IND vs SL T20: ಇಂದು ಭಾರತ–ಶ್ರೀಲಂಕಾ ಮೊದಲ ಟಿ20: ಗೆಲುವಿನ ಓಟ ಮುಂದುವರೆಸುತ್ತಾ ರೋಹಿತ್ ಪಡೆ?
India vs Sri Lanka 1st T20I: ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಮತ್ತು ಟಿ20 ಸರಣಿಯಲ್ಲಿ ಕ್ಲೀಸ್ಸ್ವೀಪ್ ಮಾಡಿದ್ದ ಭಾರತ ತಂಡ ಇದೀಗ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಪೈಕಿ ಇಂದು ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ.
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಯುಗ ಆರಂಭವಾದಾಗಿನಿಂದ ಕೇವಲ ಗೆಲುವನ್ನೇ ಕಾಣುತ್ತಿರುವ ಭಾರತ ಇದೀಗ ಮತ್ತೊಂದು ಸರಣಿಗೆ ಸಜ್ಜಾಗಿ ನಿಂತಿದೆ. ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಮತ್ತು ಟಿ20 ಸರಣಿಯಲ್ಲಿ ಕ್ಲೀಸ್ಸ್ವೀಪ್ ಮಾಡಿದ್ದ ಭಾರತ ತಂಡ ಇದೀಗ ಶ್ರೀಲಂಕಾ (India vs Sri Lanka) ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಪೈಕಿ ಇಂದು ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಕೆರಿಬಿಯನ್ನರನ್ನು ಬಗ್ಗು ಬಡಿದ ಭಾರತಕ್ಕೆ ಸಿಂಹಳೀಯರು ದೊಡ್ಡ ಸವಾಲು ಅಲ್ಲದಿದ್ದರೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಕಾರಣ ಈ ಸರಣಿ ಕುತೂಹಲ ಕೆರಳಿಸಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ರಿಷಭ್ ಪಂತ್, ದೀಪಕ್ ಚಹರ್, ಸೂರ್ಯಕುಮಾರ್ ಅವರಂತಹ ಸ್ಟಾರ್ ಆಟಗಾರರು ಈ ಸರಣಿಯಿಂದ ಹೊರಬಿದ್ದಿದ್ದಾರೆ.
ಇದರ ನಡುವೆ ಈ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸಿದ್ಧತೆಯ ಭಾಗವಾಗಿ ಪ್ರಯೋಗ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ ಲಭಿಸಿದೆ. ಇಂದಿನ ಪಂದ್ಯದಲ್ಲಿ ಕೆಲವು ಹೊಸಪ್ರತಿಭೆಗಳನ್ನು ಕಣಕ್ಕಿಳಿಸಲು ರೋಹಿತ್ ಪಡೆಯು ಸಿದ್ಧವಾಗಿದೆ. ಅಲ್ಲದೆ ಅನೇಕ ಸಮಯದ ಬಳಿಕ ಕೆಲ ಆಟಗಾರರು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡದೆ.
ಜಡೇಜಾ ಕಮ್‌ಬ್ಯಾಕ್:
2021ರ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ರವೀಂದ್ರ ಜಡೇಜಾ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಶ್ರೀಲಂಕಾ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ಮರಳಿದ್ದಾರೆ. ಜಡೇಜಾ ಅವರು ಗಾಯಗೊಂಡಿದ್ದರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿ ಹಾಗೂ ಸ್ವದೇಶದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಹಾಗೂ ಚುಟುಕು ಸರಣಿಯಿಂದ ಹೊರಗುಳಿದಿದ್ದರು. ಇದೀಗ ಆಲ್‌ರೌಂಡರ್ ಜಡೇಜಾ ಕಮ್‌ಬ್ಯಾಕ್ ಮಾಡಿದ್ದು ಎರಡು ತಿಂಗಳ ಬಳಿಕ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. “ಭಾರತ ತಂಡಕ್ಕೆ ಮರಳಿರುವುದು ನಿಜಕ್ಕೂ ಉತ್ತಮವಾದ ಅನುಭವ ನೀಡುತ್ತದೆ. ನಾನು ನಿಜಕ್ಕೂ ಕೂಡ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ” ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ಸ್ಟಾರ್ ಆಟಗಾರರು ಅಲಭ್ಯ:
ಮಧ್ಯಮಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಾಹರ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ವಿರಾಟ್ ಕೊಹ್ಲಿ, ರಿಷಭ್ ಪಂತ್ ಕೂಡ ವಿಶ್ರಾಂತಿ ಪಡೆದಿದ್ದಾರೆ. ಕೆ.ಎಲ್. ರಾಹುಲ್ ಕೂಡ ತಂಡದಲ್ಲಿಲ್ಲ. ಹೀಗಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಲಿದೆ. ಬೌಲರ್ಗಳ ಮೇಲೆ ಸಾಕಷ್ಟು ಒತ್ತಡವಿದೆ. ಇದರಿಂದಾಗಿ ಯುವಪ್ರತಿಭೆಗಳಿಗೆ ಹೆಚ್ಚು ಅವಕಾಶಗಳು ಲಭಿಸುವ ಸಾಧ್ಯತೆ ಕೂಡ ಇದೆ.
