ಷೇರು ಗೋಲ್ಮಾಲ್ ಮಾಡಿದರಾ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ? ಸೆಬಿಯಿಂದ ಶೋಕಾಸ್ ನೋಟೀಸ್

SEBI show-cause notice to Paytm CEO Vijay Shekhar Sharma: ನಿಯಮ ಪ್ರಕಾರ ಷೇರುದಾರಿಕೆ ವಿವರ ಬಹಿರಂಗಪಡಿಸದೇ ಸತ್ಯಾಂಶ ಮುಚ್ಚಿಟ್ಟ ಆರೋಪದ ಮೇಲೆ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹಾಗೂ ಇತರ ಕೆಲವರಿಗೆ ಸೆಬಿ ಶೋಕಾಸ್ ನೋಟೀಸ್ ಕೊಟ್ಟಿದೆ. 2021ರಲ್ಲಿ ಪೇಟಿಎಂ ಐಪಿಒ ಸಂದರ್ಭದಲ್ಲಿ ವಿಜಯ್ ಶೇಖರ್ ಶರ್ಮಾ ತಮ್ಮನ್ನು ಪ್ರೊಮೋಟರ್ ಎಂದು ಹೇಳದೇ ಉದ್ಯೋಗಿ ಎಂದಿದ್ದರು. ಕಂಪನಿಯಿಂದ ಎಂಪ್ಲಾಯೀ ಸ್ಟಾಕ್ಸ್ ಪಡೆಯುವ ಸಲುವಾಗಿ ಶೇ. 14ಕ್ಕಿಂತ ಹೆಚ್ಚಿದ್ದ ತಮ್ಮ ಪಾಲಿನ ಷೇರುಗಳಲ್ಲಿ ಶೇ. 5ರಷ್ಟನ್ನು ಟ್ರಸ್ಟ್​ಗೆ ವರ್ಗಾವಣೆ ಮಾಡಿದ್ದರು.

ಷೇರು ಗೋಲ್ಮಾಲ್ ಮಾಡಿದರಾ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ? ಸೆಬಿಯಿಂದ ಶೋಕಾಸ್ ನೋಟೀಸ್
ವಿಜಯ್ ಶೇಖರ್ ಶರ್ಮಾ
Follow us
|

Updated on: Aug 26, 2024 | 5:18 PM

ನವದೆಹಲಿ, ಆಗಸ್ಟ್ 26: ಪೇಟಿಎಂ ಸುತ್ತ ವಿವಾದಗಳು ಮುತ್ತಿಕೊಳ್ಳುವುದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಒಂದಿಲ್ಲೊಂದು ಕಾಂಟ್ರೊವರ್ಸಿ ಏಳುತ್ತಲೇ ಇರುತ್ತದೆ. ಇದೀಗ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹಾಗೂ ಸಂಸ್ಥೆಯ ಕೆಲ ಮಂಡಳಿ ಸದಸ್ಯರಿಗೆ ಸೆಬಿ ಶೋಕಾಸ್ ನೋಟೀಸ್ ಕೊಟ್ಟಿದೆ. ಐಪಿಒ ಸಂದರ್ಭದಲ್ಲಿ ಸತ್ಯಾಂಶಗಳನ್ನು ಮುಚ್ಚಿಟ್ಟಿದ್ದ ಆರೋಪ ಇವರ ಮೇಲಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಡೆಸಿದ ತನಿಖೆ ವೇಳೆ ಈ ಸಂಗತಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೇಟಿಎಂ ಸಿಇಒ ಹಾಗು ಅಂದಿನ ಮಂಡಳಿ ಸದಸ್ಯರಿಗೆ ಸೆಬಿ ಶೋಕಾಸ್ ನೋಟೀಸ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಮೇಲಿನ ಆರೋಪ ಏನು?

ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂನ ಸಿಇಒ ಮಾತ್ರವಲ್ಲ, ಅದರ ಪ್ರಮೋಟರ್ ಕೂಡ ಹೌದು. ಅಂದರೆ ಮಾಲೀಕರು. ಸಿಇಒ ಇತ್ಯಾದಿ ಎಕ್ಸಿಕ್ಯೂಟಿವ್​ಗಳಿಗೆ ಇಸಾಪ್ ಅಥವಾ ಎಂಪ್ಲಾಯೀ ಸ್ಟಾಕ್ ಆಪ್ಷನ್ಸ್ ಕೊಡಲಾಗುತ್ತದೆ. ಅಂದರೆ ಅವರಿಗೆ ಕಂಪನಿಯ ನಿರ್ದಿಷ್ಟ ಪ್ರಮಾಣದ ಷೇರುಗಳನ್ನು ಕಾಂಪೆನ್ಸೇಶನ್ ಆಗಿ ಕೊಡಲಾಗುತ್ತದೆ. ಇದನ್ನು ಪಡೆಯುವವರು ಕಂಪನಿಯ ಪ್ರೊಮೋಟರ್ ಆಗಿರಕೂಡದು. ಇದು ಸದ್ಯ ಇರುವ ನಿಯಮ.

ಇದನ್ನೂ ಓದಿ: 10 ವರ್ಷದಲ್ಲಿ 30 ಪಟ್ಟು ಹೆಚ್ಚಾದ ಭಾರತದ ಡಿಫೆನ್ಸ್ ಎಕ್ಸ್​ಪೋರ್ಟ್; 90 ದೇಶಗಳ ಪೈಕಿ ಇದಕ್ಕೆ ಅತಿಹೆಚ್ಚು ರಫ್ತು; ಬೆಂಗಳೂರಿನ ಕಂಪನಿಯಿಂದಲೂ ದಾಖಲೆ

ಪೇಟಿಎಂ 2021ರಲ್ಲಿ ಐಪಿಒಗೆ ಹೋದಾಗ ವಿಜಯ್ ಶೇಖರ್ ಶರ್ಮಾ ತಾನು ಪ್ರೊಮೋಟರ್ ಎಂಬ ವಿಷಯ ಬಹಿರಂಗಪಡಿಸದೇ, ತಾನು ಉದ್ಯೋಗಿ ಎಂದು ಮಾತ್ರವೇ ನಮೂದಿಸಿದ್ದರು. ಮಂಡಳಿ ಸದಸ್ಯರೂ ಇದನ್ನು ಅಲ್ಲಗಳೆದಿರಲಿಲ್ಲ.

ಐಪಿಒಗೆ ಮುನ್ನ ಪೇಟಿಎಂನಲ್ಲಿ ವಿಜಯ್ ಶೇಖರ್ ಶರ್ಮಾ ಶೇ. 14.6ರಷ್ಟು ಷೇರುಪಾಲು ಹೊಂದಿದ್ದರು. ಆಗ ಅವರು ಶೇ. 5ರಷ್ಟು ಷೇರುಪಾಲನ್ನು ಫ್ಯಾಮಿಲಿ ಟ್ರಸ್ಟ್ ಆದ ವಿಎಸ್​ಎಸ್ ಹೋಲ್ಡಿಂಗ್ಸ್ ಟ್ರಸ್ಟ್​ಗೆ ವರ್ಗಾವಣೆ ಮಾಡಿದರು. ಇದರೊಂದಿಗೆ ಅವರ ಷೇರುಪಾಲು ಶೇ. 9.6ಕ್ಕೆ ಇಳಿದಿತ್ತು. ಇದರಿಂದ ಎಂಪ್ಲಾಯಿ ಸ್ಟಾಕ್ ಆಪ್ಷನ್ಸ್ ಸ್ವೀಕರಿಸಲು ಶರ್ಮಾಗೆ ಸಾಧ್ಯವಾಯಿತು.

ಇದನ್ನೂ ಓದಿ: ಜೊಮಾಟೊದಲ್ಲಿ ಹೊಸ ಫೀಚರ್; ಆರ್ಡರ್ ಶೆಡ್ಯೂಲ್ ಮಾಡಿ; ಎರಡು ದಿನದವರೆಗೆ ಅವಕಾಶ

ಈ ಸುದ್ದಿ ಬರುತ್ತಲೇ ಪೇಟಿಎಂನ ಷೇರುಬೆಲೆ ಶೇ. 8.9ರಷ್ಟು ಕುಸಿದುಹೋಯಿತು. ಮಧ್ಯಾಹ್ನ 2 ಗಂಟೆಗೆಲ್ಲಾ ಷೇರುಬೆಲೆ 505 ರೂಗೆ ಇಳಿದಿತ್ತು. ನಂತರ ಚೇತರಿಸಿಕೊಂಡು ದಿನಾಂತ್ಯದಲ್ಲಿ 530 ರೂ ಬೆಲೆ ತಲುಪಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