ಷೇರುಪೇಟೆ ಗಡಗಡ; ಹಿಂದಿನ ದೊಡ್ಡ ಕುಸಿತಗಳಿಗೆ ಹೋಲಿಸಿದರೆ ಈ ಬಾರಿ ನಿಫ್ಟಿಯ ನಷ್ಟ ಸಾಧಾರಣ
Indian stock market crash: ಭಾರತೀಯ ಷೇರು ಮಾರುಕಟ್ಟೆ ಫೆಬ್ರುವರಿಯಲ್ಲೂ ನಷ್ಟದಲ್ಲಿ ಅಂತ್ಯಗೊಳ್ಳುವುದು ನಿಶ್ಚಿತ. ಅಕ್ಟೋಬರ್ನಿಂದ ಸತತ ಐದನೇ ತಿಂಗಳೂ ನಿಫ್ಟಿ ಹಿನ್ನಡೆ ಕಂಡಿದೆ. ಈ ಐದು ತಿಂಗಳಲ್ಲಿ ಸುಮಾರು ಶೇ. 12ರಷ್ಟು ನಷ್ಟ ಕಂಡಿದೆ. ಈ ಹಿಂದೆ, 1990ರಿಂದ ಈಚೆ ಮೂರಕ್ಕೂ ಹೆಚ್ಚು ತಿಂಗಳು ಷೇರುಮಾರುಕಟ್ಟೆ ಕುಸಿತ ಕಂಡಿರುವುದು ಇದು 12ನೇ ಬಾರಿ. ಹಿಂದಿನ ಕುಸಿತಗಳಿಗೆ ಹೋಲಿಸಿದರೆ ಈ ಬಾರಿಯ ಕುಸಿತ ಸಾಧಾರಣ ಎನಿಸಿದೆ.

ನವದೆಹಲಿ, ಫೆಬ್ರುವರಿ 28: ಷೇರು ಮಾರುಕಟ್ಟೆ (Stock market) ಇವತ್ತೂ ಕೂಡ ಕುಸಿತ ಕಾಣುತ್ತಿದೆ. ಅಂದರೆ, ಷೇರುಪೇಟೆ ಸತತ ಐದನೇ ತಿಂಗಳೂ ಕೂಡ ಮೈನಸ್ನಲ್ಲಿ ಅಂತ್ಯಗೊಳ್ಳುವುದು ಖಾತ್ರಿ ಆದಂತಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ (Nifty index) ಸತತ ಐದು ತಿಂಗಳು ಕುಸಿತ ಕಂಡಿರುವುದು ಇದು ಮೊದಲ ಬಾರಿ ಏನಲ್ಲ. ಈ ಹಿಂದೆ ಎರಡು ಬಾರಿ ಈ ಕುಸಿತಗಳಾಗಿವೆ. ಆದರೆ, 1996ರ ಬಳಿಕ ಇಷ್ಟು ದೀರ್ಘಾವಧಿಯ ಕುಸಿತ (long losing streak) ಆಗಿರುವುದು ಇದೇ ಮೊದಲು.
2024ರ ಅಕ್ಟೋಬರ್ನಿಂದ 2025ರ ಫೆಬ್ರುವರಿವರೆಗೆ ಐದು ತಿಂಗಳು ಮಾರುಕಟ್ಟೆ ಕೆಂಪು ಬಣ್ಣದಲ್ಲಿ ಅಂತ್ಯಗೊಂಡಿದೆ. ಈ ಐದು ತಿಂಗಳ ಅವಧಿಯಲ್ಲಿ ಬೆರಳೆಣಿಕೆಯ ದಿನಗಳಷ್ಟು ಮಾತ್ರವೇ ಹಸಿರು ಬಣ್ಣ ಕಾಣಬಹುದಿತ್ತು. ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ಅಲ್ಲಿಂದ ಬಹುತೇಕ ಶೇ 12ರಷ್ಟು ಕುಸಿತವಾಗಿದೆ.
