ಜಿ20 ಶೆರ್ಪಾ ಸ್ಥಾನಕ್ಕೆ ಅಮಿತಾಭ್ ಕಾಂತ್ ರಾಜೀನಾಮೆ; ಅವರ 45 ವರ್ಷದ ಸರ್ಕಾರಿ ಸೇವೆ ಅಂತ್ಯ
Former NITI Aayog CEO Amitabh Kant resigns as G20 Sherpa: ಅಮಿತಾಭ್ ಕಾಂತ್ ಅವರು ಜಿ20 ಶೆರ್ಪಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೀತಿ ಆಯೋಗ್ನ ಮಾಜಿ ಸಿಇಒ ಆದ ಅವರು ಸರ್ಕಾರಿ ಸೇವೆಯಿಂದ ಸಂಪೂರ್ಣ ಹೊರಬಂದಿದ್ದಾರೆ. 45 ವರ್ಷಗಳ ಹಿಂದೆ ಕೇರಳದಲ್ಲಿ ಐಎಎಸ್ ಅಧಿಕಾರಿಯಾಗಿ ಅವರು ಸರ್ಕಾರಿ ಸೇವೆ ಮೊದಲಿಟ್ಟಿದ್ದರು. ನೀತಿ ಆಯೋಗ್ನ ಸಿಇಒ ಹಾಗೂ ಜಿ20 ಶೆರ್ಪಾ ಆಗಿದ್ದು ಅವರ ವೃತ್ತಿ ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಸೇರಿವೆ.

ನವದೆಹಲಿ, ಜೂನ್ 16: ನೀತಿ ಆಯೋಗ್ನ (NITI Aayog) ಮಾಜಿ ಮುಖ್ಯಸ್ಥ ಅಮಿತಾಭ್ ಕಾಂತ್ (Amitabh Kant) ಅವರು ಜಿ20 ಶೆರ್ಪಾ (G20 Sherpa) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 45 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಯಿಂದಲೂ ಅವರು ಹೊರಬರಲು ನಿರ್ಧರಿಸಿದ್ಧಾರೆ. ಹೊಸ ಅವಕಾಶಗಳನ್ನು ಅರಸಿ ಹೋಗುತ್ತಿರವುದಾಗಿ ಅವರು ಹೇಳಿದ್ದಾರೆ. ವಿವಿಧ ರೀತಿಯಲ್ಲಿ ದೇಶದ ಸೇವೆಗೆ ಕೊಡುಗೆ ನೀಡಲು ಉತ್ತೇಜಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಹೇಳಿದ್ಧಾರೆ ಅಮಿತಾಭ್ ಕಾಂತ್.
‘ನನ್ನ ಹೊಸ ಪ್ರಯಾಣ: 45 ವರ್ಷದ ಸರ್ಕಾರಿ ಸೇವೆ ಬಳಿಕ ಹೊಸ ಅವಕಾಶಗಳನ್ನು ಅಪ್ಪುವ ನಿರ್ಧಾರ ಮಾಡಿದ್ದೇನೆ’ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ
‘ಜಿ20 ಶೆರ್ಪಾ ಸ್ಥಾನಕ್ಕೆ ನಾನು ನೀಡಿದ ರಾಜೀನಾಮೆಯನ್ನು ಸ್ವೀಕರಿಸಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ಹೇಳುತ್ತೇನೆ. ಹಾಗೆಯೇ, ವಿವಿಧ ಅಭಿವೃದ್ಧಿ ಯೋಜನೆಗಳ ಉಪಕ್ರಮ ಮೂಲಕ ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಕೊಡುಗೆ ನೀಡಲು ಅವಕಾಶ ಕೊಟ್ಟಿದ್ದಕ್ಕೂ ಪ್ರಧಾನಿಗಳಿಗೆ ಧನ್ಯವಾದ ಹೇಳುತ್ತೇನೆ. ನನ್ನೆಲ್ಲಾ ಸಹವರ್ತಿಗಳು ಮತ್ತು ಸ್ನೇಹಿತರಿಗೂ ಋಣಿಯಾಗಿದ್ದೇನೆ’ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.
