ಆ್ಯಪಲ್ ಉತ್ಪನ್ನಗಳಿಗಾಗಿ, ಚೀನಾ, ವಿಯೆಟ್ನಾಂಗೆ ಭಾರತದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪೂರೈಕೆ

Apple ecosystem in India: ಆ್ಯಪಲ್​ನ ವಿವಿಧ ಉತ್ಪನ್ನಗಳ ಅಸೆಂಬ್ಲಿಂಗ್​ಗಾಗಿ ಚೀನಾ ಮತ್ತು ವಿಯೆಟ್ನಾಂ ದೇಶಗಳಿಗೆ ಭಾರತದಿಂದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಈ ಎರಡು ದೇಶಗಳಿಂದ ಭಾರತಕ್ಕೆ ಇವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಆ್ಯಪಲ್ ಕಂಪನಿ ತನ್ನ ಉತ್ಪನ್ನಗಳ ಬಿಡಿಭಾಗಗಳ ಸಪ್ಲೈ ಚೈನ್ ಅನ್ನು ವಿಸ್ತರಿಸಲು ಭಾರತದತ್ತ ಗಮನ ಹರಿಸುತ್ತಿರುವುದರ ಫಲ ಇದು.

ಆ್ಯಪಲ್ ಉತ್ಪನ್ನಗಳಿಗಾಗಿ, ಚೀನಾ, ವಿಯೆಟ್ನಾಂಗೆ ಭಾರತದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪೂರೈಕೆ
ಐಫೋನ್ ತಯಾರಿಕೆ

Updated on: Feb 28, 2025 | 5:58 PM

ನವದೆಹಲಿ, ಫೆಬ್ರುವರಿ 28: ಮ್ಯಾಕ್​ಬುಕ್, ಏರ್​ಪೋಡ್, ವಾಚ್, ಪೆನ್ಸಿಲ್, ಐಫೋನ್ ಇತ್ಯಾದಿ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆಗೆ ಬೇಕಾದ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು (electronic components) ಭಾರತದಿಂದ ಹೊರದೇಶಕ್ಕೆ ಸರಬರಾಜು ಮಾಡಲಾಗುತ್ತಿದೆ. ಆ್ಯಪಲ್​ನ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಚೀನಾ ಮತ್ತು ವಿಯೆಟ್ನಾಂ ದೇಶಗಳಿಗೆ ಭಾರತದಿಂದ ಸಾಗಿಸಲಾಗುತ್ತಿದೆ. ಇಂಥದ್ದು ಇದೇ ಮೊದಲು ಬಾರಿಗೆ ಆಗಿರುವುದು. ಈ ಹಿಂದೆ, ಭಾರತದಲ್ಲಿ ಅ್ಯಪಲ್ ಉತ್ಪನ್ನಗಳನ್ನು ಅಸೆಂಬಲ್ ಮಾಡಲು ಇತರ ದೇಶಗಳಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅದರಲ್ಲೂ ಚೀನಾದಿಂದ ಆಮದು ಮಾಡಲಾಗುತ್ತಿತ್ತು. ಈಗ ಭಾರತದಿಂದಲೇ ಚೀನಾ ಮತ್ತು ವಿಯೆಟ್ನಾಂಗೆ ಎಲೆಕ್ಟ್ರಾನಿಕ್ ಕಾಂಪೊನೆಂಟ್​ಗಳನ್ನು ಕಳುಹಿಸುತ್ತಿರುವುದು ಗಮನಾರ್ಹ ಸಂಗತಿ.

ಐಪ್ಯಾಡ್ ಹೊರತುಪಡಿಸಿ ಉಳಿದ ಎಲ್ಲಾ ಆ್ಯಪಲ್ ಉತ್ಪನ್ನಗಳಿಗೆ ಎನ್​ಕ್ಲೋಷರ್ ಸೇರಿದಂತೆ ಮೆಕ್ಯಾನಿಕ್ಸ್ ಅನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ರೆಸಿಸ್ಟರ್, ಕೆಪಾಸಿಟರ್, ಟ್ರಾನ್ಸ್​ಫಾರ್ಮರ್, ಐಸಿ, ಸ್ವಿಚ್, ಡಯೋಡ್, ಇಂಡಕ್ಟರ್ ಇತ್ಯಾದಿ ಎಲೆಕ್ಟ್ರಾನಿಕ್ ಕಾಂಪೊನೆಂಟ್​​ಗಳನ್ನು ಆ್ಯಪಲ್​ನ ಪೂರೈಕೆದಾರರಾದ ಟಾಟಾ ಎಲೆಕ್ಟ್ರಾನಿಕ್ಸ್, ಜಾಬಿಲ್, ಏಕಸ್, ಮದರ್​ಸನ್ ಗ್ರೂಪ್ ಸಂಸ್ಥೆಗಳು ಭಾರತದಲ್ಲಿ ತಯಾರಿಸುತ್ತಿವೆ. ಈ ವಸ್ತುಗಳನ್ನು ಬಳಸಿ ಆ್ಯಪಲ್ ಉತ್ಪನ್ನಗಳ ಅಂತಿಮ ಅಸೆಂಬ್ಲಿಂಗ್ ಮಾಡಲಾಗುತ್ತದೆ.

