ಪ್ರೊ ಕಬಡ್ಡಿಯಲ್ಲಿ ತುಳುನಾಡ ಕುವರನ ಪ್ರತಾಪ
ಸಾಧನೆಯ ಮೆಟ್ಟಿಲನ್ನು ಏರುತ್ತಿರುವ ಓರ್ವ ಉದಯೋನ್ಮುಖ ಪ್ರತಿಭೆ ಸಚಿನ್ ಪ್ರತಾಪ್. ಕಬಡ್ಡಿ ಕಬಡ್ಡಿ ಅನ್ನುತ್ತಾ ಎದುರಾಳಿಯ ಎದೆಯಲ್ಲಿ ಭಯವನ್ನು ಹುಟ್ಟಿಸಿ ಕಣಕಿಳಿದು ಆಡುವ ಅಬ್ಬರವನ್ನು ನೋಡೋದೇ ಒಂದು ಚಂದ.
ಸಾಧಿಸುವ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಅದರಂತೆಯೇ ಬಾಲ್ಯದಲ್ಲಿಯೇ ದೊರೆತ ಅವಕಾಶವನ್ನು ಕಡೆಗಣಿಸದೆ ತಮ್ಮ ಪರಿಶ್ರಮದ ಮೂಲಕ ಇಂದು ಸಾಧನೆಯ ಮೆಟ್ಟಿಲನ್ನು ಏರುತ್ತಿರುವ ಓರ್ವ ಉದಯೋನ್ಮುಖ ಪ್ರತಿಭೆ ಸಚಿನ್ ಪ್ರತಾಪ್. ಕಬಡ್ಡಿ ಕಬಡ್ಡಿ ಅನ್ನುತ್ತಾ ಎದುರಾಳಿಯ ಎದೆಯಲ್ಲಿ ಭಯವನ್ನು ಹುಟ್ಟಿಸಿ ಕಣಕಿಳಿದು ಆಡುವ ಅಬ್ಬರವನ್ನು ನೋಡೋದೇ ಒಂದು ಚಂದ. ಈ ಬಾರಿಯ 8 ನೇ ಆವೃತ್ತಿಯ ಪ್ರೊ ಕಬಡ್ಡಿಯ ಯು ಮುಂಬಾ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಇವರು ತುಳುನಾಡ ಹೆಮ್ಮೆಯ ಪ್ರತಿಭೆ.
ಮೂಲತಃ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿಗಳಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಗಳ ಸುಪುತ್ರ. ಬಾಲ್ಯದಿಂದಲೇ ಕ್ರೀಡಾಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ಕ್ರೀಡೆಯಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಸಚಿನ್ ಪ್ರತಾಪ್ ಸುಮಾರು 68 ಕ್ಕೂ ಅಧಿಕ ರಾಷ್ಟ್ರಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ ಭಾಗವಹಿಸಿರುವ ಸಚಿನ್ ಪ್ರತಾಪ್ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಎಲ್ಲರ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ . ಆ ಪಂದ್ಯಾವಳಿಯಲ್ಲಿ ತಮ್ಮ ಅದ್ವಿತೀಯ ಪ್ರದರ್ಶನದಿಂದ ಅತ್ತ್ಯುತ್ತಮ ರೈಡರ್ ಎನಿಸಿಕೊಂಡಿದ್ದರು. ಇದರಿಂದಾಗಿ ಸಚಿನ್ ಪ್ರತಾಪ್ ರವರ ಆಟದ ವೈಖರಿ ಭಾರತ ತಂಡಕ್ಕೂ ಆಯ್ಕೆಯಾಗುವಂತೆ ಮಾಡಿದೆ. ಅದೃಷ್ಟವೆಂಬಂತೆ ಪ್ರೊ ಕಬಡ್ಡಿ ಹರಾಜು ಬಿಡ್ಡಿಂಗ್ ನಲ್ಲಿಯೂ ಮುಂಬಾ ತಂಡಕ್ಕೆ ಖರೀದಿ ಆಗಿದ್ದು , ತಂಡವನ್ನು ಪ್ರತಿನಿಧಿಸಲು ಆಯ್ಕೆಯಾದ ಈ ತುಳುನಾಡ ಕುವರನ ಸಾಧನೆ ಅಭೂತಪೂರ್ವ.
ಸಚಿನ್ ಪ್ರತಾಪ್ ರಾಜ್ಯಮಟ್ಟದ ಸೀನಿಯರ್ ಕಬಡ್ಡಿಯಲ್ಲಿಯೂ ಕರ್ನಾಟಕದಿಂದ ಗುರುತಿಸಿಕೊಂಡಿದ್ದರು . ಅವರ ಈ ಸಾಧನೆಯ ಹಾದಿಯನ್ನು ಕಂಡು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಬಾಲ್ಯದಲ್ಲಿ ಸಚಿನ್ ಪ್ರತಾಪ್ ರವರಿಗೆ ಖೋಖೋ ಆಟದಲ್ಲಿ ಆಸಕ್ತಿ ಇತ್ತು. ನಂತರದಲ್ಲಿ ಕಬಡ್ಡಿಯಲ್ಲಿ ಹೆಚ್ಚಿನ ಒಲವು ಮೂಡಿಸಿತ್ತು, ಈ ಕಾರಣಕ್ಕೆ ಅವರನ್ನು ಅದರಲ್ಲಿಯೇ ಮುಂದುವರಿಯುವಂತೆ ಮಾಡಿತ್ತು. ಎಸ್. ಡಿ. ಎಂ ಕಾಲೇಜಿನಲ್ಲಿ ಇವರ ಕ್ರೀಡಾಸಕ್ತಿಗೆ ಉತ್ತಮ ಪ್ರೋತ್ಸಾಹ ದೊರಕಿತು. ಹೆತ್ತವರು , ದೈಹಿಕ ಶಿಕ್ಷಕರಾದ ಹರ್ಷಿತ್ ಬೆಂಗಮಲೆ , ಕೃಷ್ಣಾನಂದ, ವೀರನಾಥ ಮತ್ತು ಕುಮಾರ್ ಇವರುಗಳು ಸಚಿನ್ ಪ್ರತಾಪ್ ರವರಿಗೆ ಬೆಂಬಲ ನೀಡಿದ ಕಾರಣ, ಇಂದು ಒಬ್ಬ ಉತ್ತಮ ಕಬಡ್ಡಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ರಾಜ್ಯ ಮತ್ತು ರಾಷ್ಟೀಯ ಮಟ್ಟದ ಹಲವಾರು ಟೂರ್ನಿಗಳಲ್ಲಿ ಭಾಗವಹಿಸಿ ಯಶಸ್ಸುಗಳ ಸುರಿಮಳೆಯನ್ನು ತಮ್ಮ ತಂಡಕ್ಕೆ ತಂದುಕೊಟ್ಟಿದ್ದಾರೆ.
ಇಂದು ಐಪಿಎಲ್ ಕ್ರಿಕೆಟ್ ನಂತೆಯೇ, ಪ್ರೊ ಕಬಡ್ಡಿಯು ಕೂಡ ತನ್ನದೇ ಆದ ಹೊಸ ಛಾಪನ್ನು ಮೂಡಿಸಿದೆ . ಈ ಕಬಡ್ಡಿಯು ಅಪ್ಪಟ ಗ್ರಾಮೀಣ ಆಟವಾಗಿದ್ದರು ಇಂದು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ. ಅದ್ಭುತ ಪ್ರತಿಭೆಯಾದ ಸಚಿನ್ ಪ್ರತಾಪ್ ರವರು ಇಂದು ಪ್ರೊ ಕಬಡ್ಡಿ ಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿ. ಕನಸುಗಳ ಬೆನ್ನೆರಿ ಹೊರಟ ತುಳುನಾಡ ಕುವರ ಜಯಶೀಲರಾಗಲಿ ಎಂಬುದು ಆಶಯ .
“ಸತತ ಪ್ರಯತ್ನ ಮತ್ತು ಪರಿಶ್ರಮವಿದ್ದರೆ ಯಾವುದೇ ಕೆಲಸವೂ ಅಸಾಧ್ಯವಲ್ಲ . ನಾವು ಮಾಡೋ ಕೆಲಸ ವನ್ನು ಶ್ರದ್ಧೆಯಿಂದ ಗಮನವಿಟ್ಟು ಮಾಡಿದರೆ ಗೆಲುವು ಖಚಿತ” – ಸಚಿನ್ ಪ್ರತಾಪ್
ನೀತಾ ರವೀಂದ್ರ
ವಿವೇಕಾನಂದ ಕಾಲೇಜ್ ಪುತ್ತೂರು