ಅಹ್ಮದಾಬಾದ್: ಭಾರತದ ಅತಿದೊಡ್ಡ ಹಾಲು ಮಾರಾಟ ಸಂಸ್ಥೆ ಎನಿಸಿರುವ ಅಮುಲ್ (AMUL) ಇಂದು ಶುಕ್ರವಾರ ತನ್ನ ಹಾಲಿನ ದರಗಳನ್ನು ಹೆಚ್ಚಿಸಿದೆ. ಅಮೂಲ್ನ ವಿವಿಧ ಹಾಲು ಉತ್ಪನ್ನಗಳ ಬೆಲೆ ಎರಡು ರೂಪಾಯಿಯಷ್ಟು ಹೆಚ್ಚಳವಾಗಿದೆ. ಗುಜರಾತ್ ಮೂಲದ ಅಮೂಲ್ ಸಂಸ್ಥೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ 2 ರೂಪಾಯಿಯಷ್ಟು ಬೆಲೆ ಹೆಚ್ಚಳ ಮಾಡಿತ್ತು. ಕಳೆದ ಒಂದೆರಡು ತಿಂಗಳಿಂದಲೂ ಅಮೂಲ್ ಹಾಲಿನ ಬೆಲೆ ಹೆಚ್ಚಳದ ನಿರೀಕ್ಷೆ ಇತ್ತು. ಇದೀಗ ಗುಜರಾತ್ ಹೊರತುಪಡಿಸಿ ಉಳಿದೆಡೆ ಬೆಲೆ ಏರಿಕೆ ಮಾಡಿದೆ. ಗುಜರಾತ್ನಲ್ಲಿ ಬೆಲೆ ಯಥಾಸ್ಥಿತಿಯಲ್ಲಿ ಇರಲಿದೆ.
ಅಮೂಲ್ ತಾಜಾ ಹಾಲು ಬೆಲೆ ಒಂದು ಲೀಟರ್ಗೆ 54 ರೂ ಗೆ ಹೆಚ್ಚಾಗಿದೆ. ಹಸು ಹಾಲಿನ ಬೆಲೆ 56 ರೂ, ಎಮ್ಮೆ ಹಾಲಿನ ಬೆಲೆ 70 ರೂಪಾಯಿಗೆ ಹೆಚ್ಚಾಗಿದೆ. ಇನ್ನು ಅಮೂಲ್ ಗೋಲ್ಡ್ ಹಾಲು ಒಂದು ಲೀಟರ್ಗೆ 66 ರೂ ಇದೆ.
ಹಾಲಿನ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ವೆಚ್ಚ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದನಗಳ ಮೇವಿನ ದರ ಶೇ. 20ರಷ್ಟು ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಅಮೂಲ್ ತನ್ನ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದೆ.
ಅಮೂಲ್ ಹಾಲು ಮತ್ತಿತರ ಉತ್ಪನ್ನಗಳ ನೂತನ ಬೆಲೆ
ಅಮೂಲ್ ತಾಜಾ ಒಂದು ಲೀಟರ್: 54 ರೂ
ಅಮೂಲ್ ಗೋಲ್ಡ್ ಒಂದು ಲೀಟರ್: 66 ರೂ
ಅಮೂಲ್ ಹಸು ಹಾಲು ಒಂದು ಲೀಟರ್: 56 ರೂ
ಅಮೂಲ್ ಎ2 ಎಮ್ಮೆ ಹಾಲು: 70 ರೂ
ಇದನ್ನೂ ಓದಿ: India Rain Updates: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆ
ಕೆಎಂಎಫ್ ರೀತಿ ಗುಜರಾತ್ ರೈತರ ಸಹಕಾರ ಸಂಘದಿಂದ ಸ್ಥಾಪನೆಯಾದ ಅಮೂಲ್ ಸಂಸ್ಥೆ ದೊಡ್ಡ ಮಾರುಕಟ್ಟೆ ಹೊಂದಿದೆ. ಗುಜರಾತ್, ದೆಹಲಿ ಸುತ್ತಮುತ್ತ ಅದರ ಹಾಲುಗಳು ಮಾರಾಟವಾಗುತ್ತವೆ. ಐಸ್ ಕ್ರೀಮ್ ಇತ್ಯಾದಿ ಅದರ ಇತರ ಉಪ ಉತ್ಪನ್ನಗಳು ದೇಶಾದ್ಯಂತ ಮಾರುಕಟ್ಟೆ ಹೊಂದಿವೆ.
ಇನ್ನು, ಕಳೆದ ಅಕ್ಟೋಬರ್ನಲ್ಲಿ ಅಮೂಲ್ ಹಾಲಿನ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಮದರ್ ಡೈರಿ ಸಂಸ್ಥೆ ಕೂಡ ದರ ಹೆಚ್ಚಳ ಮಾಡಿತ್ತು. ಅದಾದ ಬಳಿಕ ಕರ್ನಾಟಕ ಹಾಲಿನ ಒಕ್ಕೂಟ ಕೆಎಂಎಫ್ ಕೂಡ ನವೆಂಬರ್ನಲ್ಲಿ ಹಾಲಿನ ದರಗಳನ್ನು ಹೆಚ್ಚಿಸಿತು.
Published On - 9:41 am, Fri, 3 February 23