ನವದೆಹಲಿ: ಐಫೋನ್ ತಯಾರಕ ಸಂಸ್ಥೆ ಆ್ಯಪಲ್ ವಿಶ್ವದಲ್ಲೆ ಅತಿಹೆಚ್ಚು ಷೇರುಸಂಪತ್ತು (Market Capitalization) ಹೊಂದಿರುವ ಕಂಪನಿ. ಮೊನ್ನೆ (ಜೂನ್ 30) ಅದರ ಷೇರುಸಂಪತ್ತು 3.04 ಟ್ರಿಲಿಯನ್ ಡಾಲರ್ (ಸುಮಾರು 249.57 ಲಕ್ಷಕೋಟಿ ರೂ) ಮುಟ್ಟಿತು. 3 ಟ್ರಿಲಿಯನ್ ಡಾಲರ್ ಷೇರುಸಂಪತ್ತಿನ ಮೈಲಿಗಲ್ಲು ಮುಟ್ಟಿದ ಮೊದಲ ಕಂಪನಿ ಆ್ಯಪಲ್. ವಿಶ್ವದ ಯಾವುದೇ ಷೇರುಮಾರುಕಟ್ಟೆಯಲ್ಲೂ ಯಾವುದೇ ಕಂಪನಿ ಈವರೆಗೂ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತಿನ ಮಟ್ಟಕ್ಕೆ ಏರಿದ್ದಿಲ್ಲ. ಅಮೆರಿಕದ ಎಸ್ ಅಂಡ್ ಪಿ 500 ಸೂಚ್ಯಂಕ ಜನವರಿಯಿಂದ ಜೂನ್ವರೆಗೆ ಶೇ. 16ರಷ್ಟು ಹೆಚ್ಚಳ ಕಾಣುವುದರ ಹಿಂದೆ ಆ್ಯಪಲ್ ಕಂಪನಿಯ ಷೇರುವೃದ್ಧಿ ಪ್ರಮುಖ ಪಾತ್ರವಹಿಸಿದೆ.
ಕುತೂಹಲ ಎಂದರೆ 2022 ಜನವರಿಯಲ್ಲಿ ಆ್ಯಪಲ್ ಕಂಪನಿ ಎರಡು ಬಾರಿ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತಿನ ಗಡಿದಾಟಿತ್ತು. ಆದರೆ, ಅದು ಟ್ರೇಡಿಂಗ್ ಸಮಯದಲ್ಲಿ ಮಾತ್ರ. ದಿನಾಂತ್ಯದಲ್ಲಿ 3 ಟ್ರಿಲಿಯನ್ ಡಾಲರ್ ಮಟ್ಟ ಹಿಡಿದಿಡಲು ಸಾಧ್ಯವಾಗಿರಲಿಲ್ಲ. ಆದರೆ, ಜೂನ್ 30ರಂದು ಷೇರುಪೇಟೆ ವ್ಯವಹಾರ ಮುಗಿದ ಬಳಿಕ ಆ್ಯಪಲ್ ಕಂಪನಿಯ ಷೇರುಸಂಪತ್ತು 3.05 ಟ್ರಿಲಿಯನ್ ಡಾಲರ್ ದಾಟಿತ್ತು.
ಇದನ್ನೂ ಓದಿ: GST Collection: ಜೂನ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಭರ್ಜರಿ ಹೆಚ್ಚಳ; ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚು
ಆ್ಯಪಲ್ ಕಂಪನಿಯ ಉತ್ಪನ್ನ ಎಂದರೆ ಮೊದಲು ಕಣ್ಮುಂದೆ ಬರುವುದು ಐಫೋನ್. ದಶಕಗಳ ಹಿಂದೆ ಐಫೋನ್ ಹೊಂದುವುದೆಂದರೆ ಅದು ಕಾರ್ ಪ್ರಿಯರಿಗೆ ಪೋರ್ಷೆ, ಲಂಬೋರ್ಗಿನಿಯಂತಹ ಐಷಾರಾಮಿ ಕಾರುಗಳಿದ್ದಂತೆ. ಐಫೋನ್ ಇಟ್ಟುಕೊಳ್ಳುವುದು ಜನರಿಗೆ ಪ್ರತಿಷ್ಠೆಯ ವಿಚಾರವಾಗಿತ್ತು. ಆದರೆ, ಅಷ್ಟರಮಟ್ಟಿಗೆ ಕ್ರೇಜ್ ಈಗ ಉಳಿದಿಲ್ಲ. ಎಲ್ಲರ ಮನೆಗಳನ್ನೂ ಐಫೋನ್ ತಲುಪುತ್ತಿದೆ.
ಈಗ ಆ್ಯಪಲ್ ಕಂಪನಿ ಕ್ರೇಜ್ ಹುಟ್ಟಿಸಿರುವುದು ವಿಷನ್ ಪ್ರೋ ಎಂಬ ಹೊಸ ಫೀಚರ್. ದೊಡ್ಡ ಕನ್ನಡಕದ ರೀತಿಯಲ್ಲಿರುವ ಈ ಉಪಕರಣವು ದೃಶ್ಯ ಶೋಧದ ಹೊಸ ಸಾಧ್ಯತೆಗಳನ್ನೇ ತೆರೆದಿಟ್ಟಿದೆ. ಇದು ಭವಿಷ್ಯದ ದಿನಗಳ ಸೂಪರ್ ಹಿಟ್ ಉತ್ಪನ್ನವೆಂದು ಪರಿಗಣಿಸಲಾಗಿದೆ. ಜೂನ್ ಮೊದಲ ವಾರದಂದು ಆ್ಯಪಲ್ ಕಂಪನಿ ವಿಷನ್ ಪ್ರೋ ಉತ್ಪನ್ನವನ್ನು ಪರಿಚಯಿಸಿತ್ತು. ಆಗಿನಿಂದಲೂ ಷೇರುಪೇಟೆಯಲ್ಲಿ ಆ್ಯಪಲ್ ಕಂಪನಿಯ ಷೇರಿಗೆ ಭರ್ಜರಿ ಡಿಮ್ಯಾಂಡ್ ಕುದುರಿದೆ.
ಇದನ್ನೂ ಓದಿ: Sensex Points: ಸೆನ್ಸೆಕ್ಸ್ ಮೂರೇ ದಿನದಲ್ಲಿ 1,800 ಅಂಕಗಳ ಏರಿಕೆ; ಸೆನ್ಸೆಕ್ಸ್ ಪಾಯಿಂಟ್ ಹೇಗೆ ಲೆಕ್ಕಹಾಕಲಾಗುತ್ತೆ?
ಆ್ಯಪಲ್ ಕಂಪನಿ ಹೊಂದಿರುವ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಸಾಮಾನ್ಯ ಅಲ್ಲ ಎಂಬುದು ಗೊತ್ತಿರಲಿ. ಭಾರತದ ಜಿಡಿಪಿಗೆ ಇದು ಸಮ. ಜಗತ್ತಿನ ಕೆಳಗಿನ 120ಕ್ಕೂ ಹೆಚ್ಚು ದೇಶಗಳ ಎಲ್ಲಾ ಜಿಡಿಪಿಯನ್ನು ಒಟ್ಟುಗೂಡಿಸಿದರೂ ಆ್ಯಪಲ್ ಕಂಪನಿಯ ಷೇರುಸಂಪತ್ತಿಗೆ ಸಮವಾಗಲಾರದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