ಇದನ್ನೂ ಓದಿ: ಸೆಬಿಗೆ ನೂತನ ಛೇರ್ಮನ್ ಆಗಿ ತುಹಿನ್ ಕಾಂತ ಪಾಂಡೆ ನೇಮಕ; ಮಾಧಬಿ ಪುರಿ ಬುಚ್ ಅವಧಿ ವಿಸ್ತರಣೆ ಇಲ್ಲ
ಹಾಗೆ ನೋಡಿದರೆ, ಶೇ. 12ರಷ್ಟು ಕುಸಿತವಾಗಿರುವುದು ದೊಡ್ಡ ಸಂಗತಿಯಲ್ಲ. 1995 ಮತ್ತು 2008ರಲ್ಲಿ ಆದ ಕುಸಿತದಲ್ಲಿ ನಿಫ್ಟಿ ಶೇ. 30ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ನಷ್ಟ ಕಂಡಿತ್ತು.
ಮೂರು ಹಾಗು ಹೆಚ್ಚು ತಿಂಗಳ ಅವಧಿ ಸತತವಾಗಿ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು ಇದು 12ನೇ ಬಾರಿ. ಇಷ್ಟೂ ಸಂದರ್ಭಗಳಲ್ಲಿ ನಿಫ್ಟಿ ಕುಸಿತದ ತೀವ್ರತೆ ಅತ್ಯಂತ ಕಡಿಮೆ ಇರುವುದು ಈ ಬಾರಿಯೇ. ಹಿಂದಿನ 11 ಸಂದರ್ಭಗಳಲ್ಲಿ ನಿಫ್ಟಿ ಕುಸಿತ ಶೇ. 12ಕ್ಕಿಂತಲೂ ಹೆಚ್ಚೇ ಇತ್ತು.
1994-95ರಲ್ಲಿ ಸತತ ಎಂಟು ತಿಂಗಳು ನಿಫ್ಟಿ ಕುಸಿದಿತ್ತು. ಆಗ ನಷ್ಟವಾಗಿದ್ದು ಶೇ. 31.4ರಷ್ಟು. 2008ರಲ್ಲಿ ಸೆಪ್ಟೆಂಬರ್ನಿಂದ ನವೆಂಬರ್ವರೆಗೆ ಕೇವಲ ಮೂರು ತಿಂಗಳಲ್ಲಿ ಶೇ. 36.8ರಷ್ಟು ಕುಸಿತವಾಗಿತ್ತು. ಅದು ಭಾರತದ ಷೇರು ಮಾರುಕಟ್ಟೆಯ ಅತಿದೊಡ್ಡ ಕುಸಿತ ಎನಿಸಿದೆ. ಕೋವಿಡ್ ವರ್ಷದಲ್ಲಿ ಮೂರು ತಿಂಗಳಲ್ಲಿ ನಿಫ್ಟಿ ಶೇ. 29.3ರಷ್ಟು ನಷ್ಟ ಕಂಡಿತು.
ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆ ಮತ್ತು ಆರ್ಥಿಕತೆ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚಿನ ನಿರೀಕ್ಷೆ
ಭಾರತದ ಷೇರು ಮಾರುಕಟ್ಟೆ (ನಿಫ್ಟಿ) ಕುಸಿತದ ಇತಿಹಾಸ..
- 1990-91, 4 ತಿಂಗಳು, ಶೇ. 28.5 ಕುಸಿತ
- 1993, 3 ತಿಂಗಳು, ಶೇ. 20.7 ಕುಸಿತ
- 1994-95, 8 ತಿಂಗಳು, ಶೇ. 31.4 ಕುಸಿತ
- 1996, 5 ತಿಂಗಳು, ಶೇ. 26 ಕುಸಿತ
- 1998, 4 ತಿಂಗಳು, ಶೇ. 26.4 ಕುಸಿತ
- 2000, 3 ತಿಂಗಳು, ಶೇ. 16.6 ಕುಸಿತ
- 2001, 4 ತಿಂಗಳು, ಶೇ. 21.8 ಕುಸಿತ
- 2001, 3 ತಿಂಗಳು, ಶೇ. 18 ಕುಸಿತ
- 2008, 3 ತಿಂಗಳು, ಶೇ. 36.8 ಕುಸಿತ
- 2011, 3 ತಿಂಗಳು, ಶೇ. 16.6 ಕುಸಿತ
- 2020, 3 ತಿಂಗಳು, ಶೇ. 29.3 ಕುಸಿತ
- 2024-25, 5 ತಿಂಗಳು, ಶೇ. 12 ಕುಸಿತ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




