ಅಡಿಕೆ ರಂಗದಲ್ಲಿ ಬದಲಾವಣೆಯ ಹವಾ ಫೈಬರ್ ದೋಟಿ
ಉತ್ತರ ಕನ್ನಡ ಜಿಲ್ಲೆಯ ತ್ಯಾಗಲಿ ಸೊಸೈಟಿಯ ತರಬೇತಿ ತುಂಬು ಯಶಸ್ವಿ. ಸ್ಥಳೀಯ ಯುವಕರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿತ್ತು. ತರಬೇತಿ ಪಡೆದ ಶಿಬಿರರ‍್ಥಿಗಳು ಹಿರಿಯರೊಂದಿಗೆ ಕೆಲಸ ಮಾಡುತ್ತಾ ಜಾಣ್ಮೆಯನ್ನು ಕಲಿತುಕೊಳ್ಳುತ್ತಾರೆ.
“ನನ್ನ ಕಣ್ಣ ಮುಂದೆಯೇ ಯುವಕರು ಮರದಿಂದ ಬಿದ್ದು, ಮತ್ತೆ ದುಡಿಯಲಾಗದೆ, ಬದುಕಿಗಾಗಿ ಒದ್ದಾಡುತ್ತಿರುವುದನ್ನು ನೋಡಲಾಗದೆ ನೆಲದಿಂದಲೇ ಅಡಿಕೆ ಮರದ ಕೆಲಸಗಳನ್ನು ಮಾಡಬಹುದಾದ ಫೈಬರ್ ದೋಟಿಯತ್ತ ಮನ ಮಾಡಿದೆ. ನನ್ನ ಸ್ನೇಹಿತರೂ ಕೂಡಾ ದೋಟಿಗೆ ಬದಲಾದರು. ಇದರಿಂದ ಜೀವ ಹಾನಿಯಿಲ್ಲ.” ತುಂಬಾ ಮರ‍್ಮಿಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡವರು ಉತ್ತರ ಕನ್ನಡ ಜಿಲ್ಲೆಯ ಮೂರೂರು ಕಲ್ಲಬ್ಬೆಯ ಆರ್.ಜಿ.ಭಟ್. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಿ.ಪಿ.ಸಿ.ಆರ್.ಐ. ಆವರಣದಲ್ಲಿ ಜರುಗಿದ ‘ಅಡಿಕೆ ಕೌಶಲ್ಯ ಶಿಬಿರ’ದಲ್ಲಿ ತಮ್ಮ ತಂಡದೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹತ್ತೊಂಭತ್ತು ಮಂದಿ ಶಿಬಿರರ‍್ಥಿಗಳಿಗೆ ಶಿಕ್ಷಣ ನೀಡಿದ್ದರು. ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆಯ ನೇತೃತ್ವ. ಅಡಿಕೆ ಪತ್ರಿಕೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಸಿ.ಪಿ.ಸಿ.ಆರ್.ಐ. ಹೆಗಲೆಣೆ.