My New Journey: After 45 years of dedicated government service, I have made the decision to embrace new opportunities and move forward in life. I am incredibly thankful to the Prime Minister of India for accepting my resignation as G20 Sherpa and for having given me the…
— Amitabh Kant (@amitabhk87) June 16, 2025
ಅಮಿತಾಭ್ ಕಾಂತ್ ಅವರ ಲಿಂಕ್ಡ್ ಇನ್ ಪೋಸ್ಟ್ನ ಲಿಂಕ್
ಜಿ20 ಶೆರ್ಪಾ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದ ಕಾಂತ್
ಭಾರತವು 2023ರ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ವಹಿಸಿತ್ತು. ಆ ಬಾರಿಯ ಸಭೆಯಲ್ಲಿ ಭಾರತದ ಶೆರ್ಪಾ ಆಗಿದ್ದವರು ಅಮಿತಾಭ್ ಕಾಂತ್. ಜಿ20 ಶೃಂಗಸಭೆಯ ಅಜೆಂಡಾ, ಚೌಕಟ್ಟು ಇತ್ಯಾದಿಯನ್ನು ನಿಗದಿ ಮಾಡುವುದು ಅವರ ಕರ್ತವ್ಯವಾಗಿತ್ತು. ಭಾರತದ ಅಧ್ಯಕ್ಷತೆಯಲ್ಲಿ ಜಿ20 ಗುಂಪಿಗೆ ಆಫ್ರಿಕಾ ಒಕ್ಕೂಟ ಸೇರ್ಪಡೆಯಾಗಿದ್ದು ಐತಿಹಾಸಿಕ ಕ್ರಮವಾಗಿತ್ತು. ಅಮಿತಾಭ್ ಕಾಂತ್ ತಾನು ಜಿ20 ಶೆರ್ಪಾ ಆಗಿ ಕಾರ್ಯನಿರ್ವಹಿಸಿದ್ದು ತಮ್ಮ ವೃತ್ತಿಜೀವನದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಸ್ಟಾರ್ಟಪ್ ಇಕೋಸಿಸ್ಟಂ: ಭಾರತದಲ್ಲಿ ಬೆಂಗಳೂರೇ ನಂಬರ್ ಒನ್; ಜಾಗತಿಕ ದಿಗ್ಗಜ ನಗರಗಳ ಸಾಲಿನಲ್ಲಿ ಸಿಲಿಕಾನ್ ಸಿಟಿ
ನೀತಿ ಆಯೋಗ್ ಸಿಇಒ ಆಗಿದ್ದ ಅಮಿತಾಭ್ ಕಾಂತ್
ವಾರಾಣಸಿಯಲ್ಲಿ ಹುಟ್ಟಿದ್ದ 69 ವರ್ಷದ ಅಮಿತಾಭ್ ಕಾಂತ್ ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ ಕೇರಳದಲ್ಲಿ ಐಎಎಸ್ ಅಧಿಕಾರಿಯಾಗಿ ಸರ್ಕಾರಿ ಸೇವೆ ಆರಂಭಿಸಿದ್ದರು. 2016ರಿಂದ 2022ರವರೆಗೂ ಅವರು ನೀತಿ ಆಯೋಗ್ನ ಸಿಇಒ ಆಗಿ ನೇಮಕವಾದರು. ಬಹಳಷ್ಟು ಯೋಜನೆಗಳು ಅವರ ಅವಧಿಯಲ್ಲಿ ಶುರುವಾದವು.
2022ರಲ್ಲಿ ಅವರು ಪ್ರಧಾನಿಗಳಿಗೆ ಜಿ20 ಶೆರ್ಪಾ ಆಗಿ ನೇಮಕವಾದರು. ಶೆರ್ಪಾ ಎಂದರೆ ಮಾರ್ಗದರ್ಶಿ ಎಂದಾಗಬಹುದು. ಹಿಮಾಲಯದಲ್ಲಿ ಪರ್ವತಾರೋಹಿಗಳಿಗೆ ಜೊತೆಯಾಗಿ ಸ್ಥಳೀಯ ಬುಡಕಟ್ಟು ಶೆರ್ಪಾ ಜನರು ಗೈಡ್ಗಳಾಗಿ ಹೋಗುವುದುಂಟು. ಜಿ20 ಶೆರ್ಪಾಗೆ ಆ ಹೆಸರೂ ಸ್ಫೂರ್ತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Mon, 16 June 25




