ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ-ಐಶ್ವರ್ಯಾಗೌಡ ನಂಟಿನ ರಹಸ್ಯ ಬಯಲು ಮಾಡಿದ ಇಡಿ
ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ ನಿವಾಸದಲ್ಲಿ 2 ಕೋಟಿ 25 ಲಕ್ಷ ನಗದು ಪತ್ತೆಯಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಶಾಸಕ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ನಂಟಿನ ರಹಸ್ಯ ಬಯಲಾಗಿದ್ದು, ಇಡಿ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ವಿಚಾರ ಬಹಿರಂಗವಾಗಿದೆ.

ಬೆಂಗಳೂರು, (ಏಪ್ರಿಲ್ 27): ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ (Aishwarya gowda) ಪ್ರಕರಣದಲ್ಲಿ ಇಡಿ ತನಿಖೆ ಚುರುಕುಗೊಳಿಸಿದ್ದಾರೆ. ಇಡಿ (Enforcement Directorate) ಅಧಿಕಾರಿಗಳು ಐಶ್ವರ್ಯಾ ಗೌಡ, ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಹಾಗೂ ಶಿಲ್ಪಾಗೌಡ ನಿವಾಸ ಸೇರಿ 14 ಕಡೆ ದಾಳಿ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದಾರೆ. ಅಲ್ಲದೆ ಶಾಸಕ ವಿನಯ್ ಕುಲಕರ್ಣಿ, ಐಶ್ವರ್ಯಾಗೌಡ ನಂಟಿನ ರಹಸ್ಯ ಬಯಲಾಗಿದ್ದು, ಇಬ್ಬರೂ ಕೋಟ್ಯಂತರ ರೂ. ವ್ಯವಹಾರ ಮಾಡಿವುದು ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಹಿರಂಗವಾಗಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಹಾಯ ಮಾಡಿದ್ದ ಐಶ್ವರ್ಯಾ, ವಿನಯ್ ಕುಲರ್ಣಿ ಬಳಿ 24 ಕೋಟಿ ರೂ. ಸಾಲದ ರೂಪದಲ್ಲಿ ಪಡೆದಿದ್ದು, ದಿನಕ್ಕೆ 24 ಲಕ್ಷ ರೂ. ಬಡ್ಡಿ ಕೊಡುವುದಾಗಿ ಹೇಳಿರುವ ಅಂಶ ಬೆಳಕಿಗೆ ಬಂದಿದೆ.
ಐಶ್ವರ್ಯಾ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಡುವೆ 24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿ ಇಡಿ ಅಧಿಕಾರಿಗಳು ಕುಲಕರ್ಣಿ ಮನೆ ಮೇಲೆ ದಾಳಿ ಮಾಡಿದ್ದು, ಸತತ 26 ಗಂಟೆ ದಾಳಿ ನಡೆಸಿ ಹಲವು ದಾಖಲೆಗಳ ಸಂಗ್ರಹಿಸಿದೆ. ಯೋಗೇಶ್ ಗೌಡ ಕೊಲೆ ಕೇಸ್ನಲ್ಲೂ ಶಾಸಕ ವಿನಯ್ ಕುಲರ್ಣಿಗೆ ಸಹಾಯ ಮಾಡಿದ್ದಳು ಎನ್ನುವುದು ಗೊತ್ತಾಗಿದೆ.
ಇದನ್ನೂ ಓದಿ: ಚಿನ್ನ ವಂಚನೆ ಪ್ರಕರಣ: ಐಶ್ವರ್ಯ ಗೌಡ ಇಡಿ ವಶಕ್ಕೆ, ವಿನಯ್ ಕುಲಕರ್ಣಿ ಮನೆಯಲ್ಲಿನ ಶೋಧ ಅಂತ್ಯ
ವಿನಯ್ ಕುಲಕರ್ಣಿ ಬಳಿ 24 ಕೋಟಿ ರೂ. ಸಾಲ ಪಡೆದಿದ್ದ ಐಶ್ವರ್ಯ
ವಿನಯ್ ಕುಲಕರ್ಣಿ ಬಳಿ 24 ಕೋಟಿ ಸಾಲದ ರೂಪದಲ್ಲಿ ಪಡೆದಿದ್ದ ಐಶ್ವರ್ಯಾ, ದಿನಕ್ಕೆ 1% ಬಡ್ಡಿ ಕೊಡುತ್ತೇನೆ ಎಂದಿದ್ದಳು. ಅಂದರೆ 24 ಕೋಟಿಗೆ ದಿನಕ್ಕೆ 24 ಲಕ್ಷ ರೂ. ಬಡ್ಡಿ ಕೊಡುವುದಾಗಿ ಹಣ ಪಡೆದಿದ್ದಳು. ಆದ್ರೆ, ಹಣ ಪಡೆದ ನಂತರ ಅಸಲು, ಬಡ್ಡಿ ಕೊಡದೆ ಸಮಯ ಕೇಳಿಕೊಂಡಿದ್ದಳು. ಆಗ ವಿನಯ್ ಕುಲಕರ್ಣಿ ಐಶ್ವರ್ಯಾ ಜತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. 24 ಕೋಟಿ ರೂ. ಹಣಕ್ಕೆ ಸ್ನೇಹಿತನ ಹೆಸರಿನಲ್ಲಿ ಕೈಸಾಲ ಪಡೆದಿದ್ದಾಗಿ ಅಗ್ರಿಮೆಂಟ್. ಜೊತೆಗೆ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡುವಂತೆ ಶಾಸಕ ವಿನಯ್ ಕುಲರ್ಣಿ ಟಾಸ್ಕ್ ನೀಡಿದ್ದರು.
