ಭಾರತದ ಷೇರುಮಾರುಕಟ್ಟೆ ಮತ್ತು ಆರ್ಥಿಕತೆ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚಿನ ನಿರೀಕ್ಷೆ
Indian economy and stock market: ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ಬಗ್ಗೆ ವಿಶ್ವಬ್ಯಾಂಕ್ ತನ್ನ ನಿರೀಕ್ಷೆ ಕಡಿಮೆ ಮಾಡಿಲ್ಲ. ಹೆಚ್ಚು ಆಶಾದಾಯಕವಾಗಿದೆ. ಭಾರತೀಯ ಷೇರು ಮಾರುಕಟ್ಟೆ ಬಗ್ಗೆಯೂ ವಿದೇಶೀ ಬ್ರೋಕರೇಜ್ ರೇಟಿಂಗ್ ಸಂಸ್ಥೆಗಳು ಆಶಾದಾಯಕವಾಗಿವೆ. ಸಿಟೀಸ್ ಏಜೆನ್ಸಿಯು ಭಾರತೀಯ ಷೇರುಪೇಟೆಗೆ ಓವರ್ವೇಟ್ ರೇಟಿಂಗ್ ನೀಡಿದೆ. ಜೆಫರೀಸ್ ಸಂಸ್ಥೆ ಸದ್ಯಲ್ಲೇ ಭಾರತೀಯ ಷೇರುಪೇಟೆ ಚೇತರಿಸಿಕೊಳ್ಳಬಹುದು ಎಂದಿದೆ.

ನವದೆಹಲಿ, ಫೆಬ್ರುವರಿ 27: ಭಾರತದ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯ ಬೆಳವಣಿಗೆ ಹಲವು ಮಂದಿಗೆ ನಿರಾಸೆ ಮೂಡಿಸಿದೆ. ಆದರೆ, ಅಂತಾರಾಷ್ಟ್ರೀಯ ಸಂಸ್ಥೆಗಳು ಸಕಾರಾತ್ಮಕ ಭಾವನೆಯಲ್ಲಿ ಮುಂದುವರಿದಿವೆ. ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತಮಗೇನೂ ಚಿಂತೆ ಇಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ. ಅಡ್ವಾಂಟೇಜ್ ಅಸ್ಸಾಂ ಹೂಡಿಕೆ ಸಮಾವೇಶದಲ್ಲಿ ಮಾತನಾಡುತ್ತಿದ್ದ ವಿಶ್ವಬ್ಯಾಂಕ್ನ ಆಗಸ್ಟೆ ಟಾನೋ ಕೌವಾಮೆ, ‘ಒಂದು ಪ್ರತಿಶತ ಅಂಕ ಕಡಿಮೆ ಆಗಿದ್ದರಿಂದ ವಿಶ್ವಬ್ಯಾಂಕ್ಗೆ ಭಾರತದ ಜಿಡಿಪಿ ವೃದ್ಧಿ ದರದ (GDP rate) ಬಗ್ಗೆ ನಿರೀಕ್ಷೆ ಕಡಿಮೆ ಆಗೋದಿಲ್ಲ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮುಂದೆಯೂ ಈ ನಿರೀಕ್ಷೆ ಮುಂದುವರಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಳೆ ಶುಕ್ರವಾರ ಮೂರನೇ ತ್ರೈಮಾಸಿಕ (ಅಕ್ಟೋಬರ್ನಿಂದ ಡಿಸೆಂಬರ್ವರೆಗೆ) ಅವಧಿಯ ಜಿಡಿಪಿ ದತ್ತಾಂಶ ಪ್ರಕಟವಾಗಲಿದೆ. ಹಲವು ವಿಶ್ಲೇಷಕರು ಜಿಡಿಪಿ ದರ ಶೇ 5.8ರಿಂದ ಶೇ. 6.5ರ ಶ್ರೇಣಿಯಲ್ಲಿ ಇರಬಹುದು ಎಂದು ಅಂದಾಜಿಸಿದ್ದಾರೆ. ನೊಮೊರಾ ಏಜೆನ್ಸಿ ಶೇ. 5.8ರ ಸಾಧ್ಯತೆಯನ್ನು ತಿಳಿಸಿದೆ. ಇಂಡಿಯಾ ರೇಟಿಂಗ್ಸ್ ಸಂಸ್ಥೆ ಅತಿಹೆಚ್ಚು ಆಶಾದಾಯಕವಾಗಿದ್ದು, ಮೂರನೇ ಕ್ವಾರ್ಟರ್ನಲ್ಲಿ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದೆ.
