ಯತ್ನಾಳ್ ಬಣ ಶಕ್ತಿ ಹೆಚ್ಚಿಸಿಕೊಳ್ಳೋ ಪ್ರಯತ್ನ ಯಶಸ್ವಿ: ರಾಜ್ಯಾಧ್ಯಕ್ಷ ಚುನಾವಣೆ ಲೆಕ್ಕಾಚಾರ
ಕಮಲ ದಂಗೆ ..ಕೇಸರಿ ಮನೆ ಕೊತಕೊತ.. ಬಿಜೆಪಿ ಮನೆಯಲ್ಲಿನ ಬಣ ಬಡಿದಾಟ ಕ್ಷಣಕ್ಷಣಕ್ಕೂ ಭುಗಿಲೇಳುತ್ತಲೇ ಇದೆ. ಪ್ರಾರಂಭದಲ್ಲಿ ಏಕಾಂಗಿಯಾಗಿ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಯತ್ನಾಳ್ ಬಣದ ಶಕ್ತಿ ಮತ್ತಷ್ಟು ಹೆಚ್ಚಾಗುತ್ತಿದೆ. ಬಿಜೆಪಿಯ ಹಿರಿಯ ನಾಯಕರೇ ಯುದ್ಧಕ್ಕೆ ಸಾಥ್ ಕೊಡುತ್ತಿದ್ದು, ವಿಜಯೇಂದ್ರ ವಿರುದ್ಧ ಒಬ್ಬೊಬ್ಬ ನಾಯಕರೇ ಧಂಗೆ ಏಳುತ್ತಿದ್ದಾರೆ. ಇದೀಗ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಏಕಪಕ್ಷೀಯ ನಿರ್ಧಾರಕ್ಕೆ ರೆಬೆಲ್ಸ್ ನಾಯಕರು ಸಮರ ಸಾರಿದ್ದಾರೆ. ಇದೀಗ ಸಾರಿರೋ ಯುದ್ಧ ಅಂತಿಂಥಾದ್ದು ಅಲ್ಲ, ಅದುವೇ DO OR DIE.

ಬೆಂಗಳೂರು, (ಜನವರಿ 31): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ರಾಜ್ಯದಲ್ಲಿ ಹೋರಾಟದ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಮ್ ಈಗ ದೆಹಲಿ ಮಟ್ಟಕ್ಕೆ ಅದನ್ನು ಒಯ್ಯಲು ನಿರ್ಧರಿಸಿದೆ. ಜಿಲ್ಲಾಧ್ಯಕ್ಷರ ನೇಮಕಾತಿ ಪಾರದರ್ಶಕವಾಗಿಲ್ಲ ಎಂದು ವರಿಷ್ಠರ ಗಮನಕ್ಕೆ ತರಲು ಮುಂದಾಗಿದೆ. ಹೌದು..ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಫರ್ಧೆ ಮಾಡುವ ವಿಚಾರದಲ್ಲಿ ಯತ್ನಾಳ್ ತಂಡ ಸನ್ನಿವೇಶವನ್ನು ಕಾದು ನೋಡಲು ನಿರ್ಧರಿಸಿದೆ. ವರಿಷ್ಠರ ತೀರ್ಮಾನಕ್ಕೆ ಎರಡು ದಿನಗಳ ಕಾಲ ಕಾದು ನಂತರ ದೆಹಲಿಗೆ ಹೋಗಿ ಅಲ್ಲಿ ಕೂಡಾ ಸಭೆ ನಡೆಸುವ ಬಗ್ಗೆ ಬೆಂಗಳೂರಿನಲ್ಲಿ ಇಂದು (ಜನವರಿ 31) ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರೋ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಯತ್ನಾಳ್ ಬಣ ಸಭೆ ಸೇರಿದ್ದು, ಸಭೆ ಮೂಲಕ ಮುಂದಿನ ಹೋರಾಟದ ಬಗ್ಗೆಯೂ ಚರ್ಚೆ ಮಾಡಲಾಯ್ತು. ಸಭೆಯಲ್ಲಿ ಶಾಸಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ, ಚಂದ್ರಪ್ಪ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ್, ಬಿ.ವಿ.ನಾಯಕ್ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ: ಆಂಧ್ರ ಕೋಟಾದಡಿ ರಾಜ್ಯಸಭೆ ಪ್ರವೇಶಿಸಲು ಶ್ರೀರಾಮುಲು ಪ್ಲಾನ್: ರೆಡ್ಡಿ ಜತೆಗಿನ ಮುನಿಸನ್ನೇ ಲಾಭವಾಗಿಸಿಕೊಳ್ಳಲು ತಂತ್ರ
