ನವದೆಹಲಿ: ಫ್ರಾನ್ಸ್ ದೇಶದ ಏರ್ಬಸ್ ಸಂಸ್ಥೆಯಿಂದ (Airbus) 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಭಾರತದ ಏರ್ ಇಂಡಿಯಾ ಸಂಸ್ಥೆ (Air India) ಇದೀಗ ಅಮೆರಿಕದ 220 ಬೋಯಿಂಗ್ ವಿಮಾನಗಳನ್ನು ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿಹಾಕಿದೆ. ಭಾರತದ ಅತಿದೊಡ್ಡ ವೈಮಾನಿಕ ಸಂಸ್ಥೆ ಏರ್ ಇಂಡಿಯಾ ಒಟ್ಟು 470 ವಿಮಾನಗಳನ್ನು ಖರೀದಿಸುತ್ತಿರುವುದು ಬಹಳ ದೊಡ್ಡ ಬೆಳವಣಿಗೆ ಎನಿಸಿದೆ. ವೈಮಾನಿಕ ಇತಿಹಾಸದಲ್ಲೇ ಒಂದು ಸಂಸ್ಥೆ ಇಷ್ಟು ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಬೋಯಿಂಗ್ ಸಂಸ್ಥೆಯ 220 ವಿಮಾನಗಳನ್ನು ಖರೀದಿಸಲು 34 ಬಿಲಿಯನ್ ಡಾಲರ್ (2.8 ಲಕ್ಷ ಕೋಟಿ ರೂ) ಮೊತ್ತಕ್ಕೆ ಏರ್ ಇಂಡಿಯಾ ಡೀಲ್ ಮಾಡಿಕೊಂಡಿದೆ. ಇದು ರಿಯಾಯಿತಿ ಇತ್ಯಾದಿಯನ್ನು ಹೊರತುಪಡಿಸಿದ ಮೊತ್ತವಾಗಿದೆ. ಬೋಯಿಂಗ್ನ 190 ಬಿ737 ಮ್ಯಾಕ್ಸ್ ಮತ್ತು 20 ಬಿ777ಎಕ್ಸ್ ವಿಮಾನಗಳು ಸೇರಿವೆ. ಈ ಒಪ್ಪಂದದ ಪ್ರಕಾರ, ಈಗಿರುವ ಬೆಲೆಯಲ್ಲೇ ಮುಂದೆ 70ಕ್ಕೂ ಹೆಚ್ಚು ವಿಮಾನಗಳನ್ನು ಬೋಯಿಂಗ್ನಿಂದ ಖರೀದಿಸುವ ಅವಕಾಶ ಏರ್ ಇಂಡಿಯಾಗೆ ಇದೆ. ಅದೂ ಸೇರಿ ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಒಪ್ಪಂದ ಮೊತ್ತ 45.9 ಬಿಲಿಯನ್ ಡಾಲರ್ (ಸುಮಾರು 3.8 ಲಕ್ಷ ಕೋಟಿ ರೂಪಾಯಿ) ಆಗುತ್ತದೆ.
ಇದೇ ವೇಳೆ, ಟಾಟಾ ಒಡೆತನದ ಏರ್ ಇಂಡಿಯಾ ಸಂಸ್ಥೆ ಫ್ರಾನ್ಸ್ ಮೂಲದ ಏರ್ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ದೊಡ್ಡ ಗಾತ್ರದ 40 ಎ350 ಏರ್ಬಸ್ ವಿಮಾನಗಳು ಒಳಗೊಂಡಿವೆ. ಈ ಬೃಹತ್ ವಿಮಾನಗಳು ದೂರಪ್ರಯಾಣಕ್ಕೆ ಹೇಳಿಮಾಡಿಸಿದವಾಗಿವೆ.
ಏರ್ಬಸ್ ಮತ್ತು ಬೋಯಿಂಗ್ಗಳಿಂದ ಏರ್ಇಂಡಿಯಾ ಒಟ್ಟು 470 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಂತಾಗಿದೆ. ಇದು ಜಾಗತಿಕ ವೈಮಾನಿಕ ಇತಿಹಾಸದಲ್ಲೇ ಅತಿ ದೊಡ್ಡ ಡೀಲ್ ಎನಿಸಿದೆ. ಎರಡೂ ಒಪ್ಪಂದಗಳ ಒಟ್ಟು ಮೊತ್ತ 85 ಬಿಲಿಯನ್ ಡಾಲರ್. ಅಂದರೆ ಸುಮಾರು 7 ಲಕ್ಷ ಕೋಟಿ ರೂಪಾಯಿ. 2013ರಲ್ಲಿ ಎಮಿರೇಟ್ಸ್ ಏರ್ಲೈನ್ ಸಂಸ್ಥೆ 75 ಬಿಲಿಯನ್ ಡಾಲರ್ ಮೊತ್ತಕ್ಕೆ ಬೋಯಿಂಗ್ ವಿಮಾನಗಳನ್ನು ಖರೀದಿಸಿತ್ತು. ಈಗ ಏರ್ ಇಂಡಿಯಾ ಸಂಸ್ಥೆ ಆ ದಾಖಲೆಯನ್ನು ಅಳಿಸಿಹಾಕಿದೆ.
