಸ್ ಗೌರವದಿಂದ ಸ್ವೀಕರಿಸುತ್ತೇವೆ: ಡಿಕೆ ಶಿವಕುಮಾರ್
ಮಾಜಿ ಸಂಸದ ಡಿಕೆ ಸುರೇಶ್ಗೆ ಇಡಿ ಸಮನ್ಸ್ ನೀಡಿರುವ ವಿಚಾರವಾಗಿ ಸಹೋದರ, ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಇಡಿ ತನಿಖೆಗೆ ಸಹೋದರ ಡಿ.ಕೆ.ಸುರೇಶ್ ಸಹಕಾರ ನೀಡುತ್ತಾರೆ. ಯಾವುದೇ ತನಿಖಾ ಸಂಸ್ಥೆ ನೋಟಿಸ್ ನೀಡಿದರೂ ಸ್ವೀಕರಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ತನಿಖೆಗೆ ಹಾಜರಾಗಿ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಚಿನ್ನ ವಂಚನೆ ಪ್ರಕರಣ: ಐಶ್ವರ್ಯ ಗೌಡ, ವಿನಯ್ ಕುಲಕರ್ಣಿ ಮನೆಗಳ ಮೇಲೆ ಇ.ಡಿ ದಾಳಿ
ತಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು ನೀಡಿದ್ದರು. ವಂಚನೆಗೊಳಗಾದ ಕೆಲವರು ಬಂದು ನನ್ನನ್ನು ಭೇಟಿಯಾಗಿದ್ದರು. ಈಗ ಇಡಿ ನೋಟಿಸ್ ನೀಡಿದ್ದಾರೆ, ಗೌರವದಿಂದ ಸ್ಪೀಕರಿಸಿದ್ದೇವೆ. ಮನೆಗೆ ನೋಟಿಸ್ ಅಂಟಿಸಿ ಹೋಗುವುದಾಗಿ ಹೇಳುತ್ತಿದ್ದಾರೆ ಅಂದರು. ನಾನೇ ಇಡಿ ನೋಟಿಸ್ ಸ್ವೀಕರಿಸುವಂತೆ ಮನೆಯವರಿಗೆ ಹೇಳಿದ್ದೇನೆ. ನನಗೂ, ಡಿ.ಕೆ.ಸುರೇಶ್ಗೂ ಇಡಿ ಅಧಿಕಾರಿಗಳ ತನಿಖೆ ಹೊಸದೇನಲ್ಲ. ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡುತ್ತೇವೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Tue, 17 June 25