ಇದನ್ನೂ ಓದಿ: ಷೇರುಪೇಟೆ ಗಡಗಡ; ಹಿಂದಿನ ದೊಡ್ಡ ಕುಸಿತಗಳಿಗೆ ಹೋಲಿಸಿದರೆ ಈ ಬಾರಿ ನಿಫ್ಟಿಯ ನಷ್ಟ ಸಾಧಾರಣ

ಈ ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್​ಗಳನ್ನು ಆ್ಯಪಲ್​ಗಾಗಿ ತಯಾರಿಸಲಾಗುತ್ತಿದೆಯಾದರೂ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಶಕ್ತಿ ಸಿಕ್ಕಂತಾಗಿದೆ. ಭಾರತದಲ್ಲಿ ಸಮರ್ಥವಾದ ಕಾಂಪೊನೆಂಟ್ ಇಕೋಸಿಸ್ಟಂ ಅನ್ನು ನಿರ್ಮಿಸಲು ಆ್ಯಪಲ್ ಪರೋಕ್ಷವಾಗಿ ಸಹಾಯವಾಗುತ್ತಿದೆ. ಈ ಎಲೆಕ್ಟ್ರಾನಿಕ್ ವಸ್ತುಗಳ ಪೂರೈಕೆಗಾಗಿ ಚೀನಾ ಮತ್ತು ವಿಯೆಟ್ನಾಂ ದೇಶಗಳ ಮೇಲೆ ಭಾರತ ಅವಲಂಬಿತವಾಗಿತ್ತು. ಈಗ ಆ ಅವಲಂಬನೆ ಕಡಿಮೆ ಆಗುತ್ತಿದೆ.

ಸದ್ಯ ಈಗಲೂ ಕೂಡ ಚೀನಾ ದೇಶದಲ್ಲೇ ಆ್ಯಪಲ್​ನ ಹೆಚ್ಚಿನ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆ್ಯಪಲ್ ಮಾತ್ರವಲ್ಲ, ವಿಶ್ವದ ಬಹುತೇಕ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯು ಚೀನಾದಲ್ಲೇ ಆಗುತ್ತದೆ. ಚೀನಾ ಬಳಿಕ ವಿಯೆಟ್ನಾಂ ಕೂಡ ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾಗಿದೆ. ಇವುಗಳ ಪ್ರಾಬಲ್ಯದ ಅಡಿಯಲ್ಲೇ ಭಾರತ ಕ್ರಮೇಣವಾಗಿ ಬೆಳವಣಿಗೆ ಹೊಂದುತ್ತಿದೆ. ಇದರಲ್ಲಿ ಆ್ಯಪಲ್ ಕಂಪನಿ ಪಾತ್ರ ಬಹಳ ಮಹತ್ತರವಾದುದು.

ಇದನ್ನೂ ಓದಿ: ಶ್ರೀಮಂತರ ನಗರಿ ಬೆಂಗಳೂರು; ನಾರಾಯಣಮೂರ್ತಿ, ಅಜಿಮ್ ಪ್ರೇಮ್​ಜಿ, ಇರ್ಫಾನ್ ರಜಾಕ್… ಟಾಪ್ 8 ಬೆಂಗಳೂರಿಗರ ಪಟ್ಟಿ

ಒಂದು ಅಂದಾಜು ಪ್ರಕಾರ 2030ರೊಳಗೆ ಭಾರತ ಒಂದು ವರ್ಷದಲ್ಲಿ 35ರಿಂದ 40 ಬಿಲಿಯನ್ ಡಾಲರ್​ ಮೌಲ್ಯದಷ್ಟು ಎಲೆಕ್ಟ್ರಾನಿಕ್ ಕಾಂಪೊನೆಂಟ್​ಗಳ ರಫ್ತು ಮಾಡುವ ಗುರಿ ಸಾಧಿಸಬಹುದು ಎಂದು ಈ ಉದ್ಯಮ ತಜ್ಞರು ನಿರೀಕ್ಷಿಸಿದ್ದಾರೆ.

ಆ್ಯಪಲ್ ಕಂಪನಿ ಚೀನಾದಿಂದ ಆಚೆ ತನ್ನ ಸಪ್ಲೈ ಚೈನ್ ವಿಸ್ತರಿಸಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿರುವುದು ಫಲ ಕೊಡುತ್ತಿದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ತಯಾರಕರನ್ನು ಭಾರತದಲ್ಲಿ ಘಟಕ ಆರಂಭಿಸುವಂತೆ ಮಾಡಿದೆ. ಏಕಸ್ ಕಂಪನಿಯು ಮ್ಯಾಕ್​ಬುಕ್​ಗಳಿಗೆ ಮೆಕ್ಯಾನಿಕ್ಸ್ ಅನ್ನು ಹುಬ್ಬಳ್ಳಿಯಲ್ಲಿ ತಯಾರಿಸುತ್ತಿದೆ. ಪುಣೆಯಲ್ಲಿ ಜಾಬಿಲ್ ಘಟಕ ಇದೆ. ಮದರ್ಸನ್ ಗ್ರೂಪ್ ಕೂಡ ಭಾರತದಲ್ಲಿ ಕಾರ್ಯನಿರತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