ಅಡಿಕೆ ಕೃಷಿಯಲ್ಲಿ ಮರವನ್ನು ಏರಿ ಮಾಡುವ ಕೆಲಸಗಳು ತನುಶ್ರಮದ್ದು. ಅಡಿಕೆಯ ಮಹಾಳಿ ರೋಗ ನಿಯಂತ್ರಣಕ್ಕೆ ‘ಬರ‍್ಡೋ ದ್ರಾವಣ’ ಸಿಂಪಡಣೆ, ಅಡಿಕೆ ಕೊಯಿಲು ಕೆಲಸಗಳನ್ನು ಮರ ಏರಿಯೇ ಮಾಡುವುದು ಪಾರಂಪರಿಕ. ಹಿರಿಯರು ಈ ರಂಗದಲ್ಲಿ ತುಂಬಾ ಜಾಣ್ಮೆಯ ಅನುಭವ ಹೊಂದಿದ್ದರು. ಬದಲಾದ ಕಾಲಘಟ್ಟದಲ್ಲಿ ಮರ ಏರದೇ ನೆಲದಿಂದಲೇ ಈ ಕೆಲಸಗಳನ್ನು ಮಾಡಲು ಬಂದಿದೆ, ಕರ‍್ಬನ್ ಫೈಬರ್ ದೋಟಿ. ಈಗ ಮರ ಏರುವ ರಿಸ್ಕ್ ಇಲ್ಲ! ಎಲ್ಲವೂ ನೆಲದಿಂದಲೇ! ಏನಿದರ ವಿಶೇಷ? ಕರ‍್ಬನ್ ಫೈಬರಿನಿಂದ ತಯಾರಿಸಿದ ದೋಟಿಯು ರೇಡಿಯೋ ಏರಿಯಲ್ ಹೋಲುತ್ತದೆ. ಒಂದರೊಳಗೊಂದು ತೂರಿಸುವಂತೆ ರಚನೆ. ಎಪ್ಪತ್ತರಿಂದ ಎಂಭತ್ತು ಅಡಿ ವರೆಗೆ ದೋಟಿಯ ಮೂಲಕ ಮರದ ಕೆಲಸಗಳನ್ನು ಪೂರೈಸಬಹುದು. ಜೀವ ಹಾನಿಯಿಲ್ಲ. ಕಲಿಯುವ ಹಂತದಲ್ಲಿ ತೊಡಕುಗಳು, ಕುತ್ತಿಗೆ ನೋವು ಕಂಡು ಬಂದರೂ ಮುಂದೆ ಅಭ್ಯಾಸದಲ್ಲಿ ಅವೆಲ್ಲಾ ಸರಿಹೋಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಮೂರೂರು ಕಲ್ಲಬ್ಬೆಯ ಕೃಷಿಕರು ಮರ ಏರುವ ಬದಲು ನೆಲದಿಂದಲೇ ಮರ ಕೆಲಸಗಳನ್ನು ಮಾಡಬಹುದಾದ ದೋಟಿಗೆ ಬದಲಾಗಿದ್ದರು. ಈ ವಿಚಾರದ ಬೆನ್ನೇರಿ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆಯವರು ಕಲ್ಲಬ್ಬೆಗೆ ಧಾವಿಸಿದರು. “ದಶಂಬರದ ಹೊತ್ತಿಗೆ ಐವತ್ತಕ್ಕೂ ಮಿಕ್ಕಿ ಕೃಷಿಕರಲ್ಲಿ ದೋಟಿಯಿತ್ತು. ಈಗಂತೂ ನೂರು ದಾಟಿರಬಹುದು.” ಎನ್ನುತ್ತಾರೆ. ಕಲ್ಲಬ್ಬೆಯ ದೋಟಿ ಯಶೋಗಾಥೆಯು ಕೃಷಿಕ ಮಾಸಿಕ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಯಿತು. ಆ ಬಳಿಕ ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ‘ದೋಟಿ ಅಭಿಯಾನ’ ಶುರುವಾಯಿತು. ಜಿಲ್ಲೆಯ ಸಹಕಾರಿ ಸಂಘಗಳು ತಮ್ಮೂರಿನ ‘ಕೊನೆಗಾರ’ರಿಗೆ ದೋಟಿ ಮೂಲಕ ಅಡಿಕೆ ಕೊಯ್ಲು ಮಾಡುವ ವಿಧಾನವನ್ನು ತರಬೇತಿ, ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟುವು.
ಶಿಬಿರದಲ್ಲಿ ಫೈಬರ್ ದೋಟಿಯನ್ನು ಎತ್ತರಕ್ಕೆ ಏರಿಸುವ, ಅದನ್ನು ಬ್ಯಾಲೆನ್ಸ್ ಮಾಡಿ ಹಿಡಿದುಕೊಳ್ಳುವ, ಹಿಡಿದುಕೊಂಡು ಮರದಿಂದ ಮರಕ್ಕೆ ಅಡ್ಡಾಡುವ, ಅಡಿಕೆ ಗೊನೆಯ ಯಾವ ಭಾಗದಲ್ಲಿ ದೋಟಿಯ ಕತ್ತಿಯನ್ನು ಹಾಕಬೇಕೆನ್ನುವ, ಬೀಳುವ ಅಡಿಕೆ ಗೊನೆಯಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆನ್ನುವ, ದೋಟಿಯ ಬುಡದ ಭಾಗಕ್ಕೆ ಕಾಲನ್ನು ಹೇಗೆ ಆಸರೆಯಾಗಿಸಬೇಕೆನ್ನುವ ಸೂಕ್ಷ್ಮ ವಿಚಾರಗಳನ್ನು ಅನುಭವಿ ಶಿಕ್ಷಕರು ಶಿಬಿರದಲ್ಲಿ ಹೇಳಿಕೊಟ್ಟಿರುತ್ತಾರೆ. ಶಿಕ್ಷಕರು ಹೇಳಿಕೊಟ್ಟ ವಿದ್ಯೆಯು ಸ್ವ-ಅನುಭವದಿಂದಲೇ ರೂಢಿತಗೊಳ್ಳಬೇಕು.
