ತುಮಕೂರು: ರಾಜ್ಯದಲ್ಲಿ ಅಡಿಕೆ ಬೆಲೆ ಏರುಗತಿಯಲ್ಲಿ ಸಾಗಿದ್ದು, ಚೇಣಿ ಪಡೆದುಕೊಳ್ಳಲು ವ್ಯಾಪಾರಿಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಆದರೆ ಹುಣಸೆಗೆ ಈ ಬಾರಿ ಬೆಲೆ ಸಿಗುತ್ತಿಲ್ಲ. ಬೆಳೆ ತಕ್ಕಮಟ್ಟಿಗೆ ಉತ್ತಮವಾಗಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ರೈತರಿಗೆ ಹೆಚ್ಚು ಲಾಭವಾಗುತ್ತಿಲ್ಲ. ರೈತರು ಸಾಮಾನ್ಯವಾಗಿ ಸ್ವತಃ ಅಡಿಕೆ ಸಿಪ್ಪೆ ಸುಲಿದು ಬೇಯಿಸುವುದು ಕಡಿಮೆ. ಬದಲಾಗಿ ಕಾಯಿ ಬಲಿಯುವ ಮೊದಲೇ ಹಳ್ಳಿಗಳಿಗೆ ಬರುವ ವ್ಯಾಪಾರಿಗಳಿಗೆ ಇಡೀ ಬೆಳೆಯನ್ನೇ ಮಾರಿಬಿಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಇದನ್ನೇ ಚೇಣಿ (ಗುತ್ತಿಗೆ) ಪಡೆದುಕೊಳ್ಳುವುದು ಎನ್ನುತ್ತಾರೆ. ಅಡಿಕೆ ಧಾರಣೆ ಉತ್ತಮವಾಗಿದ್ದಾಗ ಚೇಣಿಗೆ ಬರುವ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಕೇಳುತ್ತಾರೆ. ಧಾರಣೆ ಕುಸಿದಾಗ ಚೇಣಿದಾರರೂ ಹೆಚ್ಚಿನ ಬೆಲೆ ನೀಡಲು ಹಿಂದೆ ಮುಂದೆ ನೋಡುವುದು ವಾಡಿಕೆ.
ಆದರೆ ಈ ಬಾರಿ ಪರಿಸ್ಥಿತಿ ಅಡಿಕೆ ಬೆಳೆಗಾರರ ಪರವಾಗಿದೆ. ಅಡಿಕೆ ಮರಗಳಲ್ಲಿ ಹೊಂಬಾಳೆ ಮೂಡುವ ಮೊದಲೇ ಚೇಣಿದಾರರು ತೋಟಗಳನ್ನು ಗುತ್ತಿಗೆಗೆ ಪಡೆದುಕೊಳ್ಳಲು ತಾಮುಂದು, ನಾಮುಂದು ಎಂದು ಮೇಲಾಟ ಮಾಡುತ್ತಿದ್ದಾರೆ. ಬಯಲುಸೀಮೆಯ ಜಿಲ್ಲೆಯಾದ ತುಮಕೂರಿನ ಕೊರಟಗೆರೆ ತಾಲ್ಲೂಕಿನಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬರುತ್ತಿದೆ. ಕೊರಟಗೆರೆ ತಾಲ್ಲೂಕಿನ ಜೋನಿಗರಹಳ್ಳಿ ಗ್ರಾಮದ ರೈ ರಂಗನಾಥ್ ಅವರ ತೋಟದಲ್ಲಿದ್ದ 364 ಅಡಿಕೆ ಮರಗಳ ಅಡಿಕೆಯನ್ನು ವ್ಯಾಪಾರಿಯೊಬ್ಬರು ₹ 6.10 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಲೆಕ್ಕ ಮಾಡಿದರೆ ಒಂದು ಮರದ ಇಳುವರಿಗೆ ₹ 1,768 ಸಿಕ್ಕಂತೆ ಆಗಿದೆ. ಬೋರಯ್ಯನಹಳ್ಳಿಯ ಸಿದ್ದಪ್ಪ ಅವರ 400 ಮರಗಳ ತೋಟವು ₹ 5.10 ಲಕ್ಷಕ್ಕೆ ಮಾರಾಟವಾಗಿದೆ.
