ಚಿನ್ನ ವಂಚನೆ ಪ್ರಕರಣ: ಐಶ್ವರ್ಯ ಗೌಡ ಇಡಿ ವಶಕ್ಕೆ, ವಿನಯ್ ಕುಲಕರ್ಣಿ ಮನೆಯಲ್ಲಿನ ಶೋಧ ಅಂತ್ಯ
ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಐಶ್ವರ್ಯ ಗೌಡ ಮನೆ ಮೇಲೆ ದಾಳಿ ನಡೆಸಿತ್ತು. ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಡೆದ ಈ ವಂಚನೆಯಲ್ಲಿ ಆರೋಪಿ ಐಶ್ವರ್ಯ ಗೌಡ ಅವರನ್ನು ಇಡಿ ವಶಕ್ಕೆ ಪಡೆದಿದೆ. ಇಡಿ ಅಧಿಕಾರಿಗಳು ಕಾಂಗ್ರೆಸ್ ಮುಖಂಡರಾದ ತಿಬ್ಬೇಗೌಡ ಮತ್ತು ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೂ ದಾಳಿ ನಡೆಸಿತ್ತು.

ಬೆಂಗಳೂರು, ಏಪ್ರಿಲ್ 25: ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಅವರ ಹೆಸರೇಳಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನ ವಂಚನೆ (Gold Fraud) ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ED)ದ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಐಶ್ವರ್ಯ ಗೌಡ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲ್ಯಾಟ್ ಮೇಲೆ ಇಡಿ ಅಧಿಕಾರಿಗಳು ಗುರುವಾರ (ಏ.24) ರಂದು ದಾಳಿ ನಡೆಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು, ಇಡಿ ಅಧಿಕಾರಿಗಳು ಬೆಂಗಳೂರಿನ ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ನಿವಾಸದ ಮೇಲೂ ದಾಳಿ ನಡೆಸಿದ್ದರು. ತಿಬ್ಬೇಗೌಡ ಅವರ ಬ್ಯಾಂಕ್ ಅಕೌಂಟ್ಸ್ ಡೀಟೆಲ್ಸ್, ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.
ಐಶ್ವರ್ಯ ಗೌಡ ಅವರ ಬೆನ್ಜ್ ಕಾರು ಬಳಸುತ್ತಿದ್ದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರ ಬೆಂಗಳೂರಿನ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 28 ಗಂಟೆಗಳ ಕಾಲ ವಿನಯ ಕುಲಕರ್ಣಿ ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದರು.
ಏನಿದು ಪ್ರಕರಣ?
ಆರೋಪಿ ಐಶ್ವರ್ಯ ಗೌಡ ತನಗೆ 3 ಕೋಟಿ 25 ಲಕ್ಷ ನಗದು ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆಂದು ಆರ್.ಆರ್.ನಗರ ಠಾಣೆಯಲ್ಲಿ ತಿಬ್ಬೇಗೌಡ ಪತ್ನಿ ಶಿಲ್ಪಗೌಡ ದೂರು ನೀಡಿದ್ದರು. ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ, ರಿಯಲ್ ಎಸ್ಟೇಟ್ ವಿಲ್ಲಾ ನಿರ್ಮಾಣ ಮಾಡುತ್ತೇನೆ. ಕಡಿಮೆ ಬೆಲೆಗೆ ಚಿನ್ನಾಭರಣ ಕೊಡಿಸುತ್ತೇನೆ ಅಂತ ಐಶ್ವರ್ಯ ಗೌಡ ಹಲವರಿಗೆ ವಂಚಿಸಿದ್ದರು.
2022 ರಿಂದ 2024 ರ ಅವಧಿಯಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹಣದ ವಹಿವಾಟು ಮಾಡಿದ್ದರು. ಸುಮಾರು 70 ಕೋಟಿ ರೂ. ವಹಿವಾಟು ಅಕೌಂಟ್ ಮೂಲಕ ನಡೆಸಿದ್ದ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಐಶ್ವರ್ಯಗೌಡ ವಿರುದ್ಧ ಬೆಂಗಳೂರಿನ ಆರ್.ಆರ್.ನಗರ ಚಂದ್ರಾಲೇಔಟ್ ಸೇರಿ ಮಂಡ್ಯ ಠಾಣೆಗಳಲ್ಲಿ ಹಲವು ವಂಚನೆ ಕೇಸ್ ದಾಖಲಾಗಿದ್ದವು. ಐಶ್ವರ್ಯ ಗೌಡ ಅಕ್ರಮ ಹಣ ವಹಿವಾಟು ಸಂಬಂಧ ಐಟಿ ಮತ್ತು ಇಡಿಗೆ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಪತ್ರ ಬರೆದಿದ್ದರು.
ಐಶ್ವರ್ಯ ಗೌಡ ಕಾರು ಬಳಕೆ
ಐಶ್ವರ್ಯಗೌಡ ಪತಿ ಹರೀಶ್ ಹೆಸರಿನಲ್ಲಿರುವ ಬೆಂಝ್ ಕಾರನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಬಳಸಿದ್ದ ಆರೋಪ ಕೇಳಿಬಂದಿತ್ತು. ಈ ಕಾರನ್ನು ಎಸಿಪಿ ಭರತ್ ರೆಡ್ಡಿ ಜಪ್ತಿ ಮಾಡಿದ್ದರು.
ಇದನ್ನೂ ಓದಿ: ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು.
ಪ್ರಕರಣ ಸಂಬಂಧ 2024 ರ ಡಿಸೆಂಬರ್ನಲ್ಲಿ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಕೆಎನ್ ಹರೀಶ್ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಐಶ್ವರ್ಯ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 am, Fri, 25 April 25







