- TV9 Kannada Kannada News Photos Cricket Photos Hardik Pandya Joins Punjab Kings: IPL All-Rounder's New Chapter with Shreyas Iyer
ನನ್ನ ನಾಯಕ ಶ್ರೇಯಸ್, ನಿಮ್ಮ ಬೆನ್ನಿಗೆ ನಾನಿದ್ದೇನೆ: ಹಾರ್ದಿಕ್ ಪಾಂಡ್ಯ ಘೋಷಣೆ
ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೇರಿದ್ದಾರೆ. ಮುಂಬೈ ಇಂಡಿಯನ್ಸ್‌ನಿಂದ ಬಂದಿರುವ ಹಾರ್ದಿಕ್, ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ರಿಕಿ ಪಾಂಟಿಂಗ್ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಇದು ಒಂದು ದೊಡ್ಡ ಆಟಗಾರರ ವರ್ಗಾವಣೆಯಾಗಿದ್ದು, ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್‌ಗೆ ಸೇರಿದ್ದಾರೆ. ಹಾರ್ದಿಕ್ ₹18 ಕೋಟಿ ಸಂಭಾವನೆ ಪಡೆಯಲಿದ್ದಾರೆ.
Updated on:Nov 11, 2026 | 3:55 PM

ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಪಂಜಾಬ್ ಕಿಂಗ್ಸ್ ತಂಡದ ಪರ ಆಡಲು ಉತ್ಸುಕರಾಗಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಮ್ಮ ಆಲ್‌ರೌಂಡ್ ಆಟದ ಮೂಲಕ ತಂಡಕ್ಕೆ ನೆರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಯಕ ಶ್ರೇಯಸ್ ಅಯ್ಯರ್, ಕೋಚ್ ರಿಕಿ ಪಾಂಟಿಂಗ್ ಹಾಗೂ ಇಡೀ ಪಂಜಾಬ್ ತಂಡದ ಬೆನ್ನಿಗೆ ತಾನು ಸದಾ ನಿಲ್ಲುವುದಾಗಿ ಹೇಳಿದ್ದಾರೆ(PC-PTI).

ಐಪಿಎಲ್ ಇತಿಹಾಸದ ಅತ್ಯಂತ ದೊಡ್ಡ ಆಟಗಾರರ ವರ್ಗಾವಣೆಗಳ ಪೈಕಿ ಒಂದಾದ ಈ ಡೀಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಪ್ರಮುಖ ಟಿ20 ಬೌಲರ್ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಲಿದ್ದಾರೆ(PC-PTI).

ಈ ಒಪ್ಪಂದದ ಪ್ರಕಾರ ಹಾರ್ದಿಕ್ ಪಾಂಡ್ಯ 16.35 ಕೋಟಿ ಬದಲಿಗೆ 18 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಇತ್ತ ಅರ್ಷದೀಪ್ ಸಿಂಗ್ ತಮ್ಮ ಹಳೆಯ 18 ಕೋಟಿ ಸಂಭಾವನೆಯೊಂದಿಗೆ ಮುಂಬೈ ತಂಡವನ್ನು ಸೇರಲಿದ್ದಾರೆ.ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರುತ್ತಿರುವ ಖುಷಿಯನ್ನು ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಸತ್ ಶ್ರೀ ಅಕಾಲ್, ನನ್ನ ನಾಯಕ ಶ್ರೇಯಸ್. ನನ್ನ ಕೋಚ್ ರಿಕಿ. ನನ್ನ ತಂಡ, ಇಡೀ ಪಂಜಾಬ್. ನಾನು ನಿಮ್ಮೆಲ್ಲರ ಬೆನ್ನಿಗೆ ನಿಂತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ(PC-PTI).

ಈ ವರ್ಗಾವಣೆಯೊಂದಿಗೆ ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ಹಾರ್ದಿಕ್ ಅವರ ಎರಡನೇ ಇನ್ನಿಂಗ್ಸ್ ಅಂತ್ಯಗೊಂಡಿದೆ. ಮುಂಬೈ ಪರ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಹಾರ್ದಿಕ್, 2015ರಲ್ಲಿ ಮೊದಲ ಬಾರಿಗೆ ತಂಡಕ್ಕೆ ಸೇರ್ಪಡೆಯಾಗಿದ್ದರು. ಆರಂಭದಲ್ಲಿ ಸಾಮಾನ್ಯ ಆಟಗಾರನಾಗಿ ತಂಡಕ್ಕೆ ಬಂದ ಅವರು, ಬಳಿಕ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುವ ಮೂಲಕ ಐಪಿಎಲ್‌ನ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಬೆಳೆದರು(PC-PTI).

2015, 2017, 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದಾಗ ಹಾರ್ದಿಕ್ ತಂಡದ ಪ್ರಮುಖ ಆಟಗಾರರಾಗಿದ್ದರು. ಮುಂಬೈ ಪರ ಏಳು ವರ್ಷ ಆಡಿದ ಬಳಿಕ 2022ರ ಐಪಿಎಲ್‌ಗೂ ಮುನ್ನ ಗುಜರಾತ್ ಟೈಟನ್ಸ್ ತಂಡಕ್ಕೆ ಹಾರ್ದಿಕ್ ಸೇರ್ಪಡೆಯಾದರು. ಅಲ್ಲಿ ನಾಯಕನ ಜವಾಬ್ದಾರಿ ಹೊತ್ತ ಅವರು, ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. 2023ರಲ್ಲೂ ಗುಜರಾತ್ ಫೈನಲ್ ಪ್ರವೇಶಿಸಿತ್ತು(PC-PTI).

2024ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಹಾರ್ದಿಕ್ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿಕೊಂಡರು. ಒಟ್ಟಾರೆ 162 ಐಪಿಎಲ್ ಪಂದ್ಯಗಳನ್ನಾಡಿರುವ ಹಾರ್ದಿಕ್ 2,955 ರನ್ ಗಳಿಸಿದ್ದು, 146.28ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ 82 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅಂಕಿಅಂಶಗಳು ಅವರ ಆಲ್‌ರೌಂಡ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ(PC-PTI).
Published On - 3:50 pm, Wed, 11 November 26

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More