- Kannada News Photo gallery Zomato Order Scheduling, new feature to plan meals upto 2 days advance, details in Kannada
ಜೊಮಾಟೊದಲ್ಲಿ ಹೊಸ ಫೀಚರ್; ಆರ್ಡರ್ ಶೆಡ್ಯೂಲ್ ಮಾಡಿ; ಎರಡು ದಿನದವರೆಗೆ ಅವಕಾಶ
ನವದೆಹಲಿ, ಆಗಸ್ಟ್ 26: ಹೊಸ ಹೊಸ ಪ್ರಯೋಗಗಳಿಗೆ ಸದಾ ಕೈಹಾಕುವ ಜೊಮಾಟೊ ಈಗ ಹೊಸ ಫೀಚರ್ ತಂದಿದೆ. ಅದು ಆರ್ಡರ್ ಶೆಡ್ಯೂಲಿಂಗ್. ಎರಡು ದಿನ ಮುಂಚಿತವಾಗಿ ನೀವು ಫೂಡ್ ಆರ್ಡರ್ ಮಾಡಬಹುದು. ಬೆಂಗಳೂರು ಸೇರಿದಂತೆ ಕೆಲ ಆಯ್ದ ನಗರಗಳಲ್ಲಿ ಈ ಸರ್ವಿಸ್ ಅನ್ನು ಪ್ರಯೋಗಾರ್ಥ ಆರಂಭಿಸಲಾಗಿದೆ. ಸಿಇಒ ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ.
Updated on: Aug 26, 2024 | 12:42 PM

ಭಾರತದ ಪ್ರಮುಖ ಆನ್ಲೈನ್ ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ ಆಗಿರುವ ಜೊಮಾಟೊ ಹೊಸ ಪ್ರಯೋಗಗಳಿಗೆ ಹೆಸರುವಾಸಿ. ಇಂಟರ್ಸಿಟಿ ಸರ್ವಿಸ್, ಸೀಟ್ ಬುಕಿಂಗ್, ಪಾರ್ಸಲ್ ಸೆಲ್ಫ್ ಪಿಕಪ್, ಫುಲ್ ವೆಜಿಟೇರಿಯನ್ ಇತ್ಯಾದಿ ರೀತಿಯ ಸ್ಪೆಷಲ್ ಸರ್ವಿಸ್ ಕೊಟ್ಟಿದೆ. ಸ್ಪಂದನೆ ಸಿಕ್ಕದೇ ಇರುವ ಸರ್ವಿಸ್ ಅನ್ನು ನಿಲ್ಲಿಸಿದ್ದಿದೆ. ಅದರೆ ಹೊಸ ಪ್ರಯೋಗಗಳು ಮುಂದುವರಿದಿವೆ. ಇದೀಗ ಆರ್ಡರ್ ಶೆಡ್ಯೂಲಿಂಗ್ ಎಂಬ ಹೊಸ ಫೀಚರ್ ಅನ್ನು ಆರಂಭಿಸಿದೆ.

ಆರ್ಡರ್ ಶೆಡ್ಯೂಲಿಂಗ್ ಸರ್ವಿಸ್ನಲ್ಲಿ ಎರಡು ದಿನ ಮುಂಗಡವಾಗಿ ಆಹಾರವನ್ನು ಕಾಯ್ದಿರಿಸಬಹುದು. ಆಫೀಸ್ನಲ್ಲಿ ಸಹೋದ್ಯೋಗಿಗಳು ಒಟ್ಟಿಗೆ ಊಟ ಮಾಡುವ ಪ್ರೋಗ್ರಾಮ್ ಇದ್ದರೆ ಮೊದಲೇ ಬುಕ್ ಮಾಡಬಹುದು. ಮನೆಯಲ್ಲಿ ಫಂಕ್ಷನ್ ಇದ್ದರೆ ಶೆಡ್ಯೂಲ್ ಮಾಡಬಹುದು.

ಆರ್ಡರ್ ಶೆಡ್ಯೂಲಿಂಗ್ ಫೀಚರ್ ಅನ್ನು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ತಿಳಿಸಿದ್ದಾರೆ. ‘ಎರಡು ದಿನದವರೆಗೆ ಮುಂಗಡವಾಗಿ ನೀವು ಆರ್ಡರ್ ನೀಡಬಹುದು. ದೆಹಲಿ ಎನ್ಸಿಆರ್, ಬೆಂಗಳೂರು, ಮುಂಬೈ, ಅಹ್ಮದಾಬಾದ್, ಚಂಡೀಗಡ್, ಲಕ್ನೋ ಮತ್ತು ಜೈಪುರ್ನ 13,000ದಷ್ಟು ರೆಸ್ಟೋರೆಂಟ್ಗಳಿಂದ ನೀವು 1,000 ರೂಗಿಂತ ಹೆಚ್ಚಿನ ಮೌಲ್ಯದ ಆರ್ಡರ್ಗಳನ್ನು ಕಾಯ್ದಿರಿಸಬಹುದು ಎಂದು ದೀಪಿಂದರ್ ಗೋಯಲ್ ತಿಳಿಸಿದ್ದಾರೆ.

ಸದ್ಯ ಶೆಡ್ಯೂಲಿಂಗ್ ಅವಕಾಶ ಇರುವ ರೆಸ್ಟೋರೆಂಟ್ಗಳಲ್ಲಿ ಹೆಚ್ಚಿನ ಆಹಾರ ಉತ್ಪನ್ನಗಳ ಆಯ್ಕೆ ಇದೆ. ಬೇಗನೇ ಆಹಾರ ತಯಾರಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಗರ ಮತ್ತು ರೆಸ್ಟೋರೆಂಟ್ಗಳನ್ನು ಸೇರಿಸಲಾಗುವುದು. ಎಲ್ಲಾ ಆರ್ಡರ್ಗಳಿಗೂ ಈ ಶೆಡ್ಯೂಲ್ ಫೀಚರ್ ತರಲಾಗುವುದು ಎಂದೂ ಜೊಮಾಟೊ ಸಿಇಒ ಮಾಹಿತಿ ನೀಡಿದ್ದಾರೆ.

ಕೆಲ ವಾರಗಳ ಹಿಂದೆ ಜೊಮಾಟೊದಲ್ಲಿ ಗ್ರೂಪ್ ಆರ್ಡರಿಂಗ್ ಫೀಚರ್ ಆರಂಭವಾಯಿತು. ಇದರಲ್ಲಿ ಶೇರ್ಡ್ ಕಾರ್ಟ್ ಅನ್ನು ರಚಿಸಿ ಫೂಡ್ ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿನ ವೈಶಿಷ್ಟ್ಯ ಆಹಾರವನ್ನು ನಾವಿರುವ ಜಾಗಕ್ಕೆ ತರಿಸಿಕೊಳ್ಳಬಹುದಾದಂತಹ ಜೊಮಾಟೊ ಲೆಜೆಂಡ್ಸ್ ಇಂಟರ್ಸಿಟಿ ಫೀಚರ್ ಕೆಲ ದಿನಗಳ ಹಿಂದಿನವರೆಗೂ ಇತ್ತು. ಸರಿಯಾಗಿ ಸ್ಪಂದನೆ ಸಿಗಲಿಲ್ಲವೆಂಬ ಕಾರಣಕ್ಕೆ ಅದನ್ನು ನಿಲ್ಲಿಸಲಾಗಿದೆ.




