ನವದೆಹಲಿ, ಜೂನ್ 3: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (stock market investment) ಮಾಡುತ್ತಿರುವವರು ಸಮಯ, ಸಂದರ್ಭ ನೋಡಿ ಹೂಡಿಕೆ ಮಾಡಿ ಎನ್ನುವವರಿದ್ದಾರೆ. ಹಾಗೆಯೇ, ಸಮಯ ನೋಡುವ ಬದಲು ದೀರ್ಘಾವಧಿ ದೃಷ್ಟಿಯಿಂದ ಹೂಡಿಕೆ ಮಾಡುವುದಾದರೆ ಯಾವಾಗ ಬೇಕಾದರೂ ಆರಂಭಿಸಬಹುದು ಎನ್ನುವುದು ಇನ್ನೂ ಕೆಲವರ ಸಲಹೆ. ಈ ಮಧ್ಯೆ ಮಾರುಕಟ್ಟೆ ಪರಿಣಿತರಾಗಿರುವ ಮಧುಸೂದನ್ ಕೇಲ (Madhusudan Kela) ಪ್ರಕಾರ ಈಗ ಭಾರತದಲ್ಲಿ ಅಮೃತಕಾಲ (Amrit Kaal) ನಡೆಯುತ್ತಿದೆಯಂತೆ. ಮಾರುಕಟ್ಟೆ ಗರಿಷ್ಠ ಮಟ್ಟಕ್ಕೆ ಹೋಗಿ ಕುಸಿದುಬೀಳುತ್ತದೆ ಎನ್ನುವ ಭಯ ಇಟ್ಟುಕೊಳ್ಳದೇ ಹೂಡಿಕೆ ಮಾಡಲು ಒಳ್ಳೆಯ ಸಮಯ ಎಂದು ಅವರು ಸಲಹೆ ನೀಡಿದ್ದಾರೆ.
ಮೊನ್ನೆ ಪ್ರಕಟವಾದ ಎಕ್ಸಿಟ್ ಪೋಲ್ಗಳು ಎನ್ಡಿಎ ಮೈತ್ರಿಕೂಟದ ಗೆಲುವನ್ನು ಸೂಚಿಸುತ್ತಿವೆ. ಇದರ ಪರಿಣಾಮ ಎಂಬಂತೆ ಇಂದು ಮಾರುಕಟ್ಟೆ ಗರಿಗೆದರಿ ನಿಂತಿದೆ. ಬಹುತೇಕ ಸ್ಟಾಕುಗಳು ಪಾಸಿಟಿವ್ ಗ್ರೋತ್ ಪಡೆದಿವೆ. ಮಧುಸೂದನ್ ಕೇಲ ಈ ಸಂದರ್ಭವನ್ನು ಅಮೃತ ಕಾಲ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ರಿಸಲ್ಟ್ ಬರುವ ಮುನ್ನವೇ ಉಬ್ಬಿ ನಿಂತ ಷೇರುಪೇಟೆ; ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಮೇಲಕ್ಕೆ
ಭಾರತದ ಪರವಾಗಿ ಎಲ್ಲಾ ಅಂಶಗಳು ಮೇಳೈಸಿವೆ. ಹಣದುಬ್ಬರವಾಗಲೀ, ಬಡ್ಡಿದರವಾಗಲೀ, ತೆರಿಗೆ ಸಂಗ್ರಹವಾಗಲಿ, ಜಿಡಿಪಿಯಾಗಲೀ ಎಲ್ಲವೂ ಅನುಕೂಲಕರ ಸ್ಥಿತಿಗೆ ನಿಲ್ಲಿಸಿವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಹಣ ಚೆಲ್ಲಲು ಹೆದರಲೇ ಬಾರದು. ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನುವ ಅನುಮಾನ ಬಿಟ್ಟು ಹೂಡಿಕೆ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.
‘ಎಲ್ಲ ಸ್ಥೂಲ ಸೂಚಕಗಳು (ಮ್ಯಾಕ್ರೋ ಇಂಡಿಕೇಟರ್ಸ್) ಭಾರತಕ್ಕೆ ಅನುಕೂಲಕರ ಸ್ಥಿತಿಯಲ್ಲಿವೆ. ಜಾಗತಿಕ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸ್ಥಿತಿ ಉತ್ತಮವಾಗಿದೆ. ಹೆಚ್ಚಿನ ವಲಯಗಳಲ್ಲಿ ವ್ಯಾಲ್ಯುಯೇಶನ್ ಗರಿಷ್ಠ ಮಟ್ಟಕ್ಕೆ ಹೋಗಿದೆ ಎಂದನಿಸಬಹುದು. ಆದರೆ, ಮುಂದಿನ ಮೂರರಿಂದ ಐದು ವರ್ಷದಲ್ಲಿ ಬಹಳಷ್ಟು ಸಂಪತ್ತು ವೃದ್ಧಿಸುವ ಅವಕಾಶ ಇದೆ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ 10 ವರ್ಷದಲ್ಲಿ ಒಮ್ಮೆಯೂ ನೆಗಟಿವ್ ರಿಟರ್ನ್ಸ್ ಕೊಟ್ಟಿಲ್ಲ 36 ಈಕ್ವಿಟಿ ಮ್ಯೂಚುವಲ್ ಫಂಡ್ಸ್
ಮಧುಸೂದನ್ ಕೇಲ ಪ್ರಕಾರ ಬಂಡವಾಳ ವೆಚ್ಚ ಬೇಡುವಂತಹ ವಲಯಗಳು ಕಳೆದ ಎರಡು ವರ್ಷದಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಇವು ಮುಂದಿನ ಕೆಲ ವರ್ಷ ಗಣನೀಯ ವೃದ್ಧಿ ಕಾಣಬಹುದು. ಹಾಗೆಯೇ, ಮ್ಯಾನುಫ್ಯಾಕ್ಚರಿಂಗ್, ಕೆಮಿಕಲ್ಸ್, ಫಾರ್ಮಾ ಕ್ಷೇತ್ರ ಮತ್ತು ಆಯ್ದ ಖಾಸಗಿ ಬ್ಯಾಂಕುಗಳೂ ಕೂಡ ಪ್ರಗತಿ ಕಾಣಲಿವೆ. ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಫೋರ್ಜಿಂಗ್, ಆಟೊ ಆನ್ಸಿಲರೀಸ್ ಕಂಪನಿಗಳಿಗೆ ಹೆಚ್ಚು ಉತ್ತಮ ಭವಿಷ್ಯ ಇದೆ ಎನ್ನುವುದು ಅವರ ಸಲಹೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