ಬೆಂಗಳೂರು: ಕರೂರ್ ವೈಶ್ಯ ಬ್ಯಾಂಕ್ (Karur Vysya Bank) ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) 25 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ (ಡಿಸೆಂಬರ್ 7) ಜಾರಿಗೆ ಬರಲಿದೆ. ಎಂಸಿಎಲ್ಆರ್ ಹೆಚ್ಚಳದೊಂದಿಗೆ ಸಾಲ ಪಡೆದವರ ಇಎಂಐ ಮೊತ್ತ ಹೆಚ್ಚಳವಾಗಲಿದೆ. ಆರ್ಬಿಐ ರೆಪೊ ದರ ಹೆಚ್ಚಳ (Repo Rate Hike) ಮಾಡಿದ ಬೆನ್ನಲ್ಲೇ ಕರೂರ್ ವೈಶ್ಯ ಬ್ಯಾಂಕ್ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಹೆಚ್ಚಿಸಿದೆ.
ಒಂದು ವರ್ಷ ಅವಧಿಯ ಎಂಸಿಎಲ್ಆರ್ ಶೇಕಡಾ 8.80ರಿಂದ ಶೇಕಡಾ 9.05ಕ್ಕೆ ಹೆಚ್ಚಳಗೊಂಡಿದೆ. ಆರು ತಿಂಗಳ ಎಂಸಿಎಲ್ಆರ್ ಶೇಕಡಾ 8.70 ರಿಂದ ಶೇಕಡಾ 8.95ಕ್ಕೆ ಏರಿಕೆಯಾಗಿದೆ. ಮೂರು ತಿಂಗಳ ಎಂಸಿಎಲ್ಆರ್ ಶೇಕಡಾ 8.35ರಿಂದ ಶೇಕಡಾ 8.60ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ ಎಂಸಿಎಲ್ಆರ್ ಶೇಕಡಾ 8.20ರಿಂದ 8.45ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: RBI Repo Rate Hike: ಆರ್ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ
ಎಂಸಿಎಲ್ಆರ್ ಎಂದರೆ ಸಾಲದ ಮೇಲೆ ಬ್ಯಾಂಕ್ ವಿಧಿಸುವ ಕನಿಷ್ಠ ಬಡ್ಡಿ ದರವಾಗಿದೆ. ಇದಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲ ನೀಡುವುದಿಲ್ಲ.
ಸಾಲ ನೀಡಿಕೆ ಹೆಚ್ಚಳ
23ನೇ ಹಣಕಾಸು ವರ್ಷದಲ್ಲಿ ಕರೂರ್ ವೈಶ್ಯ ಬ್ಯಾಂಕ್ನ ಸಾಲ ನೀಡಿಕೆ ಪ್ರಮಾಣದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 15ರಷ್ಟು ಹೆಚ್ಚಳವಾಗಿದೆ. ಈ ವರ್ಷ ಬ್ಯಾಂಕ್ 7,996 ಕೋಟಿ ರೂ. ಸಾಲ ನೀಡಿದೆ.
ಸೋಮವಾರವಷ್ಟೇ ಮುಂಬೈ ಷೇರುಪೇಟೆಯಲ್ಲಿ ಕರೂರ್ ವೈಶ್ಯ ಬ್ಯಾಂಕ್ ಷೇರುಗಳು ಶೇಕಡಾ 0.40 ವೃದ್ಧಿ ದಾಖಲಿಸಿದ್ದವು. ಬ್ಯಾಂಕ್ ಷೇರಿನ ಬೆಲೆ 99.50 ರೂ. ಆಗಿತ್ತು. ಒಂದು ಹಂತದಲ್ಲಿ ಕರೂರ್ ವೈಶ್ಯ ಬ್ಯಾಂಕ್ ಷೇರು 100 ರೂ. ಗಡಿ ದಾಟಿತ್ತು.
ರೆಪೊ ದರ ಹೆಚ್ಚಳದ ಬೆನ್ನಲ್ಲೇ ಕ್ರಮ
ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಲಾಗಿದ್ದು, ಪರಿಷ್ಕೃತ ರೆಪೊ ದರ ಶೇಕಡಾ 6.25 ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆರ್ಬಿಐ ಬುಧವಾರ ಬೆಳಿಗ್ಗೆ ತಿಳಿಸಿದೆ. ಆರ್ಬಿಐ ಸತತ ಐದನೇ ಬಾರಿ ರೆಪೊ ದರ ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೇ ಕರೂರ್ ವೈಶ್ಯ ಬ್ಯಾಂಕ್ ಎಂಸಿಎಲ್ಆರ್ ಹೆಚ್ಚಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