ಈ ವಾರಾಂತ್ಯದ ಹೊತ್ತಿಗೆ (ಜನವರಿ 27) ಏರ್ ಇಂಡಿಯಾವನ್ನು (Air India) ಸರ್ಕಾರವು ಟಾಟಾ ಸಮೂಹಕ್ಕೆ (Tata Group) ಹಸ್ತಾಂತರಿಸುವ ಸಾಧ್ಯತೆ ಇದೆ. ಜನವರಿ 27ರ ಹೊತ್ತಿಗೆ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ, ಎಂದು ಸೋಮವಾರದಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಎನ್ಡಿಟಿವಿ ವರದಿ ಮಾಡಿದೆ. “ಏರ್ ಇಂಡಿಯಾದ ಬಂಡವಾಳ ಹಿಂತೆಗೆತವನ್ನು ಜನವರಿ 27ಕ್ಕೆ ನಿರ್ಧರಿಸಲಾಗಿದೆ. ಜನವರಿ 20ನೇ ತಾರೀಕಿಗೆ ಅನ್ವಯ ಆಗುವಂತೆ ಮುಕ್ತಾಯದ ಬ್ಯಾಲೆನ್ಸ್ ಶೀಟ್ ಅನ್ನು ಜನವರಿ 24ಕ್ಕೆ ಒದಗಿಸಲಾಗುವುದು. ಆ ಮೂಲಕ ಟಾಟಾ ಸಮೂಹದಿಂದ ಅದರ ಪರಿಶೀಲನೆ ಮಾಡಬಹುದು. ಏನಾದರೂ ಬದಲಾವಣೆಗಳು ಇದ್ದಲ್ಲಿ ಬುಧವಾರದಂದು (ಜನವರಿ 25) ಜಾರಿಗೆ ಬರುತ್ತದೆ,” ಎಂದು ಏರ್ ಇಂಡಿಯಾ ಹಣಕಾಸು ನಿರ್ದೇಶಕರಾದ ವಿನೋದ್ ಹೆಜಮಾಡಿ ಅವರು ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್ನಲ್ಲಿ ತಿಳಿಸಿದ್ದಾರೆ.
“ಬಂಡವಾಳ ಹಿಂತೆಗೆತದ ಪ್ರಕ್ರಿಯೆಗೆ ನಾವು ಬೆಂಬಲ ನೀಡುತ್ತಾ ಇಲ್ಲಿಯವರೆಗೆ ಅಮೋಘವಾಗಿ ನಮ್ಮ ಕೆಲಸ ಮಾಡಿದ್ದೇವೆ. ಮುಂದಿನ ಮೂರು ದಿನಗಳು ನಮ್ಮ ಇಲಾಖೆಗೆ ಭಾರೀ ಕೆಲಸ ಇರುತ್ತದೆ ಮತ್ತು ಬಂಡವಾಳ ಹಿಂತೆಗೆತದ ಈ ಮೂರ್ನಾಲ್ಕು ದಿನಗಳು ನಿಮ್ಮಿಂದ ನೀಡುವುದಕ್ಕೆ ಸಾಧ್ಯವಿರುವ ಅತ್ಯುತ್ತಮ ಕೊಡುಗೆಯನ್ನು ನೀಡಬೇಕು ಅಂತ ಕೇಳಿಕೊಳ್ಳುತ್ತೇನೆ,” ಎಂದು ಹೆಜಮಾಡಿ ಹೇಳಿದ್ದಾರೆ. ಸಿಬ್ಬಂದಿಯ ಸಹಕಾರವನ್ನು ಕೋರುತ್ತಾ, “ನಮಗೆ ನೀಡಿರುವ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ನಾವು ತಡರಾತ್ರಿಗಳಲ್ಲೂ ಕೆಲಸ ಮಾಡಬೇಕಾಗಬಹುದು. ಆದ್ದರಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಕಾರ ಕೋರುತ್ತಿದ್ದೇನೆ,” ಎಂದಿದ್ದಾರೆ.
ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಒಂದು ವೇಳೆ ಯಾವುದಾದರೂ ಕಾರಣಕ್ಕೆ ಬಂಡವಾಳ ಹಿಂತೆಗೆತ ಪ್ರಕ್ರಿಯೆಯು ಜನವರಿ 27ರಿಂದ ಮುಂದಕ್ಕೆ ಹೋದರೆ ಆ ನಂತರ ತಿಂಗಳ ಕೊನೆಯ ತನಕ ಮಾಡಬೇಕಾಗುತ್ತದೆ ಎಂದಿದ್ದಾರೆ. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ನ ಸಂಪೂರ್ಣ ಒಡೆತನದ ಟಾಲೆಸ್ ಪ್ರೈವೇಟ್ ಲಿಮಿಟೆಡ್ ಕಳೆದ ವರ್ಷ ಸರ್ಕಾರಿ ಒಡೆತನದ ಏರ್ ಇಂಡಿಯಾದಲ್ಲಿ ಶೇ 100ರಷ್ಟು ಈಕ್ವಿಟಿ ಪಾಲನ್ನು ಖರೀದಿಸಲು ಯಶಸ್ವಿಯಾಗಿತ್ತು. ಇದರ ಜತೆಗೆ ಏರ್ ಇಂಡಿಯಾದ ಷೇರಿನ ಪಾಲು ಹೊಂದಿರುವ AIXL ಮತ್ತು ಏರ್ ಇಂಡಿಯಾ SATS ಏರ್ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (AISATS) ಸಹ ಖರೀದಿಸಿತು.
ಇದನ್ನೂ ಓದಿ: ಏರ್ ಇಂಡಿಯಾ ಹೂಡಿಕೆ ಹಿಂಪಡೆಯುವಿಕೆ ವಿರುದ್ಧ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್