ಗುಜರಾತ್ ಟೈಟನ್ಸ್ ತಂಡಕ್ಕೆ ಭರ್ಜರಿ ವ್ಯಾಲುಯೇಶನ್; ಆರ್ಸಿಬಿ ಮತ್ತಿತರ ತಂಡಗಳ ಮೌಲ್ಯ ಎಷ್ಟಿರಬಹುದು?
Value of IPL and its franchises: ಗುಜರಾತ್ ಟೈಟಾನ್ಸ್ ಐಪಿಎಲ್ ತಂಡವನ್ನು ಟಾರೆಂಟ್ ಗ್ರೂಪ್ 900 ಮಿಲಿಯನ್ ಡಾಲರ್ ಬೆಲೆಗೆ ಖರೀದಿ ಮಾಡಿದೆ. ನಷ್ಟದಲ್ಲಿರುವ ಫ್ರಾಂಚೈಸಿಗೆ ಇಷ್ಟು ವ್ಯಾಲ್ಯುಯೇಶನ್ ಸಿಕ್ಕಿರುವಾಗ, ಬೇರು ಭದ್ರವಾಗಿರುವ, ಸಖತ್ ಬ್ರ್ಯಾಂಡಿಂಗ್ ಬೆಳೆಸಿರುವ ಮೂಲ ಐಪಿಎಲ್ ತಂಡಗಳ ಮೌಲ್ಯ ಇನ್ನಷ್ಟಿರಬಹುದು... ತಜ್ಞರ ಪ್ರಕಾರ ಆರ್ಸಿಬಿ, ಸಿಎಸ್ಕೆ ಇತ್ಯಾದಿ ಮೂಲ ಎಂಟು ಐಪಿಎಲ್ ತಂಡಗಳ ಮೌಲ್ಯ ಗುಜರಾತ್ ಟೈಟಾನ್ಸ್ ನದಕ್ಕಿಂತಲೂ ಒಂದೂವರೆಯಿಂದ ಎರಡು ಪಟ್ಟು ಹೆಚ್ಚಿರಬಹುದು.

ಮುಂಬೈ, ಫೆಬ್ರುವರಿ 26: ಐಪಿಎಲ್ ಟೂರ್ನಿಯಲ್ಲಿ ಹೊಸ ತಂಡಗಳಲ್ಲಿ ಒಂದಾದ ಗುಜರಾತ್ ಟೈಟಾನ್ಸ್ ಅನ್ನು ಟಾರೆಂಟ್ ಗ್ರೂಪ್ ಖರೀದಿಸಿದೆ. ಜಿಟಿಯ (GT- Gujarat Titans) ದೊಡ್ಡ ಮೊತ್ತದ ಷೇರುಗಳನ್ನು 900 ಮಿಲಿಯನ್ ಡಾಲರ್ ಕೊಟ್ಟು ಖರೀದಿ ಮಾಡಿದೆ. ಇನ್ನೂ ಕೂಡ ಒಮ್ಮೆಯೂ ಲಾಭ ಕಾಣದ ಗುಜರಾತ್ ಟೈಟಾನ್ಸ್ ತಂಡಕ್ಕೆ ಇಷ್ಟು ದೊಡ್ಡ ಮೊತ್ತದ ವ್ಯಾಲ್ಯುಯೇಶನ್ ಸಿಕ್ಕಿರುವುದು ಈಗ ಇತರ ಐಪಿಎಲ್ ಫ್ರಾಂಚೈಸಿಗಳಿಗೆ (IPL 2025) ಹೊಸ ಹುರುಪು ಕೊಟ್ಟಿದೆ. ತಜ್ಞರ ಪ್ರಕಾರ, ಬೆಂಗಳೂರು ರಾಯಲ್ ಚಾಲೆಂಜರ್ಸ್, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ಇತ್ಯಾದಿ ಆರಂಭಿಕ ಎಂಟು ಐಪಿಎಲ್ ತಂಡಗಳ ಮೌಲ್ಯ ಗುಜರಾತ್ ಟೈಟಾನ್ಸ್ ಗಿಂತಲೂ ಬಹಳ ಹೆಚ್ಚು ಇರುವ ಸಾಧ್ಯತೆ ಇದೆ. ಈ ಎಂಟು ತಂಡಗಳ ಮೌಲ್ಯ 1.5-2 ಬಿಲಿಯನ್ ಡಾಲರ್ ನಷ್ಟು ಇರಬಹುದು ಎನ್ನಲಾಗಿದೆ.
ಆರ್ಸಿಬಿ, ಸಿಎಸ್ಕೆ, ಮುಂಬೈ ಇಂಡಿಯನ್ಸ್ ತಂಡಗಳ ಮೌಲ್ಯ ಗುಜರಾತ್ ಟೈಟಾನ್ಸ್ ಗಿಂತ ಎರಡು ಪಟ್ಟಾದರೂ ಹೆಚ್ಚಿರಬಹುದು. ಎರಡು ಬಿಲಿಯನ್ ಡಾಲರ್ ಇದ್ದಿರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಇಲವೆನ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮೌಲ್ಯ ಒಂದೂವರೆ ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಆರ್ಥಿಕತೆ ಮಧ್ಯೆ ಎಷ್ಟೊಂದು ಸಾಮ್ಯತೆ ಇದೆ ಗೊತ್ತಾ? ಹುಳುಕು, ತಳುಕು, ಬಳುಕು ಒಂದೇ
ಈ ಎಂಟು ಮೂಲ ಐಪಿಎಲ್ ತಂಡಗಳು ಉತ್ತಮ ಲಾಭ ಮಾಡುತ್ತಿವೆ. ಪ್ರತೀ ವರ್ಷವೂ ಕ್ಯಾಷ್ ಫ್ಲೋ ಉತ್ತಮವಾಗಿ ಆಗುತ್ತಿದೆ. ಆರ್ಸಿಬಿ, ಸಿಎಸ್ಕೆಯಂತಹ ಕೆಲ ಐಪಿಎಲ್ ಫ್ರಾಂಚೈಸಿಗಳು ಒಳ್ಳೆಯ ಬ್ರ್ಯಾಂಡ್ ರೂಪಿಸಿವೆ. ಕೆಲ ಫ್ರಾಂಚೈಸಿಗಳು ಬೇರೆ ದೇಶಗಳಲ್ಲಿನ ಕ್ರಿಕೆಟ್ ಲೀಗ್ ಗಳಲ್ಲಿ ತಂಡಗಳನ್ನು ಖರೀದಿಸಿವೆ. ಸೌತ್ ಆಫ್ರಿಕಾ, ಯುಎಇ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿರುವ ಕೆಲ ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿರುವುದುಂಟು.
ನಷ್ಟದ ಪರಿಧಿಯಲ್ಲೇ ಇರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಗೆ ಇಷ್ಟು ಉತ್ತಮ ವ್ಯಾಲ್ಯುಯೇಶನ್ ಸಿಕ್ಕಿರುವುದು ಈಗ ಬೇರೆ ತಂಡಗಳಿಗೆ ಹೊಸ ಭರವಸೆ ನೀಡಿದೆ. ಹೂಡಿಕೆದಾರರನ್ನು ಆಕರ್ಷಿಸಲು ಈ ತಂಡಗಳು ಯತ್ನಿಸಬಹುದು. ಐಪಿಒ ಮೂಲಕ ಷೇರುಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಯತ್ನಿಸಬಹುದು. ಹೀಗೆ ನಾನಾ ಆಯ್ಕೆಗಳು ಐಪಿಎಲ್ ಫ್ರಾಂಚೈಸಿಗಳ ಮುಂದಿವೆ.
10-16 ಬಿಲಿಯನ್ ಡಾಲರ್ ಮೌಲ್ಯದ ಐಪಿಎಲ್ ಬ್ರ್ಯಾಂಡ್
2008ರಲ್ಲಿ ಆರಂಭವಾದ ಐಪಿಎಲ್ ಈಗ ವಿಶ್ವದ ಪ್ರಮುಖ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎನಿಸಿದೆ. ಅತಿಹೆಚ್ಚು ಜನಪ್ರಿಯ ಟೂರ್ನಿ ಎಂದೂ ಹೆಸರು ಮಾಡಿದೆ. ಬಹಳಷ್ಟು ರೇಟಿಂಗ್ ಸಂಸ್ಥೆಗಳು ಐಪಿಎಲ್ ಬ್ರ್ಯಾಂಡ್ಗೆ 10 ರಿಂದ 16 ಬಿಲಿಯನ್ ಡಾಲರ್ ಮೌಲ್ಯ ನೀಡಿವೆ.
ಇದನ್ನೂ ಓದಿ: IPL 2025: ಐಪಿಎಲ್ನಲ್ಲೂ ಟೀಮ್ ಇಂಡಿಯಾಗೆ ಟೆಸ್ಟ್
ಐಪಿಎಲ್ ಟೂರ್ನಿಯ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿರುವುದು ಇದರ ಜನಪ್ರಿಯತೆಗೆ ಕನ್ನಡಿ ಹಿಡಿದಿದೆ. 2022ರಲ್ಲಿ ಸ್ಟಾರ್ ಮತ್ತು ವಯಾಕಾಂ18 ಸಂಸ್ಥೆಗಳು ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕನ್ನು 48,390 ಕೋಟಿ ರೂಗೆ ಖರೀದಿಸಿದ್ದವು. ಇನ್ನೂ ಹಲವು ಕಾರ್ಪೊರೇಟ್ ಕಂಪನಿಗಳು ಐಪಿಎಲ್ ಪ್ರಾಯೋಜಕತ್ವ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇವುಗಳ ಮೌಲ್ಯ 4,000 ಕೋಟಿ ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