ಉತ್ತರ ಕನ್ನಡ ಜಿಲ್ಲೆಯ ತ್ಯಾಗಲಿ ಸೊಸೈಟಿಯ ತರಬೇತಿ ತುಂಬು ಯಶಸ್ವಿ. ಸ್ಥಳೀಯ ಯುವಕರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿತ್ತು. ತರಬೇತಿ ಪಡೆದ ಶಿಬಿರರ‍್ಥಿಗಳು ಹಿರಿಯರೊಂದಿಗೆ ಕೆಲಸ ಮಾಡುತ್ತಾ ಜಾಣ್ಮೆಯನ್ನು ಕಲಿತುಕೊಳ್ಳುತ್ತಾರೆ. ಇಂತಹ ತಂಡಗಳನ್ನು ಸೊಸೈಟಿಯೇ ನರ‍್ವಹಿಸುತ್ತಿದೆ. ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆಯವರ ದೂರದೃಷ್ಟಿ. ಉಳಿದೆಲ್ಲಾ ಸಹಕಾರ ಸಂಘಗಳಿಗೆ ‘ನೀವೂ ತರಬೇತಿ ನೀಡಿ ತಂಡವನ್ನು ರೂಪುಗೊಳಿಸಿ’ ಎನ್ನುವ ಸಲಹೆ ನೀಡುತ್ತಾರೆ.
ಇದೇ ಜಿಲ್ಲೆಯ ನೆಗ್ಗು ಪಂಚಾಯತ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕೃಷಿ ಕೆಲಸಗಳಿಗಾಗಿ ‘ಜಾಬ್‌ರ‍್ಕ್’ ತಂಡವನ್ನು ಕಟ್ಟಿದೆ. ಫೈಬರ್ ದೋಟಿ ಮೂಲಕ ಅಡಿಕೆ ಮರದ ಕೆಲಸಗಳಲ್ಲದೆ, ಸಲಕರಣೆಯ ಮೂಲಕ ತೆಂಗಿನ ಮರ ಏರುವುದು, ತೋಟದ ಕಳೆ ಕತ್ತರಿಸುವುದು, ಕರಡ ಕತ್ತರಿಸುವುದು, ಮರ ಏರಿ ಗೆಲ್ಲು ತುಂಡರಿಸುವುದು.. ಮೊದಲಾದ ಕೆಲಸಗಳಲ್ಲಿ ಈ ತಂಡ ನಿಷ್ಣಾತ. ವಿಟ್ಲ ಸಿ.ಪಿ.ಸಿ.ಆರ್.ಐ. ಶಿಬಿರದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ದೋಟಿ ಹವಾ’ ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ಇಲ್ಲಿನ ಪುಣಚ, ಕಡಬ, ಕೋಡಪದವು ಸಹಕಾರಿ ಸಂಘಗಳು ಒಂದು ದಿವಸದ ತರಬೇತಿ ನಡೆಸಿದರೆ, ವಿಟ್ಲದ ತೋಟಗಾರಿಕಾ ರೈತ ಉತ್ಪಾಕದ ಕಂಪೆನಿ ‘ಪಿಂಗಾರ’ ಸಂಸ್ಥೆಯು ‘ತಂಡ ಕಟ್ಟುವ’ ಕನಸಿನಲ್ಲಿ ಮೂರು ದಿವಸದ ಶಿಬಿರವನ್ನು ರ‍್ಪಡಿಸಿತ್ತು. ಈಗಾಗಲೇ ಸುಮಾರು ಹತ್ತಕ್ಕೂ ಮಿಕ್ಕಿ ಸಹಕಾರಿ ಸಂಘಗಳು ತಮ್ಮೂರಿನ ಯುವಕರಿಗೆ ತರಬೇತಿ ನೀಡಲು ಮುಂದಾಗಿದೆ.