ವಕ್ಪ್ ಆಸ್ತಿ ಹೋರಾಟದ ಮೂಲಕ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಪರೋಕ್ಷ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡ ಈಗ ನೇರ ಸಮರಕ್ಕೆ ಇಳಿದಿದೆ. ಪಕ್ಷದ ಜಿಲ್ಲಾಧ್ಯಕ್ಷರ ನೇಮಕಾತಿಯಲ್ಲಿ ಪಾರದರ್ಶಕ ನಿಯಮ ಅನುಸರಿಸಿಲ್ಲ ಎಂಬ ಆರೋಪ ಮಾಡಿರುವ ಯತ್ನಾಳ್ ಟೀಮ್, ಹೊಸ ಜಿಲ್ಲಾಧ್ಯಕ್ಷರ ನೇಮಕಾತಿಯನ್ನು ಒಪ್ಪದೇ ಇರಲು ತೀರ್ಮಾನಿಸಿದೆ. ಅಲ್ಲದೇ ತಾವು ರಾಜ್ಯಾಧ್ಯಕ್ಷರಾಗಲು ವಿಜಯೇಂದ್ರ ತಮ್ಮ ಆಪ್ತರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ತಂಡ ಆರೋಪಿಸಿದೆ.
ಈ ಮಧ್ಯ ತಮ್ಮ ತಂಡದ ಬಲ ವೃದ್ಧಿಸಿದೆ ಎಂದು ಯತ್ನಾಳ್ ಟೀಮ್ ಹೇಳಿಕೊಂಡಿದ್ದು, ಬಿಜೆಪಿಯಲ್ಲಿರುವ ಹಿರಿಯ ತಟಸ್ಥ ನಾಯಕರು ಕೂಡಾ ನಮ್ಮೊಂದಿಗೆ ಕೈ ಜೋಡಿಸಿದೆ ಎಂದು ಹೇಳಿಕೊಂಡಿದೆ. ಯತ್ನಾಳ್ ಬಣ ತನ್ನ ಶಕ್ತಿ ವೃದ್ಧಿಸಿಕೊಂಡು ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧೆಯ ಲೆಕ್ಕಾಚಾರ ಮಾಡಿಕೊಂಡಿತ್ತು. ಅದರಂತೆಯೇ ತನ್ನ ಬಣದ ನಾಯಕರನ್ನ ಹಿಡಿತದಲ್ಲಿಟ್ಟುಕೊಂಡಿದ್ರು. ಆದ್ರೆ ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯೋ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಚುನಾವಣೆಗೆ ಸ್ಪರ್ಧೆ ಮಾಡ್ತೀವಿ ಅನ್ನೋದಕ್ಕೆ ಸ್ವಲ್ಪ ಹಿನ್ನಡೆ ಆದಂತಿದೆ. ಈ ಕಾರಣದಿಂದಾಗಿ 2ರಿಂದ 3 ದಿನ ಟೈಂ ತೆಗೆದುಕೊಂಡು ನಿರ್ಧಾರ ಅಂತಿದ್ದಾರೆ. ನವದೆಹಲಿಗೆ ಹೋಗಿ ಸಭೆ ಮಾಡೋ ನಿರ್ಧಾರ ಕೂಡ ಮಾಡಿದ್ದಾರೆ.
ಒಟ್ಟಾರೆಯಾಗಿ ಒಂದೆರಡು ದಿನಗಳಲ್ಲಿ ದೆಹಲಿಗೆ ಹೋಗಲಿರುವ ಯತ್ನಾಳ್ ಟೀಮ್ ಅಲ್ಲಿ ಸಂಸದರ ಬಲವನ್ನೂ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ವೇಳೆಗೆ ಸನ್ನಿವೇಶ ಇನ್ನಷ್ಟು ಕುತೂಹಲಕ್ಕೆ ತಿರುಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