ಇದನ್ನು ಓದಿ: ಗುಜರಾತ್ ಟೈಟನ್ಸ್ ತಂಡಕ್ಕೆ ಭರ್ಜರಿ ವ್ಯಾಲುಯೇಶನ್; ಆರ್ಸಿಬಿ ಮತ್ತಿತರ ತಂಡಗಳ ಮೌಲ್ಯ ಎಷ್ಟಿರಬಹುದು?
ಭಾರತದ ಷೇರು ಮಾರುಕಟ್ಟೆಯ ಮೇಲೂ ನಿರೀಕ್ಷೆ…
ಭಾರತದ ಷೇರು ಮಾರುಕಟ್ಟೆ ಸತತ ಐದನೇ ತಿಂಗಳು ಹಿನ್ನಡೆ ಕಾಣುತ್ತಿದೆ. ಕಳೆದ ಎರಡು ಮೂರು ದಶಕಗಳಲ್ಲೇ ಇಷ್ಟು ಸುದೀರ್ಘ ಅವಧಿಯ ಹಿನ್ನಡೆ ಆಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ವಿದೇಶೀ ಹೂಡಿಕೆದಾರರು ಸತತವಾಗಿ ನಿರ್ಗಮಿಸುತ್ತಿರುವುದು ಈ ಕುಸಿತಕ್ಕೆ ಕಾರಣ. ಆದರೆ, ಭಾರತದ ಮಾರುಕಟ್ಟೆ ಬಗ್ಗೆ ವಿದೇಶೀ ವಿಶ್ಲೇಷಕರ ನಿರೀಕ್ಷೆ ಇನ್ನೂ ಕಡಿಮೆ ಆಗಿಲ್ಲ ಎನ್ನುವುದು ಗಮನಾರ್ಹ. ಸಿಟಿ, ಜೆಫರೀಸ್ ಮೊದಲಾದ ಏಜೆನ್ಸಿಗಳು ಭಾರತೀಯ ಮಾರುಕಟ್ಟೆ ಬಗ್ಗೆ ಈಗಲೂ ಆಶಾದಾಯಕವಾಗಿವೆ. ಸಿಟಿ ಸಂಸ್ಥೆಯಂತೂ ತನ್ನ ನಿರೀಕ್ಷೆ ಹೆಚ್ಚಿಸಿಕೊಂಡಿದ್ದು, ಭಾರತದ ಷೇರು ಮಾರುಕಟ್ಟೆಗೆ ‘ಓವರ್ವೇಟ್’ ಗ್ರೇಡಿಂಗ್ ಕೊಟ್ಟಿದೆ. ಓವರ್ವೇಟ್ ರೇಟಿಂಗ್ ಇದ್ದರೆ, ಅದು ಬೆಳವಣಿಗೆ ಕಾಣಬಲ್ಲ ಶಕ್ತಿ ಇರುವ ಮಾರುಕಟ್ಟೆ ಎಂದು ಭಾವಿಸಬಹುದು.
ಭಾರತೀಯ ಮಾರುಕಟ್ಟೆ ಬಗ್ಗೆ ಸಕಾರಾತ್ಮಕವಾಗಿರುವ ಜೆಫರೀಸ್
ಬ್ರೋಕರೇಜ್ ಏಜೆನ್ಸಿಯಾದ ಜೆಫರೀಸ್ ನಿಫ್ಟಿ ಬಗ್ಗೆ ಒಂದು ಇಂಟರೆಸ್ಟಿಂಗ್ ಸಂಗತಿ ಗಮನಿಸಿದೆ. ಮಾರ್ಕೆಟ್ ಕರೆಕ್ಷನ್ಸ್ ಬಳಿಕ ನಿಫ್ಟಿ ವ್ಯಾಲ್ಯುಯೇಶನ್ ಈಗ ಮುಂದಿನ ಒಂದು ವರ್ಷದ ಸರಾಸರಿ ಪಿಇ ಮೌಲ್ಯಕ್ಕೆ ಸಮೀಪ ಇದೆ. ಈ ಸಂದರ್ಭದಲ್ಲಿ 14ಕ್ಕಿಂತ ಹೆಚ್ಚು ಇಪಿಎಸ್ ಬೆಳವಣಿಗೆ ಇರುವ ಹಾಗು 10 ವರ್ಷದ ದೀರ್ಘಾವಧಿಯ ಸರಾಸರಿಗಿಂತ ಕಡಿಮೆ ಬೆಲೆ ಇರುವ ಷೇರುಗಳು ಬೇಡಿಕೆ ಗಳಿಸುವ ಸಾಧ್ಯತೆ ಇದೆ ಎಂಬುದು ಜೆಫರೀಸ್ನ ವಿಶ್ಲೇಷಣೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Thu, 27 February 25