ತರಬೇತಿ ಶಿಬಿರಗಳು ನಡೆಯುತ್ತಿದ್ದಂತೆ ಯುವಕರ ಬೇಡಿಕೆ “ದೋಟಿಯನ್ನು ಖರೀದಿಸಲು ಸಹಕಾರಿ ಸಂಘಗಳು ಸಾಲವನ್ನು ನೀಡಬೇಕು.” ಕೆಲವು ಸಂಘಗಳು ಸ್ಪಂದಿಸಿವೆ. ಈಗಿನ ದರದಂತೆ ಒಂದು ಅಡಿಗೆ ಒಂದು ಸಾವಿರ ರೂಪಾಯಿ. ಎಪ್ಪತ್ತು, ಎಂಭತ್ತು ಅಡಿ ಎತ್ತರಕ್ಕೆ ಏರುವ ದೋಟಿಯ ಬೆಲೆಯನ್ನು ನೀವೇ ಲೆಕ್ಕಹಾಕಿ! ಇಷ್ಟೊಂದು ದುಬಾರಿ ಮೊತ್ತವನ್ನು ಭರಿಸುವ ಶಕ್ತಿ ಶ್ರಮಿಕರಿಗೆ ಇರುವುದಿಲ್ಲ. ಹಾಗಾಗಿ ಸಹಕಾರಿ ಸಂಘಗಳು ಕಡಿಮೆ ಬಡ್ಡಿಯ ಸಾಲದ ಮೂಲಕ ದೋಟಿ ಖರೀದಿಸಲು ನೆರವಾಗಬೇಕು. ನಾಲ್ಕೈದು ಮಂದಿ ಕೃಷಿಕರು ಒಟ್ಟಾಗಿ ದೋಟಿಯನ್ನು ಖರೀದಿಸಬಹುದು.
ವಿಟ್ಲದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರು ಒಂದು ಅಂಕಿ ಅಂಶ ನೀಡುತ್ತಾರೆ, “ಕೇರಳದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ಅರುವತ್ತು ಸಾವಿರ ಮಂದಿಗೆ ತರಬೇತಿ ನೀಡಿ ತೆಂಗು ಕೊಯ್ಲುಗಾರರನ್ನು ರೂಪಿಸಿದೆ. ನಮ್ಮಲ್ಲಿ ಅಡಿಕೆಗೆ ‘ಖುಷಿದರ’ ಇರುವಾಗ, ಸಹಕಾರಿ ಸಂಘಗಳು ಸುದೃಢವಾಗಿರುವಾಗ ನಾವ್ಯಾಕೆ ಮೀನಮೇಷ ಎಣಿಸುತ್ತೇವೆ.” ಈ ಚೋದ್ಯಕ್ಕೆ ಎಲ್ಲರ ಮೌನ. ಕಲ್ಲಬ್ಬೆಯ ಆರ್.ಜಿ.ಭಟ್ಟರ ಮಾತನ್ನು ಮತ್ತೊಮ್ಮೆ ನೆನಪಿಸುತ್ತಾ, “ಎಲ್ಲಕ್ಕಿಂತಲೂ ಜೀವ ಮುಖ್ಯ. ಅದು ಹಾನಿಯಾದರೆ ಅವನನ್ನೇ ನಂಬಿದ ಕುಟುಂಬದ ಸ್ಥಿತಿ? ಹಾಗಾಗಿ ಮರ ಏರುವ ರಿಸ್ಕ್ ಬೇಡ. ದೋಟಿಗೆ ಬದಲಾಗಿ. ಜೀವ ಹಾನಿಯನ್ನು ತಡೆಗಟ್ಟಿ’ ಎನ್ನುವ ಸಂದೇಶ ಸರ‍್ವಕಾಲಿಕವಾದುದು.
ನಾ. ಕಾರಂತ ಪೆರಾಜೆ
Published On - 5:34 pm, Mon, 28 February 22