ಪ್ರಸ್ತುತ ಒಂದು ಕ್ವಿಂಟಲ್ ಅಡಿಕೆ ಧಾರಣೆಯು ₹ 48 ಸಾವಿರ ಆಸುಪಾಸಿನಲ್ಲಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ಚೇಣಿದಾರರಲ್ಲಿದೆ. ಈಗಿರುವಷ್ಟೇ ಮಟ್ಟದಲ್ಲಿ ಉಳಿದರೂ ವ್ಯಾಪಾರಿಗಳಿಗೆ ಲಾಭವೇ ಆಗುತ್ತದೆ. ಪ್ರತಿ ವರ್ಷ ಹೊಂಬಾಳೆ ಮೂಡಿದ ನಂತರ ತೋಟವನ್ನು ಚೇಣಿಗೆ ಕೇಳುತ್ತಿದ್ದವರು, ಈ ಬಾರಿ ಹೊಂಬಾಳೆಗೆ ಮೊದಲೇ ತೋಟಗಳನ್ನು ಗುತ್ತಿಗೆಗೆ ಪಡೆಯುತ್ತಿರುವುದು ಹೊಸ ವಿದ್ಯಮಾನ ಎನಿಸಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದು, ಈ ವರ್ಷದ ಇಳುವರಿಯೂ ಚೆನ್ನಾಗಿ ಬರಬಹುದು ಎಂಬ ನಿರೀಕ್ಷೆ ರೈತರು ಮತ್ತು ವ್ಯಾಪಾರಿಗಳಲ್ಲಿದೆ.
‘ಬೆಲೆ ಕುಸಿದಿದ್ದಾಗ ವ್ಯಾಪಾರಿಗಳು ತೋಟದ ಕಡೆಗೆ ಸುಳಿಯುವುದೇ ಇಲ್ಲ. ಅಂಥ ಸಂದರ್ಭದಲ್ಲಿ ನಾವೇ ವ್ಯಾಪಾರಿಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ರೈತರ ಪರವಾಗಿದೆ. ರೈತರು ಹೇಳಿದ ಬೆಲೆ ಕೊಟ್ಟು ಚೇಣಿಗೆ ತೆಗೆದುಕೊಳ್ಳುತ್ತಿದ್ದಾರೆ’ ಎಂದು ತೋವಿನಕೆರೆಯ ರೈತ ಪದ್ಮರಾಜು ಪ್ರತಿಕ್ರಿಯಿಸಿದರು.
ಹುಣಸೆ ಬೆಲೆ ಕುಸಿತ
ಅಡಿಕೆಗೆ ವರವಾಗಿರುವ ಮಳೆಯು ಹುಣಸೆ ಪಾಲಿಗೆ ಶಾಪ ಎನಿಸಿದೆ. ಒಣಭೂಮಿಯ ಬಂಗಾರದ ಬೆಳೆ ಎನಿಸಿದ ಹುಣಸೆಯನ್ನು ತುಮಕೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆದಿದ್ದಾರೆ. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಹುಣಸೆ ಕೊಯ್ಲಾದ ಮೇಲೆ ಒಣಹವೆ ಇದ್ದರೆ ಮಾತ್ರ ರೈತರಿಗೆ ಲಾಭ. ತೇವಾಂಶ ಹೆಚ್ಚಾದರೆ ಹುಣಸೆ ಮೃದುವಾಗುತ್ತದೆ. ಹುಳಿ ಅಂಶ ಮತ್ತು ಬಣ್ಣ ಏರುಪೇರಾಗುವ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತದೆ. ಈ ವರ್ಷವಂತೂ ಹುಣಸೆಗೆ ಉತ್ತಮ ಬೆಲೆ ಕನಸಿನ ಮಾತು ಎಂದು ರೈತರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಅಡಿಕೆ ನಿಷೇಧ ಮಾಡದಂತೆ ಕೇಂದ್ರಕ್ಕೆ ಮನವಿ; ಅಡಿಕೆ ಬೆಳೆಗಾರರಿಗೆ ಸಮಾಧಾನಕರ ಸುದ್ದಿ ಕೊಟ್ಟ ಆರಗ ಜ್ಞಾನೇಂದ್ರ
ಇದನ್ನೂ ಓದಿ: ಅಡಿಕೆ ರಂಗದಲ್ಲಿ ಬದಲಾವಣೆಯ ಹವಾ ಫೈಬರ್ ದೋಟಿ
Published On - 6:27 am, Mon, 18 April 22