ಕ್ಯಾಲಿಫೋರ್ನಿಯಾ, ಆಗಸ್ಟ್ 27: ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್ಫೋನ್ ಕಂಪನಿಯಾದ ಆ್ಯಪಲ್ಗೆ ಚೀಫ್ ಫೈನಾನ್ಷಿಯಲ್ ಆಫೀಸರ್ ಆಗಿ ಭಾರತ ಮೂಲದ ಕೇವನ್ ಪರೇಖ್ ನೇಮಕವಾಗಿದ್ದಾರೆ. ಲ್ಯೂಕಾ ಮೇಸ್ಟ್ರಿ ಅವರ ಸ್ಥಾನವನ್ನು ಪರೇಖ್ ತುಂಬಲಿದ್ದಾರೆ. ಲೂಕಾ ಅವರು ಸಿಎಫ್ಒ ಸ್ಥಾನದಿಂದ ಹೊರಹೋಗುತ್ತಾರಾದರೂ ಆ್ಯಪಲ್ ಕಂಪನಿಯಲ್ಲಿ ಅವರು ಬೇರೆ ಜವಾಬ್ದಾರಿಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಾಗತಿಕವಾಗಿ ಆ್ಯಪಲ್ನ ಐಫೋನ್ ಮತ್ತಿತರ ಉತ್ಪನ್ನಗಳ ಮಾರಾಟ ಕಡಿಮೆಗೊಂಡಿರುವ ಈ ಸಂದರ್ಭದಲ್ಲಿ ಸಂಸ್ಥೆಯ ಉನ್ನತ ಸ್ತರದಲ್ಲಿ ನಾಯಕತ್ವ ಬದಲಾವಣೆ ಆಗಿರುವುದು ಗಮನಾರ್ಹ.
ಕೇವನ್ ಪರೇಖ್ 10ಕ್ಕೂ ಹೆಚ್ಚು ವರ್ಷಗಳಿಂದ ಆ್ಯಪಲ್ ಕಂಪನಿಯಲ್ಲೇ ಕೆಲಸ ಮಾಡಿದ್ದಾರೆ. ಆ್ಯಪಲ್ ಸೇರುವ ಮುನ್ನ ಅವರು ಥಾಮ್ಸನ್ ರಾಯ್ಟರ್ಸ್ ಮತ್ತು ಜನರಲ್ ಮೋಟಾರ್ಸ್ ಸಂಸ್ಥೆಗಳಲ್ಲಿ ಹಿರಿಯ ಹುದ್ದೆ ನಿಭಾಯಿಸಿದ್ದರು. ಸದ್ಯ ಅವರು ಆ್ಯಪಲ್ ಕಂಪನಿ ಫೈನಾನ್ಷಿಯಲ್ ಪ್ಲಾನಿಂಗ್ ಅಂಡ್ ಅನಾಲಿಸಿಸ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಅವರನ್ನು ಸಿಎಫ್ಒ ಆಗಿ ನೇಮಕ ಮಾಡುವುದು ಕೆಲ ಕಾಲದ ಹಿಂದೆಯೇ ನಿಶ್ಚಿತವಾಗಿತ್ತು ಎಂದೂ ಹೇಳಲಾಗುತ್ತಿದೆ.
ಪ್ರಸಕ್ತ ಸಿಎಫ್ಒ ಆಗಿರುವ ಲೂಕಾ ಮೇಸ್ಟ್ರಿ ಅವರು 2024ರ ಡಿಸೆಂಬರ್ 31ರವರೆಗೂ ಅದೇ ಸ್ಥಾನದಲ್ಲಿ ಮುಂದುವರಿದು ಆ ಬಳಿಕ ಹುದ್ದೆಯನ್ನು ಕೇವನ್ ಪರೇಖ್ ಅವರಿಗೆ ಬಿಟ್ಟು ಕೊಡಲಿದ್ದಾರೆ. ಆ ಬಳಿಕ ಇನ್ಫಾರ್ಮೇಶನ್ ಸಿಸ್ಟಮ್ಸ್ ಮತ್ತ ಟೆಕ್ನಾಲಜಿ, ಇನ್ಫಾರ್ಮೇಶನ್ ಸೆಕ್ಯೂರಿಟಿ, ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಸೇರಿದಂತೆ ವಿವಿಧ ಕಾರ್ಪೊರೇಟ್ ಸರ್ವಿಸ್ ಟೀಮ್ಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಲೂಕಾ ಅವರು ಸಿಎಫ್ಒ ಆಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಆ್ಯಪಲ್ನ ಆದಾಯ ಎರಡು ಪಟ್ಟು ಹೆಚ್ಚಾಗಿತ್ತು. ಸರ್ವಿಸ್ಗಳಿಂದ ಬರುತ್ತಿದ್ದ ಆದಾಯ ಐದು ಪಟ್ಟು ಹೆಚ್ಚಾಗಿತ್ತು.
ಇದನ್ನೂ ಓದಿ: ಷೇರು ಗೋಲ್ಮಾಲ್ ಮಾಡಿದರಾ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ? ಸೆಬಿಯಿಂದ ಶೋಕಾಸ್ ನೋಟೀಸ್
ಕೇವನ್ ಪರೇಖ್ ಅವರಿಗೆ ಲೂಕಾ ಮೇಸ್ಟ್ರಿ ಅವರ ಕೆಲಸದ ಮೇಲ್ಪಂಕ್ತಿ ಇದೆ. ಆ್ಯಪಲ್ನಲ್ಲಿರುವ ಬಂಡವಾಳವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದು ದೊಡ್ಡ ಸವಾಲು. ಬೇರೆ ಸಣ್ಣ ಪುಟ್ಟ ಸಂಸ್ಥೆಗಳನ್ನು ಖರೀದಿಸುವ ಅವಕಾಶಗಳನ್ನು ಅವರು ಹುಡುಕಬೇಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