Rohit Sharma: ರೋಹಿತ್ ಶರ್ಮಾ ವಿಶ್ವ ದಾಖಲೆಗೆ ಸಾಕ್ಷಿಯಾಗಲಿದೆ ಶ್ರೀಲಂಕಾ ವಿರುದ್ಧದ ಟಿ20 ಸರಣಿ
IND vs SL 1st T20: ಭಾರತ ತಂಡದ ನಾಯಕ ರೋಹಿತ್ ಶರ್ಮ ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭಗೊಳ್ಳಲಿರುವ ಟಿ20 ಸರಣಿಯಲ್ಲಿ ಎರಡು ಸಾರ್ವಕಾಲಿಕ ದಾಖಲೆ ಮಾಡುವ ಅವಕಾಶ ಹೊಂದಿದ್ದಾರೆ.
ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಭಾರತ ತಂಡ (Team India) ಇದೀಗ ಮತ್ತೊಂದು ಮಹತ್ವದ ಸರಣಿಗೆ ಸಜ್ಜಾಗಿ ನಿಂತಿದೆ. ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಮತ್ತು ಟಿ20 ಸರಣಿಯಲ್ಲಿ ಕ್ಲೀಸ್ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ (India vs Sri Lanka) ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಪೈಕಿ ಇಂದು ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಕೆರಿಬಿಯನ್ನರನ್ನು ಬಗ್ಗು ಬಡಿದ ಭಾರತಕ್ಕೆ ಸಿಂಹಳೀಯರು ದೊಡ್ಡ ಸವಾಲು ಅಲ್ಲದಿದ್ದರೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಕಾರಣ ಈ ಸರಣಿ ಕುತೂಹಲ ಕೆರಳಿಸಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಹೌದು, ಭಾರತ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭಗೊಳ್ಳಲಿರುವ ಟಿ20 ಸರಣಿಯಲ್ಲಿ ಎರಡು ಸಾರ್ವಕಾಲಿಕ ದಾಖಲೆ ಮಾಡುವ ಅವಕಾಶ ಹೊಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮ ಪಾಕಿಸ್ತಾನದ ಶೋಯೆಬ್ ಮಲಿಕ್ ಹೆಸರಿನಲ್ಲಿರುವ ದಾಖಲೆ ಮುರಿಯಲಿದ್ದಾರೆ. ರೋಹಿತ್ ಪ್ರಸ್ತುತ 122 ಪಂದ್ಯಗಳಲ್ಲಿ ಆಡಿದ್ದು, ಅತೀ ಹೆಚ್ಚು 124 ಟಿ20 ಪಂದ್ಯಗಳನ್ನು ಆಡಿರುವ ಶೋಯೆಬ್ ಮಲಿಕ್ ದಾಖಲೆ ಮುರಿಯಲು 2 ಪಂದ್ಯಗಳಿಂದ ಹಿಂದೆ ಇದ್ದಾರಷ್ಟೆ. ವಿಶ್ವದಲ್ಲೇ 100ಕ್ಕಿಂತ ಹೆಚ್ಚು ಟಿ-20ಗಳನ್ನು ಆಡಿದ 9 ಆಟಗಾರರಲ್ಲಿ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ರೋಹಿತ್ ಶರ್ಮ ಭಾರತದ ಪರ ಅತೀ ಹೆಚ್ಚು ಟಿ-20 ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ 98 ಮತ್ತು ವಿರಾಟ್ ಕೊಹ್ಲಿ 97 ಪಂದ್ಯಗಳನ್ನು ಆಡಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮ 37 ರನ್ ಗಳಿಸಿದರೆ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ನ ಮಾರ್ಟಿನ್ ಗುಪ್ಟಿಲ್ 112 ಪಂದ್ಯಗಳಿಂದ 3299 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 97 ಪಂದ್ಯಗಳಿಂದ 3296 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ 122 ಪಂದ್ಯಗಳಿಂದ 4 ಶತಕ ಸೇರಿದಂತೆ 3263 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಉತ್ತರ ಭಾರತದ ಪ್ರಮುಖ ನಗರವಾಗಿರುವ ಲಖನೌದಲ್ಲಿ ನಡೆಯಲಿರುವ ಮೊದಲ ಪಂದ್ಯದ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಪಂದ್ಯದ ಸಂದರ್ಭದಲ್ಲಿ ವಾತಾವರಣದ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಂಭವವಿದೆ. ಮಳೆಯಾಗುವ ಸಾಧ್ಯತೆ ಇಲ್ಲ. ಆದರೆ ಹಗಲು ವಾತಾವರಣ ಮೋಡದಿಂದ ಕೂಡಿರಲಿದೆ.
ಇನ್ನು ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವಾಗಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇಲ್ಲಿ ಆಡಿರುವ ತಂಡಗಳು 160ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದೆ. ಈ ಪಿಚ್‌ನ ಸ್ವರೂಪ ಇದೇ ರೀತಿ ಇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್ ಮತ್ತು ಅವೇಶ್ ಖಾನ್.
IND vs SL T20: ಸ್ಟಾರ್ ಆಟಗಾರರು ಅಲಭ್ಯ: ಲಂಕಾ ವಿರುದ್ಧದ ಮೊದಲ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
IND vs SL T20: ಇಂದು ಭಾರತ–ಶ್ರೀಲಂಕಾ ಮೊದಲ ಟಿ20: ಗೆಲುವಿನ ಓಟ ಮುಂದುವರೆಸುತ್ತಾ ರೋಹಿತ್ ಪಡೆ?