ಯೋಗೇಶ್ ಗೌಡ ಕೊಲೆ ಕೇಸಿನ ಅಂಶ ಬಯಲಿಗೆ
ಇಡಿ ವಿಚಾರಣೆ ವೇಳೆ ಯೋಗೇಶ್ ಗೌಡ ಕೊಲೆ ಪ್ರರಕರಣದ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡಿದ್ದು ಸಹ ಬಯಲಿಗೆ ಬಂದಿದೆ. ಪ್ರಕರಣದ ಮಾಫಿ ಸಾಕ್ಷಿಯಾಗಿದ್ದ ಮುತ್ತಗಿಗೆ ಐಶ್ವರ್ಯಾ ಟ್ರ್ಯಾಪ್ ಮಾಡಿದ್ದಳು. ಐಶ್ವರ್ಯಾ ಹಾಗೂ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಅಶ್ವತ್ಥ್ ಸೇರಿಕೊಂಡು, ಬಸವರಾಜ್ ಮುತ್ತಗಿಗೆ ಕರೆ ಮಾಡಿ ಹಣದ ಆಮಿಷವೊಡ್ಡಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಹೈಕೋರ್ಟ್ನಲ್ಲಿ ಈ ಆಡಿಯೋ ನೀಡಿ ಸಾಕ್ಷಿ ರದ್ದು ಮಾಡಲು ಮುಂದಾಗಿದ್ದಳು. ಆದರೆ ಈ ಪ್ರಕರಣವನ್ನು ಸಿಬಿಐ ನ್ಯಾಯಾಲಯಕ್ಕೆ ನೀಡಿತ್ತು. ಹೀಗಾಗಿ ಮಾಫಿ ಸಾಕ್ಷಿ ರದ್ದಿಗೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾಗೊಂಡಿತ್ತು.
ಏನಿದು ಪ್ರಕರಣ?
ಆರೋಪಿ ಐಶ್ವರ್ಯ ಗೌಡ ತನಗೆ 3 ಕೋಟಿ 25 ಲಕ್ಷ ರೂ. ನಗದು ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆಂದು ಬೆಂಗಳೂರಿನ ಆರ್.ಆರ್.ನಗರ ಠಾಣೆಯಲ್ಲಿ ತಿಬ್ಬೇಗೌಡ ಪತ್ನಿ ಶಿಲ್ಪಗೌಡ ದೂರು ನೀಡಿದ್ದರು. ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ, ರಿಯಲ್ ಎಸ್ಟೇಟ್ ವಿಲ್ಲಾ ನಿರ್ಮಾಣ ಮಾಡುತ್ತೇನೆ. ಕಡಿಮೆ ಬೆಲೆಗೆ ಚಿನ್ನಾಭರಣ ಕೊಡಿಸುತ್ತೇನೆ ಅಂತ ಐಶ್ವರ್ಯ ಗೌಡ ಹಲವರಿಗೆ ವಂಚಿಸಿದ್ದರು. 2022 ರಿಂದ 2024 ರ ಅವಧಿಯಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹಣದ ವಹಿವಾಟು ಮಾಡಿದ್ದರು. ಸುಮಾರು 70 ಕೋಟಿ ರೂ. ವಹಿವಾಟು ಅಕೌಂಟ್ ಮೂಲಕ ನಡೆಸಿದ್ದ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಐಶ್ವರ್ಯಗೌಡ ವಿರುದ್ಧ ಬೆಂಗಳೂರಿನ ಆರ್.ಆರ್.ನಗರ ಚಂದ್ರಾಲೇಔಟ್ ಸೇರಿ ಮಂಡ್ಯ ಠಾಣೆಗಳಲ್ಲಿ ಹಲವು ವಂಚನೆ ಕೇಸ್ ದಾಖಲಾಗಿದ್ದವು. ಐಶ್ವರ್ಯ ಗೌಡ ಅಕ್ರಮ ಹಣ ವಹಿವಾಟು ಸಂಬಂಧ ಐಟಿ ಮತ್ತು ಇಡಿಗೆ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಪತ್ರ ಬರೆದಿದ್ದರು.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು. ಪ್ರಕರಣ ಸಂಬಂಧ 2024 ರ ಡಿಸೆಂಬರ್ನಲ್ಲಿ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಕೆಎನ್ ಹರೀಶ್ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಐಶ್ವರ್ಯ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು.
Published On - 2:54 pm, Sun, 27 April 25







