AFG vs ENG: ಸೋತವರು ಟೂರ್ನಿಯಿಂದಲೇ ಔಟ್
Champions Trophy 2025: ಚಾಂಪಿಯನ್ಸ್ ಟ್ರೋಫಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಕದನದಲ್ಲಿ ಸೋಲುವ ತಂಡ ಕೂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯವು ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ಇಂದು (ಫೆ.26) ನಡೆಯಲಿರುವ ಈ ಪಂದ್ಯದಲ್ಲಿ ಸೋತ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ. ಏಕೆಂದರೆ ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್ಗಳಿಂದ ಪರಾಜಯಗೊಂಡಿತ್ತು. ಇತ್ತ ಸೌತ್ ಆಫ್ರಿಕಾ ವಿರುದ್ದ ಅಫ್ಘಾನಿಸ್ತಾನ್ 107 ರನ್ಗಳ ಹೀನಾಯ ಸೋಲನುಭವಿಸಿತ್ತು. ಈ ಸೋಲುಗಳೊಂದಿಗೆ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಉಭಯ ತಂಡಗಳು ಕೊನೆಯ ಎರಡು ಸ್ಥಾನಗಳಲ್ಲಿದೆ.
ಇನ್ನು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ. ಉಭಯ ತಂಡಗಳು ಮೊದಲ ಪಂದ್ಯವನ್ನು ಗೆದ್ದು ತಲಾ 2 ಅಂಕಗಳನ್ನು ಪಡೆದುಕೊಂಡರೆ, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಹೀಗಾಗಿ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.
ಅದರಂತೆ ಇದೀಗ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 3 ಅಂಕಗಳನ್ನು ಹೊಂದಿದೆ. ಉಭಯ ತಂಡಗಳಿಗೆ ಇನ್ನೂ ಒಂದು ಪಂದ್ಯಗಳಿದ್ದು, ಈ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ಒಟ್ಟು 5 ಅಂಕಗಳನ್ನು ಪಡೆಯಬಹುದು.
ಇತ್ತ ಇಂದಿನ ಪಂದ್ಯದಲ್ಲಿ ಸೋಲುವ ತಂಡ ಕೊನೆಯ ಮ್ಯಾಚ್ನಲ್ಲಿ ಗೆದ್ದರೂ ಕೇವಲ 2 ಅಂಕಗಳನ್ನು ಮಾತ್ರ ಪಡೆಯಲಿದೆ. ಆದರೆ ಅದಾಗಲೇ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 3 ಅಂಕಗಳನ್ನು ಹೊಂದಿರುವ ಕಾರಣ ಇಂದು ಸೋಲುವ ತಂಡಕ್ಕೆ ಸೆಮಿಫೈನಲ್ಗೆ ಪ್ರವೇಶಿಸುವ ಅವಕಾಶ ಇರುವುದಿಲ್ಲ.
ಹೀಗಾಗಿ ಇಂದಿನ ಪಂದ್ಯವು ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು. ಈ ಪಂದ್ಯದಲ್ಲಿ ಯಾರು ಸೋಲುತ್ತಾರೋ ಅವರ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಅಂತ್ಯಗೊಳ್ಳಲಿದೆ.