Google: ಎಚ್ಚರ: ತಪ್ಪಿಯೂ ನೀವು ಗೂಗಲ್‌ನಲ್ಲಿ ಈ ರೀತಿ ಸರ್ಚ್ ಮಾಡಬೇಡಿ
Google Search: ನೀವು ಎಲ್ಲದಕ್ಕೂ ಗೂಗಲ್ ಸರ್ಚ್ ಎಂಜಿನ್ ಅನ್ನು ಆಶ್ರಯಿಸಿದರೆ, ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಅದರ ನಷ್ಟವನ್ನು ಅನುಭವಿಸಬಹುದು. ಹೀಗಾಗಿ ತಪ್ಪಿಯೂ ನೀವು ಗೂಗಲ್‌ನಲ್ಲಿ ಈ ರೀತಿ ಸರ್ಚ್ ಮಾಡಬೇಡಿ
ನಮಗೆ ಯಾವುದೇ ವಿಚಾರಗಳ ಬಗ್ಗೆ ಗೊಂದಲಗಳಿದ್ದಲ್ಲಿ ಅಥವಾ ಅನುಮಾನಗಳಿದ್ದರೆ ಅದನ್ನು ಬಗೆ ಹರಿಸಲು ಇರುವ ಸುಲಭ ದಾರಿ ಗೂಗಲ್ (Google). ಎಲ್ಲ ಪ್ರಶ್ನೆಗಳಿಗೆ ಗೂಗಲ್‌ನಲ್ಲಿ ಉತ್ತರವಿದೆ. ಈ ಪ್ರಪಂಚದ ಏನೇ ಮಾಹಿತಿ ಬೇಕಿದ್ದರೂ ಅದು ನಮಗೆ ಗೂಗಲ್‌ನಲ್ಲಿ ಸಿಗುತ್ತದೆ. ಆದರೆ, ಗೂಗಲ್‌ನಲ್ಲಿ ಕೆಲವು ಕಠಿಣ ನಿಯಮಗಳಿವೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?, ಕೆಲ ವಿಚಾರಗಳನ್ನು ಗೂಗಲ್‌ನಲ್ಲಿ ಸರ್ಚ್ (Google search) ಮಾಡಬಾರದು ಎಂಬ ಸುದ್ದಿ ನಿಮಗೆ ಗೊತ್ತೇ?. ಗೂಗಲ್ ನಿಯಮಕ್ಕೆ ವಿರುದ್ಧವಾದ ಕೆಲ ವಿಚಾರಗಳನ್ನು ಸರ್ಚ್ ಮಾಡಿದರೆ ನಿಮ್ಮ ಐಪಿ ಅಡ್ರೆಸ್ (IP Address) ನೇರವಾಗಿ ಭದ್ರತಾ ಸಂಸ್ಥೆಗಳಿಗೆ ತೆರಳುತ್ತದೆ. ಹೀಗಾಗಿ ನೀವು ಎಲ್ಲದಕ್ಕೂ ಗೂಗಲ್ ಸರ್ಚ್ ಎಂಜಿನ್ ಅನ್ನು ಆಶ್ರಯಿಸಿದರೆ, ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಅದರ ನಷ್ಟವನ್ನು ಅನುಭವಿಸಬಹುದು. ಗೂಗಲ್‌ನಲ್ಲಿ ಯಾವ ವಿಷಯಗಳನ್ನು ಹುಡುಕಬೇಕು ಅಥವಾ ಹುಡುಕಬಾರದು ಎಂಬ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಮುಖ್ಯ.
ಮಕ್ಕಳ ಅಶ್ಲೀಲ ಚಿತ್ರ: ಮಕ್ಕಳ ಅಶ್ಲೀಲ ಚಿತ್ರವನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸುವುದು ಅಪರಾಧವಾಗಿದೆ. ಇದು ಗೂಗಲ್ ನಿಯಮದ ವಿರುದ್ಧ. ಹೀಗಿದ್ದರೂ ನೀವು ಈ ವಿಚಾರದ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಹೆಚ್ಚಿನ ದಂಡ ಕಟ್ಟಬೇಕಾಗಿ ಬರಬಹುದು. ಅಲ್ಲದೆ ಇತ್ತೀಚೆಗಷ್ಟೆ 2021ರ ಐಟಿ ನಿಯಮವನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ಅಂತರ್ಜಾಲ ಕಂಪನಿಗಳಿಗೆ ನೋಟಿಸ್ ನೀಡಿತ್ತು.
ಸಿನಿಮಾ ಪೈರಸಿ: ಸಿನಿಮಾ ಪೈರಸಿಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೂ ಹೆಚ್ಚಿನ ಜನರು ಚಲನಚಿತ್ರ ಪೈರಸಿಯನ್ನು ಮಾಡುತ್ತಿರುತ್ತಾರೆ. ನೀವು ಗೂಗಲ್‌ನಲ್ಲಿ ಸಿನಿಮಾವನ್ನು ಲೀಕ್ ಮಾಡಿದರೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದನ್ನಾದರೂ ಹುಡುಕಿದರೆ, ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಅನುಭವಿಸಬಹುದು.
