Trade Deficit: ಮೇ ತಿಂಗಳಲ್ಲಿ ಸರಕು ವ್ಯಾಪಾರ ಕೊರತೆ 21.88 ಬಿಲಿಯನ್ ಡಾಲರ್ಗೆ ಇಳಿಕೆ
India's merchandise trade deficit of 21.88 billion dollar in 2025 May: ಭಾರತದ ಸರಕು ವ್ಯಾಪಾರ ಕೊರತೆ ಮೇ ತಿಂಗಳಲ್ಲಿ ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚು ತಗ್ಗಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮರ್ಚಾಂಡೈಸ್ ಟ್ರೇಡ್ ಡೆಫಿಸಿಟ್ ಮೇನಲ್ಲಿ 21.88 ಬಿಲಿಯನ್ ಡಾಲರ್ಗೆ ಇಳಿದಿದೆ. ಏಪ್ರಿಲ್ ತಿಂಗಳಲ್ಲಿ ಈ ಅಂತರವು 26.42 ಬಿಲಿಯನ್ ಡಾಲರ್ನಷ್ಟು ಇತ್ತು.

ನವದೆಹಲಿ, ಜೂನ್ 16: ಭಾರತದ ಸರಕು ವ್ಯಾಪಾರ ಕೊರತೆ (Merchandise trade deficit) ಮೇ ತಿಂಗಳಲ್ಲಿ 21.88 ಬಿಲಿಯನ್ ಡಾಲರ್ಗೆ ತಗ್ಗಿದೆ. ಹಿಂದಿನ ತಿಂಗಳಲ್ಲಿ (ಏಪ್ರಿಲ್) ಇದ್ದ 26.42 ಬಿಲಿಯನ್ ಡಾಲರ್ಗೆ ಹೋಲಿಸಿದರೆ ಈ ಬಾರಿ ಟ್ರೇಡ್ ಡೆಫಿಸಿಟ್ ಗಣನೀಯವಾಗಿ ತಗ್ಗಿದೆ. ವಾಣಿಜ್ಯ ಸಚಿವಾಲಯ ಇಂದು ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೇ ತಿಂಗಳಲ್ಲಿ ಸರಕುಗಳ ರಫ್ತು ಮತ್ತು ಆಮದು ಎರಡೂ ಕೂಡ ಕಡಿಮೆ ಆಗಿದೆ. ಅದರ ಜೊತೆಗೆ ಟ್ರೇಡ್ ಡೆಫಿಸಿಟ್ ಕೂಡ ತಗ್ಗಿದೆ.
ವಿವಿಧ ಆರ್ಥಿಕ ತಜ್ಞರು ಮೇ ತಿಂಗಳಲ್ಲಿ ಸರುಗಳ ಆಮದು ಮತ್ತು ರಫ್ತು ನಡುವಿನ ಅಂತರ 25 ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜು ಮಾಡಿದ್ದರು. ಆದರೆ, ಅದಕ್ಕಿಂತಲೂ ಉತ್ತಮವಾದ ಸ್ಥಿತಿ ಬಂದಿದೆ. ಜಾಗತಿಕ ಅನಿಶ್ಚಿತತೆಗಳ ನಡುವೆ ಭಾರತದ ಟ್ರೇಡ್ ಡೆಫಿಸಿಟ್ ಕಡಿಮೆಗೊಂಡಿರುವುದು ಶುಭ ಸೂಚನೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಅಂಡಮಾನ್ ಬಳಿ ಎರಡು ಲಕ್ಷ ಕೋಟಿ ಲೀಟರ್ ಕಚ್ಛಾ ತೈಲ ನಿಕ್ಷೇಪ? ಭಾರತದ ಆರ್ಥಿಕ ಬೆಳವಣಿಗೆಗೆ ರಾಕೆಟ್ ವೇಗ ಕೊಡಬಲ್ಲುದು ಈ ಸಂಗ್ರಹ
ಟ್ರೇಡ್ ಡೆಫಿಸಿಟ್ ಎಂದರೇನು?
ದೇಶದ ಒಟ್ಟಾರೆ ರಫ್ತು ಮತ್ತು ಆಮದು ನಡುವಿನ ಅಂತರವೇ ಟ್ರೇಡ್ ಡೆಫಿಸಿಟ್. ರಫ್ತಿಗಿಂತ ಆಮದು ಹೆಚ್ಚಾಗಿದ್ದರೆ ಅದು ಡೆಫಿಸಿಟ್ ಎನಿಸುತ್ತದೆ. ಆಮದಿಗಿಂತ ರಫ್ತು ಹೆಚ್ಚಿದ್ದರೆ ಅದು ಟ್ರೇಡ್ ಸರ್ಪ್ಲಸ್ ಎನಿಸುತ್ತದೆ. ಟ್ರೇಡ್ ಸರ್ಪ್ಲಸ್ ಇರುವ ಕೆಲವೇ ದೇಶಗಳಲ್ಲಿ ಚೀನಾ ಒಂದು.
ಈ ವರದಿಯಲ್ಲಿ ನೀಡಲಾಗಿರುವ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ ಸರಕುಗಳ ವ್ಯಾಪಾರಕ್ಕೆ ಸಂಬಂಧಿಸಿದ್ದು. ಸರಕುಗಳಂತೆ ಸರ್ವಿಸ್ ಸೆಕ್ಟರ್ನ ರಫ್ತು ಮತ್ತು ಆಮದು ವಹಿವಾಟನ್ನು ಗಣಿಸಲಾಗುತ್ತದೆ. ಭಾರತದ ಒಟ್ಟಾರೆ ಟ್ರೇಡ್ ಡೆಫಿಸಿಟ್ ಅನ್ನು ಸರಕು ಮತ್ತು ಸೇವೆಗಳ ವ್ಯಾಪಾರದ ದತ್ತಾಂಶದ ಮೇಲೆ ಅಳೆಯಲಾಗುತ್ತದೆ.
ಇದನ್ನೂ ಓದಿ: ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ
ಮೇ ತಿಂಗಳಲ್ಲಿ ಸರಕುಗಳ ಆಮದು ಶೇ. 1.7ರಷ್ಟು ಇಳಿಕೆಯಾಗಿ 60.61 ಬಿಲಿಯನ್ ಡಾಲರ್ ಮುಟ್ಟಿದೆ. ರಫ್ತು ಶೇ. 2.2ರಷ್ಟು ತಗ್ಗಿ 38.73 ಬಿಲಿಯನ್ ಡಾಲರ್ ತಲುಪಿದೆ. ಎಲೆಕ್ಟ್ರಾನಿಕ್ಸ್, ಫಾರ್ಮಾ, ಸಮುದ್ರ ಉತ್ಪನ್ನ, ಜವಳಿ ಇತ್ಯಾದಿ ಕ್ಷೇತ್ರಗಳ ಉತ್ಪನ್ನಗಳ ರಫ್ತು ಹೆಚ್ಚಿದೆ. ಆದರೆ, ಪೆಟ್ರೋಲಿಯಂ, ಆಭರಣ, ಉಣ್ಣೆ ಇತ್ಯಾದಿ ವಸ್ತುಗಳ ರಫ್ತು ಕಡಿಮೆಗೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




