
ವಾಷಿಂಗ್ಟನ್, ಜನವರಿ 15: ಬಹಳ ಬೇಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಹೆಚ್ಚಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಉದ್ಯೋಗನಷ್ಟ (AI effect on Jobs) ಬಹಳ ದೊಡ್ಡ ಮಟ್ಟದಲ್ಲಿ ಆಗಬಹುದು ಎಂಬ ಆತಂಕ ಇದೆ. ಈ ವಿಚಾರದಲ್ಲಿ ಮಿಶ್ರಾಭಿಪ್ರಾಯಗಳಿವೆ. ಉದ್ಯೋಗನಷ್ಟ ಇರಬಹುದಾದರೂ ಎಐ ಟೆಕ್ನಾಲಜಿಯಿಂದ ಅದಕ್ಕಿಂತ ಮಿಗಿಲಾದ ಲಾಭದ ಅವಕಾಶ ಇದೆ ಎನ್ನುವ ಅನಿಸಿಕೆ ಇದೆ. ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲೀನಾ ಜಾರ್ಜಿಯೆವಾ (Kristalina Georgieva) ಕೂಡ ಈ ಅನಿಸಿಕೆಗೆ ಧ್ವನಿಗೂಡಿಸಿದ್ದಾರೆ. ಸ್ವಿಟ್ಜರ್ಲ್ಯಾಂಡ್ನ ಡಾವೋಸ್ನಲ್ಲಿ (Davos) ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಗೆ ತೆರಳುವ ಮುನ್ನ ಎಎಫ್ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜಾರ್ಜಿಯೆವಾ, ಎಐ ಟೆಕ್ನಾಲಜಿಯಿಂದ ಉದ್ಯೋಗಗಳು ನಶಿಸುವ ಸಾಧ್ಯತೆ ಇದ್ದರೂ ಉತ್ಪಾದನೆ ಮತ್ತು ಜಾಗತಿಕ ಬೆಳವಣಿಗೆ ಹೆಚ್ಚಿಸಲು ಅದು ನೆರವಾಗಬಹುದು ಎಂದಿದ್ದಾರೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕವಾಗಿ ಶೇ. 40ರಷ್ಟು ಉದ್ಯೋಗನಷ್ಟ ಉಂಟು ಮಾಡುವ ಸಾಧ್ಯತೆ ಎಂದಿರುವ ಐಎಂಎಫ್ ಮುಖ್ಯಸ್ಥೆ, ಈ ವಿಚಾರದಲ್ಲಿ ಮುಂದುವರಿದ ದೇಶಗಳಿಗೆ ಹೆಚ್ಚು ಬಾಧೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Rich vs Poor: ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತಿಕೆ; ಬಡವರಿಗೆ ಇನ್ನಷ್ಟು ಬಡತನ; ಬೆಚ್ಚಿಬೀಳಿಸುತ್ತದೆ ಆಕ್ಸ್ಫ್ಯಾಮ್ ವರದಿ
ಜಾರ್ಜಿಯೆವಾ ಪ್ರಕಾರ, ಮುಂದುವರಿದ ದೇಶಗಳಲ್ಲಿ ಶೇ. 60ರಷ್ಟು ಉದ್ಯೋಗಗಳು ಎಐ ಟೆಕ್ನಾಲಜಿಯಿಂದಾಗಿ ಅಪಾಯಕ್ಕೆ ಸಿಲುಕಬಹುದು. ಆದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಕಡಿಮೆ ಉದ್ಯೋಗನಷ್ಟ ಆಗಬಹುದು.
ಹೆಚ್ಚು ಕೌಶಲ್ಯದ ಉದ್ಯೋಗಗಳು ಇದ್ದಷ್ಟೂ ಎಐ ಪರಿಣಾಮ ಹೆಚ್ಚಿರುತ್ತದೆ. ಹೀಗಾಗಿ, ಮುಂದುವರಿದ ಆರ್ಥಿಕತೆಗಳ ಮೇಲೆ ಪರಿಣಾಮ ಹೆಚ್ಚಿರುತ್ತದೆ. ಆದರೆ, ಇದೇ ಎಐ ಟೆಕ್ನಾಲಜಿಯಿಂದ ಉತ್ಪನ್ನಶೀಲತೆಯೂ ಬಹಳ ಅಧಿಕಗೊಳ್ಳುತ್ತದೆ ಎಂದು ನಿನ್ನೆ ಭಾನುವಾರ (ಜ. 14) ಬಿಡುಗಡೆಯಾದ ಐಎಂಎಫ್ನ ವರದಿಯೊಂದರಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Share Market: ಭಾರತದ ಷೇರುಪೇಟೆ ಹೊಸ ಎತ್ತರಕ್ಕೆ; ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ
‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಿಂದ ನಿಮ್ಮ ಕೆಲಸ ಹೋಗಬಹುದು. ಅಥವಾ ನಿಮ್ಮ ಕೆಲಸದ ಕ್ಷಮತೆಯನ್ನು ಹೆಚ್ಚಿಸಬಹುದು. ನಿಮ್ಮ ಉತ್ಪನ್ನಶೀಲತೆ ಮತ್ತು ಸಂಬಳ ಎಲ್ಲವೂ ಹೆಚ್ಚಾಗಬಹುದು’ ಎಂದು ಜಾರ್ಜಿಯೆವಾ ಅವರು ಎಐನ ಧನಾತ್ಮಕ ಪರಿಣಾಮಗಳನ್ನು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