ಭಾರತ-ಪಾಕಿಸ್ತಾನ್ ಪ್ಲೇಯಿಂಗ್ 11 ಹೆಸರಿಸಿದ ಆಕಾಶ್ ಚೋಪ್ರಾ: ಆದರೆ ಪಾಕ್ ಆಟಗಾರರಿಗೆ ಸ್ಥಾನವಿಲ್ಲ..!
India vs Pakistan: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 241 ರನ್ ಕಲೆಹಾಕಿದರೆ, ಈ ಗುರಿಯನ್ನು ಟೀಮ್ ಇಂಡಿಯಾ 42.3 ಓವರ್ಗಳಲ್ಲಿ ಚೇಸ್ ಮಾಡಿದೆ.

ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಪಂದ್ಯವನ್ನು ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭಾರತ-ಪಾಕಿಸ್ತಾನ್ ಸಂಯೋಜಿತ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ್ದಾರೆ. ಆದರೆ ಈ ಪ್ಲೇಯಿಂಗ್ ಇಲೆವೆನ್ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಸ್ಥಾನ ನೀಡಿಲ್ಲ ಎಂಬುದು ವಿಶೇಷ.
ಅಂದರೆ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಒಬ್ಬನೇ ಒಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡಿಲ್ಲ. ಇಲ್ಲಿ ಪ್ರತಿಯೊಬ್ಬರನ್ನು ಕಂಪೇರ್ ಮಾಡಿದರೂ, ಭಾರತೀಯ ಆಟಗಾರರು ಮುಂದಿದ್ದಾರೆ. ಹೀಗಾಗಿ ಇಂಡೊ-ಪಾಕ್ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರತೀಯ ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ ಎಂದು ಅಕಾಶ್ ಚೋಪ್ರಾ ಸ್ಪಷ್ಟನೆ ನೀಡಿದ್ದಾರೆ.
ಇಲ್ಲಿ ಆರಂಭಿಕನ ಸ್ಥಾನಕ್ಕೆ ರೋಹಿತ್ ಶರ್ಮಾ ಹಾಗೂ ಬಾಬರ್ ಆಝಂ ಅವರನ್ನು ತೆಗೆದುಕೊಂಡರೆ, ಹಿಟ್ಮ್ಯಾನ್ ಮುಂಚೂಣಿಯಲ್ಲಿದ್ದಾರೆ. ಇನ್ನು ಇಮಾಮ್ ಉಲ್ ಹಕ್ಗಿಂತ ಶುಭ್ಮನ್ ಗಿಲ್ ಉತ್ತಮ ಬ್ಯಾಟರ್. ಹೀಗಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅವರನ್ನು ಆರಂಭಿಕನಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಸೌದ್ ಶಕೀಲ್ ಹಾಗೂ ವಿರಾಟ್ ಕೊಹ್ಲಿ ನಡುವೆ ಕಿಂಗ್ ಕೊಹ್ಲಿಯೇ ಬೆಸ್ಟ್. ಹಾಗೆಯೇ ಮೊಹಮ್ಮದ್ ರಿಝ್ವಾನ್ಗಿಂತ 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟರ್.
ಸಲ್ಮಾನ್ ಅಲಿ ಅಘಾ, ಖುಷ್ದಿಲ್ ಶಾ ಮತ್ತು ತಯ್ಯಬ್ ತಾಹಿರ್ ಅವರನ್ನು ಉಳಿದ ಕ್ರಮಾಂಕಗಳಿಗೆ ತೆಗೆದುಕೊಂಡರೆ, ಅವರಿಗಿಂತ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅತ್ಯುತ್ತಮ ಆಟಗಾರರು. ಹೀಗಾಗಿ 5 ರಿಂದ 8ನೇ ಕ್ರಮಾಂಕದವರೆಗೆ ಟೀಮ್ ಇಂಡಿಯಾ ಆಟಗಾರರನ್ನೇ ಆಯ್ಕೆ ಮಾಡಿದ್ದೇನೆ ಎಂದು ಚೋಪ್ರಾ ಹೇಳಿದ್ದಾರೆ.
ಬೌಲರ್ಗಳ ವಿಷಯದಲ್ಲಿ ಮೊಹಮ್ಮದ್ ಶಮಿ, ಹರ್ಷಿತ್ ರಾಣಾ ಹಾಗೂ ಕುಲ್ದೀಪ್ ಯಾದವ್ ಪಾಕಿಸ್ತಾನ್ ಬೌಲರ್ಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗೂ ಅಬ್ರಾರ್ ಅಹ್ಮದ್ಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಬೌಲಿಂಗ್ ವಿಭಾಗದಲ್ಲೂ ಭಾರತೀಯ ಆಟಗಾರರಿಗೆ ಮಣೆ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!
ಅಂದರೆ ಪಾಕಿಸ್ತಾನ್ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿರುವ ಯಾವುದೇ ಆಟಗಾರರು ಭಾರತೀಯರಿಗಿಂತ ಯಾವುದೇ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ನನ್ನ ಇಂಡೊ-ಪಾಕ್ ಸಂಯೋಜಿತ ಆಡುವ ಬಳಗದಲ್ಲಿ ಪಾಕಿಸ್ತಾನದ ಯಾವುದೇ ಆಟಗಾರ ಅರ್ಹತೆ ಪಡೆದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಅದರಂತೆ ಆಕಾಶ್ ಚೋಪ್ರಾ ಅವರ ಇಂಡೊ-ಪಾಕ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
- ರೋಹಿತ್ ಶರ್ಮಾ (ನಾಯಕ)
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಅಕ್ಷರ್ ಪಟೇಲ್
- ಕೆಎಲ್ ರಾಹುಲ್ (ವಿಕೆಟ್ ಕೀಪರ್)
- ಹಾರ್ದಿಕ್ ಪಾಂಡ್ಯ
- ರವೀಂದ್ರ ಜಡೇಜಾ
- ಕುಲ್ದೀಪ್ ಯಾದವ್
- ಹರ್ಷಿತ್ ರಾಣಾ
- ಮೊಹಮ್ಮದ್ ಶಮಿ.