ಕಸ್ಟಮರ್ ಕೇರ್ ಕಾಂಟೆಕ್ಟ್ ನಂಬರ್ ಸರ್ಚ್ ಮಾಡುವಾಗ ಎಚ್ಚರ: ಇದೊಂದು ಜನಪ್ರಿಯ ಆನ್‌ಲೈನ್ ಹಗರಣಗಳಲ್ಲಿ ಒಂದು. ವಂಚಕರು ಫೇಕ್ ಅಥವಾ ನಕಲಿ ಬ್ಯುಸಿನೆಸ್ ಲಿಸ್ಟ್ ಮತ್ತು ಕಸ್ಟಮರ್ ಕೇರ್ ನಂಬರ್ಗಳನ್ನು ವೆಬ್ಸೈಟ್ಗಳಲ್ಲಿ ಪೋಸ್ಟ್ ಮಾಡಿರುತ್ತಾರೆ. ಇದನ್ನರಿಯದ ಜನರು ಅದೇ ನಿಜವಾದ ಮಾಹಿತಿ ಎಂದು ನಂಬುತ್ತಾರೆ. ಹೆಚ್ಚಿನ ಅಪ್ಲಿಕೇಶನ್‌ಗಳು ಇನ್ ಬಿಲ್ಟ್ ಕಸ್ಟಮರ್ ಕೇರ್ ಚಾಟ್ ವಿಂಡೋಸ್ನ್ನು ಹೊಂದಿರುತ್ತವೆ. ಆದರೆ ನೀವು ಕರೆ ಮಾಡಬಹುದಾದ ಕಾಂಟೆಕ್ಟ್ ನಂಬರ್ನ್ನು ಹೊಂದಿರುವುದಿಲ್ಲ.
ಆನ್‌ಲೈನ್ ಬ್ಯಾಂಕಿಂಗ್ ವೆಬ್‌ಸೈಟ್: ಗೂಗಲ್‌ನಲ್ಲಿ ಬ್ಯಾಂಕಿನ ವೆಬ್‌ಸೈಟ್ ಮತ್ತು URL ಅನ್ನು ಸರ್ಚ್ ಮಾಡುತ್ತಾರೆ. ಆದರೆ, ಈ ಹುಡುಕಾಟವು ನಿಮಗೆ ಅಪಾಯದಿಂದ ಮುಕ್ತವಾಗಿಲ್ಲ. ಇಲ್ಲಿಂದ, ನಿಮ್ಮ ವಿವರಗಳನ್ನು ಹ್ಯಾಕರ್‌ಗಳು ಕದಿಯಬಹುದು. ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬೇಕಾದರೆ, ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ URL ಅನ್ನು ನೇರವಾಗಿ ನಮೂದಿಸಿ. ಗೂಗಲ್‌ನಲ್ಲಿ ಬ್ಯಾಂಕಿಂಗ್ ಸೈಟ್‌ಗಳನ್ನು ಹುಡುಕುವುದು ಮತ್ತು ತೆರೆಯುವುದು ಇತರ ಫಿಶಿಂಗ್ ವೆಬ್‌ಸೈಟ್‌ಗಳನ್ನು ಸಹ ಬಹಿರಂಗಪಡಿಸಬಹುದು. ತಿಳಿಯದೆ ನೀವು ಈ ವೆಬ್‌ಸೈಟ್‌ಗಳನ್ನು ತೆರೆಯಬಹುದು. ನೀವು ಇಲ್ಲಿ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದರೆ, ಅದನ್ನು ಹ್ಯಾಕರ್‌ಗಳು ತಮ್ಮ ಹಿಡಿತಕ್ಕೆ ಪಡೆದುಕೊಂಡು ನಿಮ್ಮ ಖಾತೆಯನ್ನು ಖಾಲಿ ಮಾಡುತ್ತಾರೆ.
ಮೆಡಿಸಿನ್ ಬಗ್ಗೆ ಸರ್ಚ್ ಮಾಡುವಾಗ ಎಚ್ಚರ: ನಿಮಗೆ ಆರೋಗ್ಯ ಹದಗೆಟ್ಟರೆ ವೈದ್ಯರ ಬಳಿ ಹೋಗಿ. ಆದರೆ ಗೂಗಲ್‌ನಲ್ಲಿ ಮೆಡಿಸಿನ್ ಅಥವಾ ಆರೋಗ್ಯ ಸಲಹೆಗಳ ಬಗ್ಗೆ ಸರ್ಚ್ ಮಾಡಬೇಡಿ. ಯಾಕೆಂದರೆ ಗೂಗಲ್‌ನಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಗೂಗಲ್ ಮಾಹಿತಿಗಿಂತ ವೈದ್ಯರ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಗೂಗಲ್ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳವುದೂ ಸಹ ಅಷ್ಟೇ ಅಪಾಯಕಾರಿ.
ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್: ಹೆಚ್ಚಿನ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್‌ಗಳನ್ನು ಗೂಗಲ್‌ನಲ್ಲಿ ಹುಡುಕಲಾಗುತ್ತದೆ. ಯಾವುದೇ ಹೊಸ ಅಪ್ಲಿಕೇಶನ್ ಬಂದಾಗ, ಅದರ ಹುಡುಕಾಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಗೂಗಲ್ ಹುಡುಕಾಟವು ಕೆಲವೊಮ್ಮೆ ಫಿಶಿಂಗ್ ಅಥವಾ ನಕಲಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ಒಳಗೊಂಡಿರಬಹುದು. ಅದು ನಮ್ಮ ಸಾಧನವನ್ನು ಹಾನಿಗೊಳಿಸುತ್ತದೆ ಮತ್ತು ನಮ್ಮ ವಿವರಗಳನ್ನು ಸೋರಿಕೆ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು.
Published On - 11:23 am, Fri, 14 October 22