ಫ್ರಾನ್ಸ್, ಅಮೆರಿಕಕ್ಕೆ ಖುಷಿಯೋ ಖುಷಿ
ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸುತ್ತಿರುವುದು ಸಣ್ಣ ವಿಷಯವಲ್ಲ. ಈ ವಿಮಾನಗಳ ಉತ್ಪಾದನೆ ನಡೆಯುವ ಫ್ರಾನ್ಸ್ ಮತ್ತು ಅಮೆರಿಕದ ಆರ್ಥಿಕತೆಗೆ ಬಹಳ ಪುಷ್ಟಿ ಸಿಗುತ್ತದೆ. ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಅಮೆರಿಕದಲ್ಲಿ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಅಂತೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಏರ್ ಇಂಡಿಯಾ ಬೋಯಿಂಗ್ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿರುವುದು.
ಈ ಒಪ್ಪಂದದಿಂದಾಗಿ ಅಮೆರಿಕದ 44 ಜಿಲ್ಲೆಗಳಾದ್ಯಂತ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈ ಉದ್ಯೋಗಕ್ಕಾಗಿ ನಾಲ್ಕು ವರ್ಷದ ಡಿಗ್ರಿ ಓದುವ ಅಗತ್ಯ ಇರುವುದಿಲ್ಲ ಎಂದು ಸ್ವತಃ ಜೋ ಬೈಡನ್ ಅವರೇ ಹೇಳಿಕೆ ನೀಡಿದ್ದಾರೆ.
ಏರ್ ಇಂಡಿಯಾ ಇಷ್ಟಕ್ಕೆ ಸೀಮಿತಗೊಂಡಿಲ್ಲ. ರೋಲ್ಸ್ ರಾಯ್ಸ್ ಕಂಪನಿಯಿಂದ 68 ಟ್ರೆಂಟ್ ಎಕ್ಸ್ಡಬ್ಲ್ಯೂಬಿ-97 ಎಂಜಿನ್ಗಳನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಈ ಎಂಜಿನ್ಗಳು ಏರ್ಬಸ್ ವಿಮಾನಗಳ ಚಾಲನೆಗೆ ಬಳಸಿಕೊಳ್ಳಲಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಈ ಎಂಜಿನ್ಗಳನ್ನು ಒಂದು ಕಂಪನಿ ಖರೀದಿಸುತ್ತಿರುವುದು ಇದೇ ಮೊದಲು. ಏರ್ ಇಂಡಿಯಾ ಇದೀಗ ಟ್ರೆಂಟ್ ಎಕ್ಸ್ಡಬ್ಲ್ಯೂಬಿ-97 ಎಂಜಿನ್ನ ಅತಿದೊಡ್ಡ ಆಪರೇಟರ್ ಎನಿಸಲಿದೆ.
ಭಾರತಕ್ಕೆ ಅಗತ್ಯವಿದೆಯಾ ಈ ಖರೀದಿ?
ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ ಸುಮಾರು 7 ಲಕ್ಷ ಕೋಟಿ ರೂ ಕೊಟ್ಟು ವಿಮಾನಗಳನ್ನು ಖರೀದಿಸುತ್ತಿರುವುದು ವ್ಯರ್ಥ ಖರ್ಚಾ ಎಂಬ ಪ್ರಶ್ನೆ ಮೂಡಬಹುದು. ಭಾರತದ ವೈಮಾನಿಕ ಕ್ಷೇತ್ರ ಬಹಳ ಗಣನೀಯವಾಗಿ ಬೆಳೆಯುತ್ತಿದೆ. ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಫ್ರಾನ್ಸ್ ಅಧ್ಯಕ್ಷರ ಜೊತೆ ಆನ್ಲೈನ್ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ಮುಂದಿನ 15 ವರ್ಷದಲ್ಲಿ ಇನ್ನೂ 2000 ಕ್ಕೂ ಹೆಚ್ಚು ವಿಮಾನಗಳು ಬೇಕಾಗಬಹುದು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಏರ್ ಇಂಡಿಯಾ ಸುಮಾರು 500 ವಿಮಾನಗಳನ್ನು ಖರೀದಿಸುತ್ತಿರುವುದು ಉತ್ತಮ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ.
Published On - 8:03 am, Wed, 15 February 23