ಐಫೋನ್-16 ಮೊಬೈಲ್​​ಗಳಿಗೆ ಬ್ಯಾಟರಿ ಭಾರತದಿಂದಲೇ ಆಗಬೇಕು: ಬಿಡಿಭಾಗ ಪೂರೈಕೆದಾರರಿಗೆ ಆ್ಯಪಲ್ ತಾಕೀತು?

|

Updated on: Dec 06, 2023 | 5:25 PM

iPhone battery manufacturing in India: ಐಫೋನ್16ಗೆ ಬಳಸುವ ಬ್ಯಾಟರಿಗಳು ಭಾರತದಲ್ಲೇ ತಯಾರಾಗಿರಬೇಕು ಎಂದು ಆ್ಯಪಲ್ ಸಂಸ್ಥೆ ನಿರ್ಧರಿಸಿದೆ. ಐಫೋನ್​ಗೆ ಬ್ಯಾಟರಿ ಪೂರೈಸುವ ಚೀನಾ ಮತ್ತು ತೈವಾನೀ ಕಂಪನಿಗಳಿಗೆ ಭಾರತದಲ್ಲಿ ಫ್ಯಾಕ್ಟರಿ ಸ್ಥಾಪಿಸುವಂತೆ ಆ್ಯಪಲ್ ಹೇಳಿದೆ. ಜಪಾನ್​ನ ಟಿಡಿಕೆ ಕಾರ್ಪ್ ಸಂಸ್ಥೆ ಹರ್ಯಾಣದ ಮಾನೇಸರ್​ನಲ್ಲಿ ಬ್ಯಾಟಿರಿ ಫ್ಯಾಕ್ಟರಿ ಸ್ಥಾಪಿಸಲಿದೆ ಎಂದು ಮೊನ್ನೆ ಕೇಂದ್ರ ಸಚಿವರು ಹೇಳಿದ್ದರು.

ಐಫೋನ್-16 ಮೊಬೈಲ್​​ಗಳಿಗೆ ಬ್ಯಾಟರಿ ಭಾರತದಿಂದಲೇ ಆಗಬೇಕು: ಬಿಡಿಭಾಗ ಪೂರೈಕೆದಾರರಿಗೆ ಆ್ಯಪಲ್ ತಾಕೀತು?
ಐಫೋನ್
Follow us on

ಭಾರತದಲ್ಲಿ ಐಫೋನ್ ಮೊಬೈಲ್​ಗಳನ್ನು ಅಸೆಂಬ್ಲಿಂಗ್ ಮಾಡಿಸುತ್ತಿರುವ ಆ್ಯಪಲ್ ಸಂಸ್ಥೆ ಇದೀಗ ಬಿಡಿಭಾಗಗಳ ತಯಾರಿಕೆಯಲ್ಲೂ (iPhone component manufacturing) ಭಾರತಕ್ಕೆ ಆದ್ಯತೆ ಕೊಡುತ್ತಿರುವಂತೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ, ತನ್ನ ಹೊಸ ಐಫೋನ್ 16 ಮೊಬೈಲ್​ಗೆ ಬಳಸುವ ಬ್ಯಾಟರಿಯನ್ನು ಭಾರತದಿಂದಲೇ ಪಡೆಯಲು ಆ್ಯಪಲ್ ಯೋಜಿಸಿದೆ. ತನಗೆ ಬ್ಯಾಟರಿ ಪೂರೈಸುವ ಸಂಸ್ಥೆಗಳು ಭಾರತದಲ್ಲಿ ಫ್ಯಾಕ್ಟರಿ ತೆರೆದು ಅಲ್ಲಿಯೇ ತಯಾರಿಸಬೇಕೆಂದು ತಿಳಿಸಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಬಂದಿದೆ. ತನ್ನ ಐಫೋನ್ ಉತ್ಪಾದನೆ ಯಾವುದೇ ಒಂದು ಪ್ರದೇಶದ ಮೇಲೆ ಅವಲಂಬಿತವಾಗಬಾರದು. ಭಾರತದಲ್ಲೂ ಐಫೋನ್​ನ ಎಲ್ಲಾ ಬಿಡಿಭಾಗಗಳು ತಯಾರಾಗಬೇಕು ಎಂಬುದು ಆ್ಯಪಲ್​ನ ಉದ್ದೇಶ. ಇದು ಚೀನಾ ಅವಲಂಬನೆ ಕಡಿಮೆ ಮಾಡುವ ಯೋಜನೆ.

ಚೀನಾದ ಡೇಸೇ (Desay), ಜಪಾನ್​ನ ಟಿಡಿಕೆ ಕಾರ್ಪ್, ತೈವಾನ್​ನ ಸಿಂಪ್ಲೋ ಟೆಕ್ನಾಲಜಿ ಮೊದಲಾದ ಸಂಸ್ಥೆಗಳು ಆ್ಯಪಲ್​ನ ಐಫೋನ್​ಗಳಿಗೆ ಬ್ಯಾಟರಿಗಳನ್ನು ಪೂರೈಸುತ್ತವೆ. ಭಾರತದಲ್ಲಿ ಬ್ಯಾಟರಿ ಉತ್ಪಾದನೆ ಮಾಡಿ ಅದನ್ನು ತನಗೆ ಪೂರೈಸುವಂತೆ ಈ ಎರಡು ಸಂಸ್ಥೆಗಳಿಗೆ ಆ್ಯಪಲ್ ಹೇಳಿದೆಯಂತೆ. ಸಿಂಪ್ಲೋ ಟೆಕ್ನಾಲಜಿ ಸಂಸ್ಥೆ ಭಾರತದಲ್ಲಿ ಫ್ಯಾಕ್ಟರಿ ಹೊಂದಿದ್ದು ಅಲ್ಲಿ ಸೀಮಿತ ಪ್ರಮಾಣದಲ್ಲಿ ತಯಾರಿಕೆ ನಡೆಯುತ್ತದೆ. ಚೀನಾದ ಡೇಸೇ ಸಂಸ್ಥೆ ಇನ್ನಷ್ಟೇ ಫ್ಯಾಕ್ಟರಿ ಶುರು ಮಾಡಬೇಕು.

ಜಪಾನ್​ನ ಟಿಡಿಕೆ ಕಾರ್ಪ್ ಸಂಸ್ಥೆ ಭಾರತದಲ್ಲಿ ಲಿಥಿಯಮ್ ಅಯಾನ್ ಬ್ಯಾಟರಿ ಸೆಲ್​ಗಳನ್ನು ತಯಾರಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೊನ್ನೆ (ಡಿ. 4) ಹೇಳಿದ್ದರು.

ಇದನ್ನೂ ಓದಿ: ನಮ್ಮ ಮಾರುಕಟ್ಟೆ ರಕ್ಷಿಸುವುದು ಹೇಗಂತ ಗೊತ್ತು; ವಿಶ್ವದ ಅತ್ಯಂತ ಪ್ರಬಲ ಮಹಿಳೆಯಿಂದ ಚೀನಾಗೆ ಎಚ್ಚರಿಕೆ

ಹರ್ಯಾಣದ ಮಾನೇಸರ್​ನಲ್ಲಿ ಜಪಾನೀ ಕಂಪನಿ 180 ಎಕರೆ ಜಾಗದಲ್ಲಿ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿದೆ ಎಂದು ಸಚಿವರು ಮಾಹಿತಿ ನೀಡಿದ್ದರು.

ಕೆಲ ವರ್ಷಗಳ ಹಿಂದಿನವರೆಗೂ ಆ್ಯಪಲ್ ಸಂಸ್ಥೆಯ ಐಫೋನ್ ಸೇರಿದಂತೆ ಎಲ್ಲಾ ಉತ್ಪನ್ನಗಳು ಚೀನಾದಲ್ಲೇ ಬಹುಭಾಗ ತಯಾರಾಗುತ್ತಿದ್ದವು. ಕೋವಿಡ್ ಬಂದ ಬಳಿಕ ಚೀನಾದಲ್ಲಿ ಲಾಕ್ ಡೌನ್ ಹೇರಿಕೆಯಾಗಿ, ವಿವಿಧ ಉದ್ಯಮಗಳು ದೀರ್ಘಾವಧಿ ಸ್ಥಗಿತಗೊಂಡಿದ್ದವು. ಇದರಿಂದ ಅಂತಾರಾಷ್ಟ್ರೀಯ ಸರಬರಾಜು ಸರಪಳಿಗೆ ಧಕ್ಕೆಯಾಗಿತ್ತು. ಆ್ಯಪಲ್​ನ ಐಫೋನ್ ತಯಾರಿಕೆಗೂ ಹೊಡೆತ ಬಿದ್ದಿತ್ತು. ಈ ಕಾರಣಕ್ಕೆ ಮತ್ತು ಅಮೆರಿಕ ಮತ್ತು ಚೀನಾ ನಡುವಿನ ಪರೋಕ್ಷ ಶೀತಲ ಸಮರ ಇರುವ ಕಾರಣಕ್ಕೆ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಆ್ಯಪಲ್ ಸಂಸ್ಥೆ ತನ್ನ ಉತ್ಪನ್ನಗಳ ತಯಾರಿಕೆಗೆ ಪರ್ಯಾಯ ಸ್ಥಳಗಳನ್ನು ಆಯ್ದುಕೊಂಡಿದೆ. ಅದರಲ್ಲಿ ಭಾರತವೂ ಒಂದು.

ಇದನ್ನೂ ಓದಿ: Forbes Most Powerful Women 2023: ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ; ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ವರು ಭಾರತೀಯ ನಾರಿಯರು

ಈಗಾಗಲೇ ಭಾರತದಲ್ಲಿ ಐಫೋನ್ ಅಸೆಂಬ್ಲಿಂಗ್ ಕಾರ್ಯ ತೀವ್ರ ಗತಿಯಲ್ಲಿ ನಡೆಯುತ್ತಿದೆ. ಇನ್ನು ನಾಲ್ಕೈದು ವರ್ಷದಲ್ಲಿ ಐಫೋನ್ ಉತ್ಪಾದನೆಯ ಒತ್ತವನ್ನು 3.30 ಲಕ್ಷ ಕೋಟಿ ರೂಪಾಯಿಗೆ ತಲುಪಿಸುವ ಗುರಿಯನ್ನು ಆ್ಯಪಲ್ ಹಾಕಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Wed, 6 December 23