ಲಂಕಾ ಪಡೆ:
ಇತ್ತ ಶ್ರೀಲಂಕಾ ತಂಡದಲ್ಲಿ ಅನುಭವಿಗಳ ಕೊರತೆ ಇದೆ. ಲಂಕಾ ತಂಡವು 1-4ರಿಂದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಸೋತು ಇಲ್ಲಿಗೆ ಬಂದಿದೆ. ಅಲ್ಲದೆ ತಂಡದ ಪ್ರಮುಖ ಆಟಗಾರ ವನಿಂದು ಹಸರಂಗ ಕೋವಿಡ್‌ನಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಟಿ20 ಸರಣಿಗೆ ಅಲಭ್ಯವಾಗಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರು ಪಂದ್ಯಗಳಲ್ಲಿ ಹಸರಂಗ ಆಡಿರಲಿಲ್ಲ. ಶ್ರೀಲಂಕಾ ಸ್ಕ್ವಾಡ್ ಕಳೆದ ಮಂಗಳವಾರ ಭಾರತಕ್ಕೆ ಆಗಮಿಸಿದ್ದರೂ ಹಸರಂಗ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಕ್ವಾರಂಟೈನ್‌ನಲ್ಲಿ ಪೂರೈಸುತ್ತಿದ್ದಾರೆ. ನೆಗೆಟಿವ್ ವರದಿ ಬರುವವರೆಗೆ ಹಸರಂಗ ಕ್ಯಾನ್‌ಬೆರಾದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ. ಶ್ರೀಲಂಕಾ ತಂಡವನ್ನು ನಾಯಕನಾಗಿ ದಾಸುನ್ ಶನಕಾ ಮುನ್ನಡೆಸುತ್ತಿದ್ದಾರೆ.
ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್ ಮತ್ತು ಅವೇಶ್ ಖಾನ್.
ಟಿ20 ಸರಣಿಗೆ ಶ್ರೀಲಂಕಾ ತಂಡ: ದಸೂನ್ ಶನಕ (ನಾಯಕ), ಪಥುಮ್ ನಿಸಾಂಕ ಕುಸಾಲ್ ಮೆಂಡಿಸ್, ಚರಿತಾ ಅಸಲಂಕಾ (ಉಪ ನಾಯಕ), ದಿನೆಶ್ ಚಂಡಿಮಾಲ್, ದನುಷ್ಕ ಗುಣತಿಲಕೆ, ಕಮಿಲ್ ಮಿಶ್ರಾ, ಜನಿಥ್ ಲಿಯಾಂಗೆ, ಚಮಿಕಾ ಕರುಣರತ್ನೆ, ದುಷ್ಮಾಂತ ಚಮೀರ, ಲಹಿರು ಕುಮಾರ, ಬಿನುರಾ ಫೆರ್ನಾಂಡೊ, ಶಿರನ್ ಫೆರ್ನಾಂಡೊ, ಮಹೀಶ ತೀಕ್ಷಣ, ಜೆಫ್ರೆ ವ್ಯಾಂಡೆರ್ಸೆ, ಪ್ರವೀಣ್ ಜಯವಿಕ್ರಮ.
IND vs SL: ಭಾರತ ಪ್ರವಾಸದಿಂದ ಸ್ಟಾರ್ ಆಟಗಾರನಿಗೆ ಕೋಕ್; ಮಂಡಳಿ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಿದ ಫ್ಯಾನ್ಸ್