IPL 2025: ಐಪಿಎಲ್ನಲ್ಲೂ ಟೀಮ್ ಇಂಡಿಯಾಗೆ ಟೆಸ್ಟ್
IPL 2025: ಐಪಿಎಲ್ನ 18ನೇ ಆವೃತ್ತಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ಟಾಸ್ಕ್ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಈ ಬಾರಿಯ ಐಪಿಎಲ್ ವೇಳೆ ಭಾರತ ಟೆಸ್ಟ್ ತಂಡದ ಆಟಗಾರರು ವೈಟ್ ಬಾಲ್ ಹಾಗೂ ರೆಡ್ ಬಾಲ್ನಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಈ ಮೂಲಕ ಮುಂದಿನ ಸರಣಿಗೆ ಸಜ್ಜಾಗಲು ಬಿಸಿಸಿಐ ಸೂಚಿಸುವ ಸಾಧ್ಯತೆಯಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಅಂದರೆ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಭಾರತೀಯ ಆಟಗಾರರು ಐಪಿಎಲ್ಗಾಗಿ ಸಜ್ಜಾಗಲಿದ್ದಾರೆ. ಆದರೆ ಐಪಿಎಲ್ ಬಳಿಕ ಟೀಮ್ ಇಂಡಿಯಾ ಮುಂದಿರುವ ಪ್ರಮುಖ ಸರಣಿಯೇ ಇದೀಗ ಬಿಸಿಸಿಐನ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಭಾರತ ತಂಡವು ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಇತ್ತ ಟಿ20 ಪಂದ್ಯಗಳನ್ನಾಡಿ ಭಾರತೀಯರು ಟೆಸ್ಟ್ ಸರಣಿಗೆ ಹೊಂದಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ. ಅದರಲ್ಲೂ ವೈಟ್ ಬಾಲ್ನಿಂದ ರೆಡ್ ಬಾಲ್ ಅಭ್ಯಾಸದತ್ತ ಮರಳಬೇಕಾಗುತ್ತದೆ.
ಇತ್ತ ಭಾರತ ತಂಡವು ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಮುಗ್ಗರಿಸಿದೆ. ಹೀಗಾಗಿಯೇ ಇಂಗ್ಲೆಂಡ್ ವಿರುದ್ಧದ ಸರಣಿಯು ಭಾರತದ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಆದರೆ ಈ ಸರಣಿಗಾಗಿ ಸಜ್ಜಾಗಲು ಸಮಯವಕಾಶದ ಕೊರತೆ ಎದುರಾಗಿದೆ.
ಏಕೆಂದರೆ ಐಪಿಎಲ್ ಫೈನಲ್ ಪಂದ್ಯ ನಡೆಯುವುದು ಮೇ 25 ರಂದು. ಅತ್ತ ಜೂನ್-ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಇದಕ್ಕಾಗಿ ಸಜ್ಜಾಗಬೇಕಿದ್ದರೆ ಟೀಮ್ ಇಂಡಿಯಾ ಆಟಗಾರರು ಐಪಿಎಲ್ ನಡುವೆಯೇ ಅಭ್ಯಾಸ ನಡೆಸುವುದು ಅನಿವಾರ್ಯ.
ರೆಡ್ ಬಾಲ್ಗೆ ಅನುಮತಿ:
ಐಪಿಎಲ್ ನಡುವೆಯೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಲು ಟೀಮ್ ಇಂಡಿಯಾಗೆ ಸೂಚಿಸುವ ಸಾಧ್ಯತೆಯಿದೆ. ಈಗಾಗಲೇ ಬಿಸಿಸಿಐನ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿದ್ದು, ಭಾರತೀಯ ಆಟಗಾರರು ಐಪಿಎಲ್ ವೇಳೆ ರೆಡ್ ಬಾಲ್ನಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಲು ನಿರ್ಧರಿಸಲಾಗಿದೆ.
ಅದರಂತೆ ಭಾರತ ಟೆಸ್ಟ್ ತಂಡದಲ್ಲಿರುವ ಆಟಗಾರರು, ಐಪಿಎಲ್ ನಡುವೆಯೇ ರೆಡ್ ಬಾಲ್ನಲ್ಲೂ ಅಭ್ಯಾಸ ಮಾಡಬೇಕಾಗುತ್ತದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಲು ಭಾರತೀಯ ಆಟಗಾರಿಗೆ ಬಿಸಿಸಿಐ ಸೂಚನೆ ನೀಡುವ ಸಾಧ್ಯತೆ ಹೆಚ್ಚಿದೆ.
ಸೋಲಿನಿಂದ ಕಲಿತ ಪಾಠ:
ಬಿಸಿಸಿಐ ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ ಈ ಹಿಂದಿನ ಸೋಲಿನಿಂದ ಕಲಿತ ಪಾಠ. ಅಂದರೆ 2011ರ ಐಪಿಎಲ್ ನಂತರ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಅಂದು ಭಾರತ ತಂಡ ಟೆಸ್ಟ್ ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡಿತು.
ಇನ್ನು ಐಪಿಎಲ್ 2018ರ ಬಳಿಕ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಈ ವೇಳೆಯೂ ಟೀಮ್ ಇಂಡಿಯಾ 4-1 ಅಂತರದಿಂದ ಸೋಲನುಭವಿಸಿತ್ತು. ಇನ್ನು 2021 ರಲ್ಲಿ ನಡೆದ ಟೆಸ್ಟ್ ಸರಣಿಯು 2-2 ಅಂತರದಿಂದ ಡ್ರಾ ಆಗಿತ್ತು. ಈ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಅಭ್ಯಾಸ ನಡೆಸಲು ಸಾಕಷ್ಟು ಸಮಯವಕಾಶವಿತ್ತು.
ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!
ಆದರೆ ಈ ಬಾರಿ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಬೇಕಿದೆ. ಇದರ ಬೆನ್ನಲ್ಲೇ ಭಾರತೀಯ ಆಟಗಾರರು ಇಂಗ್ಲೆಂಡ್ ಪ್ರವಾಸವನ್ನು ಸಹ ಕೈಗೊಳ್ಳಬೇಕಿದೆ. ಹೀಗಾಗಿಯೇ ಇದೀಗ ಐಪಿಎಲ್ ನಡುವೆಯೇ ಟೆಸ್ಟ್ ಸರಣಿಗಾಗಿ ರೆಡ್ ಬಾಲ್ನಲ್ಲಿ ಅಭ್ಯಾಸ ನಡೆಸಲು ಭಾರತೀಯ ಆಟಗಾರರಿಗೆ ಸೂಚಿಸುವ ಸಾಧ್ಯತೆಯಿದೆ.