
ನವದೆಹಲಿ, ಡಿಸೆಂಬರ್ 1: ಭಾರತದ ಆರ್ಥಿಕತೆ (Indian Economy) ಪ್ರಬಲ ಹಾಗೂ ಸ್ಥಿರವಾಗಿ ಬೆಳವಣಿಗೆ ಹೊಂದುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಹಲವು ಸೂಚಕಗಳನ್ನು ಗಮನಿಸಬಹುದು. ಪರ್ಯಾಯ ಹೂಡಿಕೆ ಇಕೋಸಿಸ್ಟಂ (Alternative investments ecosystem) ಸಮೃದ್ಧವಾಗಿ ಬೆಳೆಯುತ್ತಿರುವುದು ಒಂದು ಕುರುಹೆನಿಸಿದೆ. ಪರ್ಯಾಯ ಹೂಡಿಕೆಗಳೆನಿಸಿದ ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್ (ಪಿಎಂಎಸ್) ಮತ್ತು ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್) ಕಳೆದ 10 ವರ್ಷದಲ್ಲಿ ಶೇ. 31.24 ಸಿಎಜಿಆರ್ನಲ್ಲಿ ಬೆಳೆಯುತ್ತಾ ಬಂದಿವೆ.
2015ರಲ್ಲಿ ಪರ್ಯಾಯ ಹೂಡಿಕೆಗಳು 1.54 ಲಕ್ಷ ಕೋಟಿ ರೂ ಇದ್ದವು. 2025ರಲ್ಲಿ ಅವು 23.43 ಲಕ್ಷ ಕೋಟಿ ರೂ ಆಗಿವೆ. ಈ ಪರ್ಯಾಯ ಹೂಡಿಕೆಗಳು ಬೆಳೆಯಲು ಏನು ಕಾರಣ? ತಜ್ಞರ ಪ್ರಕಾರ ಜಾಗತಿಕ ಸ್ಥೂಲ ಆರ್ಥಿಕತೆಯ ಅನಿಶ್ಚಿತ ಸ್ಥಿತಿಯು ಹೂಡಿಕೆದಾರರ ಚಿತ್ತ ಸಾಂಪ್ರದಾಯಿಕ ಈಕ್ವಿಟಿ ಮತ್ತು ಡೆಟ್ ಸ್ಥಳಗಳನ್ನು ಬಿಟ್ಟು ಬೇರೆಡೆ ಹಾಯಿಸುವಂತೆ ಆಗಿದೆ.
ಸ್ಟಾರ್ಟಪ್ ಸ್ಥಾಪಕರು, ವೃತ್ತಿಪರರು, ಹೊಸ ತಲೆಮಾರಿನ ಹೂಡಿಕೆದಾರರು ಹಾಗೂ ಕೆಳ ಸ್ತರದ ನಗರಗಳಲ್ಲಿನ ಹೂಡಿಕೆದಾರರು ಪರ್ಯಾಯ ಹೂಡಿಕೆಗಳಿಗೆ ಆದ್ಯತೆ ಕೊಡುತ್ತಿರುವ ಟ್ರೆಂಡ್ ಇದೆ. ಪಿಎಂಎಸ್ ಉದ್ಯಮ ಕಳೆದ 10 ವರ್ಷದಲ್ಲಿ 1.27 ಲಕ್ಷ ಕೋಟಿ ರೂನಿಂದ 8.37 ಲಕ್ಷ ಕೋಟಿ ರೂಗೆ ಬೆಳೆದಿದೆ. ಎಐಎಫ್ ಉದ್ಯಮವಂತೂ 10 ವರ್ಷ ಶೇ. 49.23 ಸಿಎಜಿಆರ್ನಲ್ಲಿ ಬೆಳೆದಿದೆ. 10 ವರ್ಷದ ಹಿಂದೆ ಕೇವಲ 27,484 ಕೋಟಿ ರೂ ಹೂಡಿಕೆ ಕಂಡಿದ್ದ ಎಐಎಫ್ 2025ರಲ್ಲಿ 15.05 ಲಕ್ಷ ಕೋಟಿ ರೂ ಎಯುಎಂ ಹೊಂದಿದೆ.
ಇದನ್ನೂ ಓದಿ: ಜಿಎಸ್ಟಿ ದರ ಕಡಿತದ ಪರಿಣಾಮ, ನವೆಂಬರ್ನಲ್ಲಿ ತೆರಿಗೆ ಸಂಗ್ರಹ ಕುಂಠಿತ
ಬೆಳೆಯುತ್ತಿರುವ ಆರ್ಥಿಕತೆಯ ಸಂಕೇತಗಳಲ್ಲಿ ಇಂಧನ ಬಳಕೆಯೂ ಒಂದು. ಅಡುಗೆ ಅನಿಲದ ಬಳಕೆ ಕಳೆದ 10 ವರ್ಷದಲ್ಲಿ ಗಣನೀಯವಾಗಿ ಹೆಚ್ಚಿದೆ. 2004-05ರಲ್ಲಿ 10.2 ಎಂಎಂಟಿಯಷ್ಟು ಎಲ್ಪಿಜಿ ಬಳಕೆ ಇತ್ತು. 2013-14ರಲ್ಲಿ ಅದು 16.3 ಎಂಎಂಟಿಗೆ ಏರಿತು. ಆ ಹತ್ತು ವರ್ಷದಲ್ಲಿ ಎಲ್ಪಿಜಿ ಬಳಕೆ ಸುಮಾರು ಶೇ. 60ರಷ್ಟು ಹೆಚ್ಚಳವಾಗಿತ್ತು. 2024-25ರಲ್ಲಿ 31.3 ಎಂಎಂಟಿ ಎಲ್ಪಿಜಿ ಬಳಕೆಯಾಗುತ್ತಿದೆ. ಅಂದರೆ, ಈ 10 ವರ್ಷದಲ್ಲಿ ಬಹುತೇಕ ಎರಡು ಪಟ್ಟು ಬಳಕೆ ಹೆಚ್ಚಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